ಜಮ್ಮು-ಕಾಶ್ಮೀರ ತಲುಪಿದ ಭಾರತ್ ಜೋಡೊ ಯಾತ್ರೆ: ಕಥುವಾ ಅತ್ಯಾಚಾರಿಗಳನ್ನು ಬೆಂಬಲಿಸಿದ್ದ ಲಾಲ್ ಸಿಂಗ್ ಭಾಗಿ

Update: 2023-01-20 05:49 GMT

ಶ್ರೀನಗರ: ರಾಹುಲ್ ಗಾಂಧಿ (Rahul Gandhi) ನೇತೃತ್ವದ ಭಾರತ್ ಜೋಡೋ ಯಾತ್ರೆ (Bharat Jodo Yatra) ಗುರುವಾರ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರವೇಶಿಸಿದೆ. ಪಂಜಾಬ್ ನ ಕಾಂಗ್ರೆಸ್ (Congress) ಘಟಕವು ಜಮ್ಮು -ಕಾಶ್ಮೀರ ವಿಭಾಗದ ನಾಯಕನಿಗೆ ಪಕ್ಷದ ಧ್ವಜವನ್ನು ಹಸ್ತಾಂತರಿಸಿದೆ.

ನಾಯಕರಾದ ಜೈರಾಮ್ ರಮೇಶ್, ಅಶೋಕ್ ಗೆಹ್ಲೋಟ್, ದಿಗ್ವಿಜಯ್ ಸಿಂಗ್, ಫಾರೂಕ್ ಅಬ್ದುಲ್ಲಾ, ಶಿವಸೇನಾ ನಾಯಕ ಸಂಜಯ್ ರಾವುತ್, ಕಥುವಾ ಪ್ರಕರಣದ ಆರೋಪಿಗಳನ್ನು ಬೆಂಬಲಿಸಿದ್ದ ಡೋಗ್ರಾ ಸ್ವಾಭಿಮಾನ್ ಸಂಘಟನೆ ಪಕ್ಷದ ನಾಯಕ ಹಾಗೂ ಮಾಜಿ ಸಚಿವ ಲಾಲ್ ಸಿಂಗ್, ಅವಾಮಿ ನ್ಯಾಶನಲ್ ಕಾನ್ಫರೆನ್ಸ್ ನಾಯಕ ಮುಝಾಫರ್ ಶಾ ಸೇರಿದಂತೆ ಪಕ್ಷದ ಹಿರಿಯ ನಾಯಕರು ರಾಹುಲ್ ಗಾಂಧಿ ಅವರನ್ನು ಕೇಂದ್ರಾಡಳಿತ ಪ್ರದೇಶಕ್ಕೆ ಸ್ವಾಗತಿಸಿದರು.

ಲಾಲ್ ಸಿಂಗ್ ತಡವಾಗಿ ಬಂದಿದ್ದರಿಂದ ವೇದಿಕೆಯಲ್ಲಿ ಹಾಜರಿರಲಿಲ್ಲ ಹಾಗೂ  ಸಮಾರಂಭದುದ್ದಕ್ಕೂ ಜನರೊಟ್ಟಿಗೆ  ನಿಂತಿರುವುದು ಕಂಡುಬಂದಿತು. ಕಾಂಗ್ರೆಸ್  ಪಕ್ಷ ಆಗಮಿಸಿದ ನಾಯಕರಿಗೆ ಕೃತಜ್ಞತೆ ಸಲ್ಲಿಸುವ ಸಂದರ್ಭದಲ್ಲಿ ಲಾಲ್ ಸಿಂಗ್ ಹೆಸರನ್ನು ಉಲ್ಲೇಖಿಸಲಿಲ್ಲ.

ಲಾಲ್ ಸಿಂಗ್ 2018ರಲ್ಲಿ ಜಮ್ಮುವಿನ ಕಥುವಾ ಗ್ರಾಮದಲ್ಲಿ 8 ವರ್ಷದ ಮಗುವಿನ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಆರೋಪಿಯನ್ನು ಬೆಂಬಲಿಸಿ ಮೆರವಣಿಗೆ ನಡೆಸುವ ಮೂಲಕ ವಿವಾದಕ್ಕೆ ಸಿಲುಕಿದ್ದ. ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ವಿಚಾರಣೆ ನಡೆಯದಂತೆ ಅಡ್ಡಿಪಡಿಸಿದ್ದ ಹಾಗೂ ಸಂತ್ರಸ್ತರ ಪರವಾದ ವಕೀಲರಿಗೆ ಬೆದರಿಕೆ ಹಾಕಿದ್ದ.

2014ಕ್ಕೆ ಮೊದಲು ಕಾಂಗ್ರೆಸ್ಸಿನಲ್ಲಿದ್ದ ಲಾಲ್ ಸಿಂಗ್  2014 ರಲ್ಲಿ ಬಿಜೆಪಿ ಸೇರಿ ಬಿಜೆಪಿ--ಪಿಡಿಪಿ ಮೈತ್ರಿಕೂಟ ಜಮ್ಮು-ಕಾಶ್ಮೀರದಲ್ಲಿ ಅಧಿಕಾರಕ್ಕೆ ಬಂದಾಗ  ಮಂತ್ರಿಯಾಗಿದ್ದ.

2019 ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಲಿಲ್ಲವೆಂಬ ಕಾರಣಕ್ಕೆ ಬಿಜೆಪಿಯಿಂದ ಹೊರಬಿದ್ದ ಲಾಲ್ ಸಿಂಗ್,  ಡೋಗ್ರಾ ಸ್ವಾಭಿಮಾನ ಸಂಘಟನೆ ಎಂಬ ಸಂಸ್ಥೆಯನ್ನು ಕಟ್ಟಿಕೊಂಡು ರಾಜಕಾರಣ ಮುಂದುವರೆಸಿದ್ದಾನೆ.

Similar News