×
Ad

ಹರಿಕಥೆಯಿಂದ ಆಧ್ಯಾತ್ಮಿಕ ಜಾಗೃತಿ: ಕಮಲಾಕ್ಷ ಕಾಮತ್

Update: 2023-01-17 23:58 IST

ಕಾರ್ಕಳ : ಹರಿಕಥೆಯಿಂದ ಆಧ್ಯಾತ್ಮಿಕ ಜಾಗೃತಿ, ಧರ್ಮ ಜಾಗೃತಿ ಉಂಟಾಗಲಿದೆ ಎಂದು ನಿವೃತ್ತ ಲೆಕ್ಕಪರಿಶೋಧಕ ದಾನಿ ಕೆ. ಕಮಲಾಕ್ಷ ಕಾಮತ್ ತಿಳಿಸಿದರು. 

ಇಲ್ಲಿನ ಅನಂತಪದ್ಮನಾಭ ದೇವಸ್ಥಾನದಲ್ಲಿ ದೇವಸ್ಥಾನದ ಭಕ್ತವೃಂದ ಹಾಗೂ ಹರಿಕಥಾ ಸಪ್ತಾಹ ಸಮಿತಿ ಸಹಯೋಗದಲ್ಲಿ ಆಯೋಜಿಸಿದ ಹರಿಕಥಾ ಸಪ್ತಾಹ ಸಮಾರಂಭದಲ್ಲಿ ಮಾತನಾಡಿದ ಅವರು, ಹರಿಕಥೆಯಲ್ಲಿ ನಮ್ಮ ಜೀವನ ಬೆಳಗಿಸುವ ಅಮೂಲ್ಯ ಮೌಲ್ಯಗಳನ್ನು ತಿಳಿಸಲಾಗುತ್ತದೆ. ರಾಮಾಯಣ, ಮಹಾಭಾರತ, ಪುರಾಣ, ಉಪನಿಷತ್ತು, ಭಗವದ್ಗೀತೆ ಮೊದಲಾದ ಕೃತಿಗಳಲ್ಲಿನ ಪಾತ್ರ, ತತ್ವಗಳನ್ನು ತಿಳಿಸಲಾಗುತ್ತದೆ. ವೈವಿಧ್ಯಮಯ ಆದರ್ಶ ಪಾತ್ರಗಳ ಮೂಲಕ ಪರೋಪಕಾರ, ಸತ್ಯಪರಿಪಾಲನೆ, ಮಾತಾಪಿತರ ಸೇವೆ, ಅಹಿಂಸೆ, ತ್ಯಾಗ, ಸಹೋದರ ಪ್ರೇಮ, ನಮ್ರತೆ, ತಾಳ್ಮೆ ಮೊದಲಾದವುಗಳನ್ನು ಅಳವಡಿಸಿಕೊಳ್ಳಲು ಪ್ರೇರಣೆ ದೊರೆಯುತ್ತದೆ. ನಮ್ಮ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ತೊಡಗವುದನ್ನು ಕಡಿಮೆಗೊಳಿಸಿ ಹರಿಕಥೆಗಳನ್ನು ಕೇಳಿ ಉತ್ತಮ ಸಂಸ್ಕಾರ ಹೊಂದಲು ಸಾಧ್ಯ. ಇದರಿಂದ ನಾಡಿನ ಪ್ರಗತಿ ಸಾಧ್ಯ ಎಂದರು.

ಅತಿಥಿ ಅಂತರರಾಷ್ಟ್ರೀಯ ಹಣಕಾಸು ಸಲಹೆಗಾರ, ಕಾರ್ಕಳ ರೋಟರಿ ಕ್ಲಬ್‌ನ ಅಧ್ಯಕ್ಷ ವೈ.ಮೋಹನ್ ಶೆಣೈ ಮಾತನಾಡಿ, ಹರಿಕಥೆ ಆರಂಭವಾದ ಸಂದರ್ಭ ಹಾಗೂ ಅದರ ಪ್ರಸರಣದ ವಿವರ ತಿಳಿಸಿದರು.  

ಮೂಡಬಿದಿರೆ ಕೋಆಪ್‌ರೇಟಿವ್ ಬ್ಯಾಂಕಿನ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ ಭಟ್ ಶುಭಹಾರೈಸಿದರು.

ಅಧ್ಯಕ್ಷತೆ ವಹಿಸಿದ ಕಾರ್ಕಳ ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಸೌಜನ್ಯ ಉಪಾಧ್ಯಾಯ ಮಾತನಾಡಿ ದೇವಾಲಯದಲ್ಲಿ ಧಾರ್ಮಿಕ ಹಾಗೂ ಅಭಿವೃದ್ಧಿಪರ ಕಾರ್ಯಗಳಿಂದ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಜಾಗೃತಿಗೊಳಿಸಲು ಸಾಧ್ಯ ಎಂದರು.

ಅರುಣಾ ಶೆಣೈ, ಉಪನ್ಯಾಸಕ ವೆಂಕಟರಾಜ್ ಭಟ್, ವೈ.ಪ್ರಶಾಂತ್ ಭಟ್ ಉಪಸ್ಥಿತರಿದ್ದರು.

ಸಂಚಾಲಕ ವೈ.ಅನಂತಪದ್ಮನಾಭ ಭಟ್ ಸ್ವಾಗತಿಸಿದರು. ನಿವೃತ್ತ ಪ್ರಾಂಶುಪಾಲ ಸಿದ್ಧಾಪುರ ವಾಸುದೇವ ಭಟ್ ಕಾರ್ಯಕ್ರಮ ನಿರೂಪಿಸಿದರು. ಕಲಾವಿದ ಪ್ರದೀಪ ಉಪಾಧ್ಯಾಯ ವಂದಿಸಿದರು. ನಂತರ ಶಂ.ನಾ.ಅಡಿಗ ಕುಂಬ್ಳೆ ಅವರಿಂದ ‘ಭೂ ಕೈಲಾಸ’ ಎಂಬ ಹರಿಕಥೆ ನಡೆಯಿತು.

Similar News