×
Ad

ದಾರ್ಶನಿಕರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು: ಅಪರ ಜಿಲ್ಲಾಧಿಕಾರಿ

Update: 2023-01-21 21:01 IST

ಉಡುಪಿ: ಮಹನೀಯರು, ದಾರ್ಶನಿಕರ ತತ್ವ ಆದರ್ಶಗಳು ಕೇವಲ ಒಂದು ವರ್ಗಕ್ಕೆ ಸೀುತವಾಗಿರದೆ, ಇಡೀ ಮನುಕುಲಕ್ಕೆ ಅನ್ವಯ ವಾಗುತ್ತದೆ. ಇವುಗಳನ್ನು ಎಲ್ಲಾ ವರ್ಗದ ಜನರು ಪಾಲಿಸಬಹುದಾಗಿದ್ದು, ಅದರಲ್ಲೂ ವಿದ್ಯಾರ್ಥಿಗಳು ವಚನಕಾರರ ಸಂದೇಶವನ್ನು ತಮ್ಮ ಬದುಕಿನಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್.  ಹೇಳಿದ್ದಾರೆ.

ಶನಿವಾರ ಉಡುಪಿಯ ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ ಹಾಗೂ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ವತಿಯಿಂದ ನಡೆದ ಶಿವಯೋಗಿ ಸಿದ್ಧರಾಮ, ಮಹಾಯೋಗಿ ವೇಮನ ಹಾಗೂ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ಶ್ರೀಕಾಂತ್ ಸಿದ್ಧಾಪುರ, ಅಂಬಿಗರ ಚೌಡಯ್ಯ, ಸಿದ್ಧರಾಮೇಶ್ವರ, ಬಸವಣ್ಣ ಅವರ ಸಮಕಾಲೀನರಾಗಿದ್ದವರು. ಶೋಷಿತ ಜನಾಂಗದಲ್ಲಿ ಜನಿಸಿದ ಅಂಬಿಗರ ಚೌಡಯ್ಯ ಮೇಲ್ವರ್ಗದ ಶೋಷಣೆ ವಿರುದ್ಧ ಧ್ವನಿಯೆತ್ತಿದ್ದರು. ಜ್ಞಾನ ಸಂಪಾದನೆಯಿಂದ ಶೋಷಣೆ ತಡೆ ಸಾಧ್ಯ ಎಂದರಿತ ಚೌಡಯ್ಯ, ಮೌಡ್ಯ ವಿರುದ್ಧ ಅತ್ಯಂತ ತೀಕ್ಷ್ಮ ವಚನಗಳ ಮೂಲಕ ಸಮಾಜದಲ್ಲಿ ಅರಿವು ಮೂಡಿಸುತ್ತಿದ್ದರು ಎಂದು ಹೇಳಿದರು.

ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ನಾಗಭೂಷಣ ಶೇಟ್, ಅಂಬಿಗರ ಚೌಡಯ್ಯ ಸಮುದಾಯದ ವಿಜಯ ಗಂಗಾಪುತ್ರ ಉಪಸ್ಥಿತರಿದ್ದರು. ರಾಜೇಶ್ ಶ್ಯಾನುಬೋಗ್ ತಂಡದಿಂದ ಗೀತಗಾಯನ ಕಾರ್ಯಕ್ರಮ ನಡೆಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಮುಖ್ಯೋಪಾಧ್ಯಾಯಿನಿ ನಿರ್ಮಲಾ ವಂದಿಸಿದರು. ಶಿಕ್ಷಕಿ ತಾರಾಮತಿ ಕಾರ್ಯಕ್ರಮ ನಿರೂಪಿಸಿದರು.

Similar News