ಆಸ್ಪತ್ರೆಯಲ್ಲಿ ಆಘಾತಕಾರಿ ಘಟನೆ: ಎರಡು ಶವಗಳ ತಲಾ ಒಂದು ಕಣ್ಣು ಮಾಯ; ಇಲಿಗಳ ಕೆಲಸ ಎಂದ ಅಧಿಕಾರಿಗಳು

Update: 2023-01-21 17:13 GMT

ಭೋಪಾಲ,ಜ.21: ವೈದ್ಯಕೀಯ ನಿರ್ಲಕ್ಷದ ಆಘಾತಕಾರಿ ಪ್ರಕರಣವೊಂದರಲ್ಲಿ ಮಧ್ಯಪ್ರದೇಶದ ಸಾಗರ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿರಿಸಿದ್ದ ಎರಡು ಶವಗಳ ತಲಾ ಒಂದು ಕಣ್ಣು ಮಾಯವಾಗಿದ್ದು,ಜ.4ರಿಂದ ಜ.19ರ ನಡುವಿನ 15 ದಿನಗಳಲ್ಲಿ ಇವೆರಡೂ ಘಟನೆಗಳು ನಡೆದಿವೆ. ಇಲಿಗಳು ಕಣ್ಣುಗಳನ್ನು ಕಡಿದಿರುವ ಶಂಕೆಯಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ.

ಮೊದಲ ಪ್ರಕರಣದಲ್ಲಿ ಆಮೆಟ್ ಗ್ರಾಮದ ತನ್ನ ಹೊಲದಲ್ಲಿ ಪ್ರಜ್ಞಾಹೀನನಾಗಿ ಬಿದ್ದಿದ್ದ ಮೋತಿಲಾಲ ಗೌಂಡ್ (32) ಎಂಬಾತ ಆಸ್ಪತ್ರೆಗೆ ತರುವ ಮುನ್ನವೇ ಮೃತಪಟ್ಟಿದ್ದ. ಮರುದಿನ ಬೆಳಿಗ್ಗೆ ಮರಣೋತ್ತರ ಪರೀಕ್ಷೆ ನಡೆಸಲು ವೈದ್ಯರು ಬಂದಾಗ ಶವದ ಒಂದು ಕಣ್ಣು ಮಾಯವಾಗಿತ್ತು. ಆಗ ಶವಾಗಾರದಲ್ಲಿಯ ಡೀಪ್ ಫ್ರೀಝರ್ ಕೆಲಸ ಮಾಡುತ್ತಿರಲಿಲ್ಲ,ಹೀಗಾಗಿ ಶವವನ್ನು ಟೇಬಲ್ ಮೇಲಿರಿಸಲಾಗಿತ್ತು.

ಜ.16ರಂದು ರಮೇಶ್ ಅಹಿರ್ವಾರ್ (25) ಎಂಬಾತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು,ಮರುದಿನ ರಾತ್ರಿ ಆತ ಮೃತಪಟ್ಟಿದ್ದ. ಅದು ಮೆಡಿಕೋ-ಲೀಗಲ್ ಪ್ರಕರಣವಾಗಿದ್ದು,ಜ.19ರಂದು ಪೊಲೀಸರು ಪರಿಶೀಲನೆಗೆ ಬಂದಾಗ ಶವವನ್ನು ಡೀಪ್ ಫ್ರೀಝರ್ನಿಂದ ಹೊರಕ್ಕೆ ತೆಗೆಯಲಾಗಿತ್ತು ಮತ್ತು ಶವದ ಒಂದು ಕಣ್ಣು ಮಾಯವಾಗಿತ್ತು.

ಪ್ರಾಥಮಿಕ ತನಿಖೆಯು ಇಲಿಗಳು ಕಣ್ಣನ್ನು ಕಡಿದಿರುವ ಸಾಧ್ಯತೆಯನ್ನು ಸೂಚಿಸಿದೆ. ‌

ಶವಾಗಾರದಲ್ಲಿಯ ಸಿಸಿ ಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ. ವಿವರವಾದ ತನಿಖೆಯ ಬಳಿಕ ಮುಂದಿನ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಸ್ಪತ್ರೆಯ ನಿವಾಸಿ ವೈದ್ಯಕೀಯ ಅಧಿಕಾರಿ ಡಾ.ಅಭಿಷೇಕ ಠಾಕೂರ್ ಸುದ್ದಿಗಾರರಿಗೆ ತಿಳಿಸಿದರು.

ನಾಲ್ವರು ವೈದ್ಯಾಧಿಕಾರಿಗಳಿಗೆ ನೋಟಿಸ್ ಗಳನ್ನು ಜಾರಿಗೊಳಿಸಿರುವ ಮುಖ್ಯ ವೈದ್ಯಾಧಿಕಾರಿ ಡಾ.ಮಮತಾ ತಿಮೋರಿ ಅವರು,48 ಗಂಟೆಗಳಲ್ಲಿ ಉತ್ತರಿಸುವಂತೆ ಸೂಚಿಸಿದ್ದಾರೆ.

Similar News