ಬಾಂಬ್ ಬೆದರಿಕೆ ಹಿನ್ನೆಲೆ: ಮಾಸ್ಕೋದಿಂದ ಗೋವಾಕ್ಕೆ ಹೊರಟಿದ್ದ ವಿಮಾನ ಉಜ್ಬೇಕಿಸ್ತಾನಕ್ಕೆ

Update: 2023-01-21 06:27 GMT

ಪಣಜಿ: 240 ಪ್ರಯಾಣಿಕರೊಂದಿಗೆ ರಷ್ಯಾದ ರಾಜಧಾನಿ ಮಾಸ್ಕೋದಿಂದ ಗೋವಾಕ್ಕೆ ಹೊರಟಿದ್ದ ಚಾರ್ಟರ್ಡ್ ವಿಮಾನವನ್ನು ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಶನಿವಾರ ಮುಂಜಾನೆ ಉಜ್ಬೇಕಿಸ್ತಾನಕ್ಕೆ ತಿರುಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಮಾನವು ಗೋವಾದ ಡಾಬೋಲಿಮ್ ವಿಮಾನ ನಿಲ್ದಾಣದಲ್ಲಿ ಮುಂಜಾನೆ 4:15 ಕ್ಕೆ ಇಳಿಯಬೇಕಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಅಝುರ್ ಏರ್ ನಿರ್ವಹಿಸುತ್ತಿದ್ದ ವಿಮಾನ (AZV2463) ಭಾರತೀಯ ವಾಯುಪ್ರದೇಶವನ್ನು ಪ್ರವೇಶಿಸುವ ಮೊದಲು ಅದನ್ನು ಉಜ್ಬೇಕಿಸ್ತಾನದತ್ತ  ತಿರುಗಿಸಲಾಯಿತು ಎಂದು ಅವರು ಪಿಟಿಐಗೆ ತಿಳಿಸಿದರು.

"ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ಉಲ್ಲೇಖಿಸಿರುವ ಇಮೇಲ್  ಅನ್ನು ಡಾಬೋಲಿಮ್ ವಿಮಾನ ನಿಲ್ದಾಣದ ನಿರ್ದೇಶಕರು  12:30 ಕ್ಕೆ ಸ್ವೀಕರಿಸಿದ ನಂತರ ವಿಮಾನವನ್ನು ಬೇರೆಡೆಗೆ ತಿರುಗಿಸಲಾಗಿದೆ" ಎಂದು ಅಧಿಕಾರಿ ಹೇಳಿದರು.

ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಮಾಸ್ಕೋದಿಂದ ಗೋವಾಕ್ಕೆ ಬರುತ್ತಿದ್ದ ವಿಮಾನವನ್ನು ಗುಜರಾತ್‌ನ ಜಾಮ್‌ನಗರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಸುಮಾರು ಎರಡು ವಾರಗಳ ನಂತರ ಈ ಘಟನೆ ನಡೆದಿದೆ.

Similar News