ದಲಿತರ ಕಡೆಗಣನೆ ವಿರುದ್ಧ ಚುನಾವಣೆ ಬಹಿಷ್ಕಾರದ ಎಚ್ಚರಿಕೆ: ಕುಂದಾಪುರ ದಸಂಸದಿಂದ ರಾಜ್ಯಪಾಲರಿಗೆ ಪತ್ರ

Update: 2023-01-17 15:11 GMT

ಕುಂದಾಪುರ: ಕುಂದಾಪುರ ಮತ್ತು ಬೈಂದೂರು ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಶೇಕಡವಾರು ನಿಧಿಯನ್ನು ದುರ್ಬಳಕೆ ಮಾಡುತ್ತಿರುವ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಹಾಗೂ ಸ್ಥಳಿಯಾಡಳಿತದ ನೀತಿಯನ್ನು ವಿರೋಧಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕುಂದಾಪುರ  ತಾಲೂಕು ಸಂಚಾಲಕ ಕೆ.ಸಿ.ರಾಜು ಬೆಟ್ಟಿನಮನೆ ರಾಜ್ಯಪಾಲರಿಗೆ ಪತ್ರ ಮೂಲಕ ದೂರು ನೀಡಿದ್ದಾರೆ.

ಪರಿಶಿಷ್ಟ ಜಾತಿ ಪಂಗಡಗಳ ಶೇಕಡಾವಾರು ನಿಧಿಯನ್ನು ಹೆಚ್ಚಿನ ಎಲ್ಲಾ ಗ್ರಾಪಂ ಗಳಲ್ಲೂ ಅಧ್ಯಕ್ಷರು ಮತ್ತು ಸದಸ್ಯರ ರಾಜಕೀಯ ಲಾಭಕ್ಕಾಗಿ ತಮಗಿಷ್ಟ ಬಂದಂತೆ ಎಲ್ಲೆಂದರಲ್ಲಿ  ವಿನಯೋಗಿಸುತಿದ್ದು ಈ ಕುರಿತು ಜಿಲ್ಲಾಧಿಕಾರಿಗಳ ಮತ್ತು ತಹಶಿಲ್ದಾರರ ಗಮನಕ್ಕೆ ದಲಿತ ಸಂಘಟನೆ ಹಲವಾರು ಬಾರಿ ಮನವಿ ನೀಡಿದ್ದರೂ ಇಲ್ಲಿನವರೆಗೆ ಯಾವುದೇ ಕ್ರಮ ತೆಗೆದುಕೊಳ್ಳದೇ ದಲಿತ ವಿರೋಧಿ ನೀತಿ ತೋರಿದ್ದಾರೆ.ಕುಂದಾಪುರ ತಾಲೂಕಿನ ಸರ್ವೆ ನಂ 80ರಲ್ಲಿ ಸುಮಾರು 26 ಹೆಕ್ಟೇರ್ ಸರಕಾರಿ ಭೂಮಿ ಇದ್ದು ಇದನ್ನು ಖಾಸಗಿ ಭೂ ಮಾಲಿಕರು ಒತ್ತುವರಿ ಮಾಡಿ ಕೊಂಡು ಅಡಿಕೆ ಗಿಡ ಮತ್ತು ಇತರ ಸಸಿಗಳನ್ನು ನೆಟ್ಟು ಸುತ್ತಲೂ ಕೆಂಪು ಕಲ್ಲಿನ ಪಾಗಾರ ರಚನೆ ಮಾಡಿದ್ದಾರೆ. ಸರಕಾರದ ಭೂಮಿಯಲ್ಲಿ ಖಾಸಗಿ ದೂರವಾಣಿ ಟವರ್ ನಿರ್ಮಿಸಿ ಬಾಡಿಗೆ  ಹಣ ಪಡೆಯುತಿದ್ದ ಕುರಿತು ಸ್ಥಳೀಯರು ಸಂಬಂಧ ಪಟ್ಟ ಕಂದಾಯ ಇಲಾಖೆಗೆ ದೂರು ನೀಡಿದ್ದರೂ ಕೂಡ  ಕಂದಾಯ ಇಲಾಖೆಯ ಅಧಿಕಾರಿಗಳು ಮೌನವಾಗಿದ್ದಾರೆ.

ಕುಂಭಾಶಿ ಗ್ರಾಮದ ಒಟ್ಟು 17 ಹೆಕ್ಟರ್ ಸರಕಾರಿ ಭೂಮಿ ಇದ್ದು ಇದನ್ನು ಖಾಸಗಿ ದೇವಸ್ಥಾನದ ಆಡಳಿತ ಮಂಡಳಿಯು ಕಬಳಿಸಲು ಪ್ರಯತ್ನ ಪಡುತ್ತಿರುವುದು ಸಂಘಟನೆಯ ಗಮನಕ್ಕೆ ಬಂದಿದ್ದು ಇದನ್ನು  ಜಿಲ್ಲಾಧಿಕಾರಿಯ ವರಿಗೆ ಲಿಖಿತವಾಗಿ ದೂರು ನೀಡಿದರೂ ಈವರೆಗೂ ಯಾವುದೇ ಕ್ರಮ ತೆಗೆದು ಕೊಂಡಿಲ್ಲ. ಕೆದೂರು ಗ್ರಾಮದ ಸುಮಾರು 24ಕ್ಕೂ ಹೆಚ್ಚು ಸರಕಾರಿ ಭೂಮಿ ಯಿದ್ದು ಇದನ್ನು ಕೂಡಾ ಖಾಸಗಿ ಭೂ ಮಾಲಿಕರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ರಾಜು ಬೆಟ್ಟಿನಮನೆ ಪತ್ರದಲ್ಲಿ ಆರೋಪಿಸಿದ್ದಾರೆ.

ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಹಾಗು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪ್ರತೀ ಮೂರು ತಿಂಗಳಿಗೊಮ್ಮೆ ಪರಿಶಿಷ್ಟ ಜಾತಿ ಪಂಗಡಗಳ ಸಭೆ ಕರೆಯಬೇಕೆಂದು ಸರಕಾರದ ಸುತ್ತೋಲೆ ಇದ್ದರೂ ಕಳೆದ ಮೂರು ವರ್ಷಗಳಿಂದ ಸಭೆ ಕರೆಯದೆ ದಲಿತ ವಿರೋಧಿ ನೀತಿಯನ್ನು ಅಧಿಕಾರಿಗಳು ಅನುಸರಿಸುತ್ತಿದ್ದಾರೆ. ಇದೆಲ್ಲವನ್ನೂ ಗಮನಿಸಿ ಸಂಘಟನೆಯು ಮಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡದಂತೆ ನಿರ್ಧಾರ ಮಾಡಲು ಅತೀ ಶೀಘ್ರವಾಗಿ ಎರಡು ತಾಲೂಕಿನಲ್ಲಿ ಸಮುದಾಯದ ಸಭೆ ಕರೆಯಲಾಗುವುದು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

Similar News