ಮುಂದುವರಿದ ಗೆಹ್ಲೋಟ್-ಪೈಲಟ್ ವಾಕ್ಸಮರ: ಈ ಬಾರಿ ಪೈಲಟ್ ಸರದಿ..

Update: 2023-01-21 06:27 GMT

ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಹಾಗೂ ಅವರ ಪ್ರತಿಸ್ಪರ್ಧಿ ನಾಯಕ ಸಚಿನ್ ಪೈಲಟ್ (Sachin Pilot) ನಡುವಿನ ಗುದ್ದಾಟ ಮುಂದುವರೆದಿದ್ದು, ಶನಿವಾರ ಆಯೋಜಿಸಲಾಗಿದ್ದ ಸಮಾವೇಶವನ್ನುದ್ದೇಶಿಸಿ, "ರಾಜಕೀಯದಲ್ಲಿ ಸಂಯಮ ಕಾಪಾಡಿಕೊಳ್ಳಬೇಕಾದುದು ತುಂಬಾ ಮುಖ್ಯ. ನೀವು ಗೌರವ ನೀಡಿದರೆ ಮಾತ್ರ ಅದನ್ನು ಮರಳಿ ಪಡೆಯುತ್ತೀರಿ" ಎಂದು ಗೆಹ್ಲೋಟ್‌ಗೆ ತಿರುಗೇಟು ನೀಡಿದ್ದಾರೆ. ಆದರೆ, ಈ ಸಂದರ್ಭದಲ್ಲಿ ಅವರು ಅಶೋಕ್ ಗೆಹ್ಲೋಟ್‌ರ ಹೆಸರನ್ನು ಪ್ರಸ್ತಾಪಿಸಿಲ್ಲ ಎಂದು ndtv.com ವರದಿ ಮಾಡಿದೆ.

ಇದಕ್ಕೂ ಮುನ್ನ ಸಭೆಯೊಂದರಲ್ಲಿ ಭಾಗವಹಿಸಿ ಮಾತನಾಡಿದ್ದ ಅಶೋಕ್ ಗೆಹ್ಲೋಟ್, ಯಾರ ಹೆಸರನ್ನೂ ಉಲ್ಲೇಖಿಸದೆ "ನಮ್ಮ ಪಕ್ಷವನ್ನು ದೊಡ್ಡ ಕೊರೋನ ಪ್ರವೇಶಿಸಿದೆ" ಎಂದು ಪರೋಕ್ಷವಾಗಿ ಸಚಿನ್ ಪೈಲಟ್ ವಿರುದ್ಧ ಕಿಡಿ ಕಾರಿದ್ದರು. ಆ ಸಭೆಯಲ್ಲಿ ಅವರು ಸಚಿನ್ ಪೈಲಟ್‌ರ ಹೆಸರನ್ನು ನೇರವಾಗಿ ಪ್ರಸ್ತಾಪಿಸದಿದ್ದರೂ, ಅಶೋಕ್ ಗೆಹ್ಲೋಟ್ ಮಾತುಗಳು ಸಚಿನ್ ಪೈಲಟ್‌ರನ್ನೇ ಉದ್ದೇಶಿಸಿದ್ದಿದ್ದು ಸ್ಪಷ್ಟವಾಗಿತ್ತು. ಇದಕ್ಕೂ ಮುನ್ನ ಅವರು ಉಪ ಮುಖ್ಯಮಂತ್ರಿಯಾಗಿದ್ದ ಸಚಿನ್ ಪೈಲಟ್‌ರನ್ನು ದ್ರೋಹಿ, ಅಯೋಗ್ಯ ಎಂದು ಟೀಕಿಸಿದ್ದರು.

2020ರಲ್ಲಿ ವಿಶ್ವಾದ್ಯಂತ ಕೊರೊನಾ ಸಾಂಕ್ರಾಮಿಕ ವ್ಯಾಪಿಸಿದಾಗ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡಾಯ ಸಾರಿದ್ದ ಸಚಿನ್ ಪೈಲಟ್, ಗಾಂಧಿ ಕುಟುಂಬದ ಸದಸ್ಯರು ತನ್ನನ್ನು ಭೇಟಿಯಾಗುವವರೆಗೂ ದಿಲ್ಲಿಯಲ್ಲಿ ಬೀಡು ಬಿಟ್ಟಿದ್ದರು.

ರಾಹುಲ್ ಗಾಂಧಿ ನೇತೃತ್ವದ 'ಭಾರತ್ ಜೋಡೊ' ಯಾತ್ರೆ ರಾಜಸ್ಥಾನವನ್ನು ಹಾದು ಹೋದಾಗ ಒಗ್ಗಟ್ಟು ಪ್ರದರ್ಶಿಸಿದ್ದ ರಾಜ್ಯ ಕಾಂಗ್ರೆಸ್ ನಾಯಕರ ಒಡಕು ಚುನಾವಣಾ ಕಾಲದಲ್ಲಿ ಮತ್ತೆ ಬಯಲಿಗೆ ಬಂದಿದೆ‌. ಕಾಂಗ್ರೆಸ್ ಆಡಳಿತ ನಡೆಸುತ್ತಿರುವ ಕೆಲವೇ ರಾಜ್ಯಗಳ ಪೈಕಿ ರಾಜಸ್ಥಾನ ಕೂಡಾ ಒಂದಾಗಿದೆ.

ಗೆಹ್ಲೋಟ್-ಪೈಲಟ್ ನಡುವಿನ ಬಿರುಕು ಮುಚ್ಚಿಕೊಳ್ಳುವ ಯಾವ ಸಾಧ್ಯತೆಯೂ ಇಲ್ಲವಾಗಿದ್ದು, ಭಾರತ್ ಜೋಡೊ ಯಾತ್ರೆ ರಾಜಸ್ಥಾನದಿಂದ ನಿರ್ಗಮಿಸುತ್ತಿದ್ದಂತೆಯೇ ಸಚಿನ್ ಪೈಲಟ್ ಏಕಾಂಗಿಯಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಪ್ರಚಾರದಿಂದ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ಲಾಭಕ್ಕಿಂತ ನಷ್ಟ ಆಗುವ ಸಾಧ್ಯತೆಯೇ ಢಾಳಾಗಿ ಗೋಚರಿಸುತ್ತಿದೆ.

ಇದನ್ನೂ ಓದಿ: ಬಾಂಬ್ ಬೆದರಿಕೆ ಹಿನ್ನೆಲೆ: ಮಾಸ್ಕೋದಿಂದ ಗೋವಾಕ್ಕೆ ಹೊರಟಿದ್ದ ವಿಮಾನ ಉಜ್ಬೇಕಿಸ್ತಾನಕ್ಕೆ

Similar News