ಏಕದಿನ ರ‍್ಯಾಂಕಿಂಗ್: ಅಗ್ರ-5ರಲ್ಲಿ ಕೊಹ್ಲಿ, 3ನೇ ಸ್ಥಾನಕ್ಕೇರಿದ ಸಿರಾಜ್

Update: 2023-01-18 16:09 GMT

  ದುಬೈ, ಜ.18: ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಸರಣಿಯಲ್ಲಿ ಎರಡು ಶತಕ ಸಹಿತ ಒಟ್ಟು 283 ರನ್ ಗಳಿಸಿ ಭರ್ಜರಿ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ ಹಾಗೂ ಇದೇ ಸರಣಿಯಲ್ಲಿ ಒಟ್ಟು 9 ವಿಕೆಟ್‌ಗಳನ್ನು ಪಡೆದಿದ್ದ ಮುಹಮ್ಮದ್ ಸಿರಾಜ್ ಬುಧವಾರ ಬಿಡುಗಡೆಯಾದ ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ಭಡ್ತಿ ಪಡೆದಿದ್ದಾರೆ.

ಕೊಹ್ಲಿ ಇದೀಗ 750 ಪಾಯಿಂಟ್ಸ್ ಗಳಿಸಿ ಅಗ್ರ-5ರಲ್ಲಿ ಸ್ಥಾನ ಪಡೆದಿದ್ದು, 2ನೇ ಸ್ಥಾನದಲ್ಲಿರುವ ರಾಸ್ಸಿ ವಾಂಡರ್ ಡುಸೆನ್(766)ಹಾಗೂ 3ನೇ ಸ್ಥಾನದಲ್ಲಿರುವ ಕ್ವಿಂಟನ್ ಡಿಕಾಕ್‌ಗೆ(759)ಪೈಪೋಟಿ ನೀಡುತ್ತಿದ್ದಾರೆ. ಪಾಕಿಸ್ತಾನದ ಬಾಬರ್ ಆಝಂ(887)ನಂ.1 ಸ್ಥಾನ ಉಳಿಸಿಕೊಂಡಿದ್ದಾರೆ.

ಕೊಹ್ಲಿ ಸಹ ಆಟಗಾರರಾದ ಶುಭಮನ್ ಗಿಲ್(26ನೇ ಸ್ಥಾನ), ಮುಹಮ್ಮದ್ ಸಿರಾಜ್ ಹಾಗೂ ಕುಲದೀಪ್ ಯಾದವ್ ರ್ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ್ದಾರೆ.

15 ಸ್ಥಾನ ಭಡ್ತಿ ಪಡೆದಿರುವ ಸಿರಾಜ್ ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ 3ನೇ ಸ್ಥಾನಕ್ಕೇರಿದ್ದಾರೆ. ಲಂಕಾ ವಿರುದ್ಧ 5 ವಿಕೆಟ್ ಪಡೆದಿರುವ ಯಾದವ್ 7 ಸ್ಥಾನ ಭಡ್ತಿ ಪಡೆದು 21ನೇ ರ್ಯಾಂಕಿಗೆ ತಲುಪಿದ್ದಾರೆ.

ಲಂಕಾ ವಿರುದ್ಧ ಸರಣಿಯಲ್ಲಿ ಗರಿಷ್ಠ ವಿಕೆಟ್ ಪಡೆದಿದ್ದ್ದ ಸಿರಾಜ್ ಜೀವನಶ್ರೇಷ್ಠ ರೇಟಿಂಗ್ಸ್(685 ಪಾಯಿಂಟ್ಸ್)ಪಡೆದಿದ್ದಾರೆ. ಟ್ರೆಂಟ್ ಬೌಲ್ಟ್(730) ಹಾಗೂ ಜೋಶ್ ಹೇಝಲ್‌ವುಡ್‌ಗೆ(727) ಸ್ಪರ್ಧೆ ನೀಡುತ್ತಿದ್ದಾರೆ.
 

Similar News