ಕುಸ್ತಿಪಟುಗಳ ಬೇಡಿಕೆಗಳನ್ನು ಈಡೇರಿಸುವುದಾಗಿ ಕೇಂದ್ರ ಸರ್ಕಾರ ಭರವಸೆ: ಧರಣಿ ಅಂತ್ಯ

Update: 2023-01-21 05:39 GMT

ಹೊಸದಿಲ್ಲಿ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತದ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‍ಐ) ಅಧ್ಯಕ್ಷ ಬೃಜ್‍ಭೂಷಣ್ ಶರಣ್ ಸಿಂಗ್ ತಮ್ಮ ರಾಜೀನಾಮೆ ನೀಡುವುದೂ ಸೇರಿದಂತೆ ಕುಸ್ತಿಪಟುಗಳ ಬೇಡಿಕೆಗಳನ್ನು ಈಡೇರಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕುಸ್ತಿಪಟುಗಳು ಎರಡು ದಿನಗಳಿಂದ ನಡೆಸುತ್ತಿದ್ದ ಧರಣಿಯನ್ನು ಶುಕ್ರವಾರ ರಾತ್ರಿ ಅಂತ್ಯಗೊಳಿಸಿದ್ದಾರೆ.

ವಿನೇಶ್ ಫೋಗತ್, ಬಜರಂಗ್ ಪೂನಿಯಾ, ಸಾಕ್ಷಿ ಮಲಿಕ್ ಮತ್ತು ರವಿ ದಹಿಯಾ ಸೇರಿದಂತೆ ಪ್ರತಿಭಟನಾನಿರತ ಕುಸ್ತಿಪಟುಗಳು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರ ಜತೆ ನಡೆಸಿದ ಎರಡನೇ ಸುತ್ತಿನ ಮಾತುಕತೆ ಬಳಿಕ ಧರಣಿ ಅಂತ್ಯಗೊಳಿಸುವ ನಿರ್ಧಾರ ಪ್ರಕಟಿಸಿದರು.
ದೇಶದ ಪ್ರಮುಖ ಕುಸ್ತಿಪಟುಗಳು ಡಬ್ಲ್ಯುಎಫ್‍ಐ ಅಧ್ಯಕ್ಷರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದು, ಭ್ರಷ್ಟಾಚಾರ ಆರೋಪವನ್ನೂ ಮಾಡಿದ್ದರು.

"ಮೇಲುಸ್ತುವಾರಿ ಸಮಿತಿಯನ್ನು ರಚಿಸಲು ನಿರ್ಧರಿಸಲಾಗಿದೆ. ಈ ಸಮಿತಿ ಸದಸ್ಯರ ಹೆಸರುಗಳನ್ನು ನಾಳೆ ಪ್ರಕಟಿಸಲಾಗುತ್ತದೆ. ಸಮಿತಿ ನಾಲ್ಕು ವಾರಗಳಲ್ಲಿ ತನಿಖೆ ಪೂರ್ಣಗೊಳಿಸಲಿದೆ. ಇದು ಹಣಕಾಸು ಅವ್ಯವಹಾರ ಮತ್ತು ಲೈಂಗಿಕ ಕಿರುಕುಳ ಸೇರಿದಂತೆ ಎಲ್ಲ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಲಿದೆ" ಎಂದು ಅನುರಾಗ್ ಠಾಕೂರ್ ಮ್ಯಾರಥಾನ್ ಸಭೆ ಬಳಿಕ ವಿವರಿಸಿದರು.

ತನಿಖೆ ಪೂರ್ಣಗೊಳ್ಳುವವರಗೆ ಸಿಂಗ್ ಅವರು ಹುದ್ದೆಯಿಂದ ಹೊರಗಿದ್ದು, ತನಿಖೆಗೆ ಸಹಕರಿಸಲಿದ್ದಾರೆ. ಮೇಲುಸ್ತುವಾರಿ ಸಮಿತಿ ಡಬ್ಲ್ಯುಎಫ್‍ಐನ ದೈನಂದಿನ ವ್ಯವಹಾರಗಳನ್ನು ನಿರ್ವಹಿಸಲಿದೆ ಎಂದು ಸ್ಪಷ್ಟಪಡಿಸಿದರು.

Similar News