ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಕ್ಲಿಫ್ ಡೈವಿಂಗ್, ಸ್ಲ್ಯಾಕ್ ಲೈನ್, ಸ್ಕೂಬಾ ಡೈವಿಂಗ್ ಆಕರ್ಷಣೆ
ಮಲ್ಪೆ: ಉಡುಪಿ ಜಿಲ್ಲೆಯ ರಜತ ಮಹೋತ್ಸವದ ಪ್ರಯುಕ್ತ ಈ ಬಾರಿ ಹಮ್ಮಿಕೊಳಳಲಾಗಿರುವ ಮಲ್ಪೆ ಬೀಚ್ ಉತ್ಸವದಲ್ಲಿ ಕರ್ನಾಟಕ ರಾಜ್ಯ ದಲ್ಲಿಯೇ ಮೊದಲ ಬಾರಿಗೆ ಹೊಸ ರೀತಿಯ ವಾಟರ್ ಸ್ಪೋರ್ಟ್ಸ್‌ಗಳನ್ನು ಪರಿಚಯಿಸಲಾಗಿದೆ. ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಈ ಬಾರಿ ಆರಂಭಿಸ ಲಾಗಿರುವ ಹೆಚ್ಚು ಬೇಡಿಕೆಯ ಕ್ರೀಡೆಗಳಾದ ಕ್ಲಿಫ್ ಡೈವಿಂಗ್, ಸ್ಲ್ಯಾಕ್ ಲೈನ್ ಹಾಗೂ ಸ್ಕೂಬಾ ಡೈವಿಂಗ್‌ಗಳು ಪ್ರವಾಸಿರನ್ನು ಆಕರ್ಷಿಸುತ್ತಿವೆ.
ದ್ವೀಪದಲ್ಲಿನ ಬಂಡೆಯ ಮೇಲಿನಿಂದ ಸುಮಾರು 18-25 ಮೀಟರ್ ಕೆಳಗೆ ಸಮುದ್ರಕ್ಕೆ ಜಿಗಿಯುವ ಈ ಕ್ಲಿಫ್ ಡೈವಿಂಗ್‌ಗೆ ಉಡುಪಿ ಶಾಸಕ ಕೆ.ರಘುಪತಿ ಭಟ್ ಇಂದು ಚಾಲನೆ ನೀಡಿದರು. ‘ದೇಶದ ಎರಡನೇ ಅತಿ ಎತ್ತರದ ಕ್ಲಿಫ್ ಡೈವಿಂಗ್ ಇದಾಗಿದೆ. ಇದನ್ನು ನಿರಂತರವಾಗಿ ಮುಂದುವರೆಸುವ ನಿಟ್ಟಿನಲ್ಲಿ ಈ ಬಗ್ಗೆ ಸ್ಥಳೀಯರಿಗೆ ತರಬೇತಿ ನೀಡಿ ತೊಡಗಿಸಿಕೊಳ್ಳುವಂತೆ ಮಾಡಲಾಗು ವುದು’ ಎಂದು ರಘುಪತಿ ಭಟ್ ತಿಳಿಸಿದರು.
‘ಇಂದು ಕ್ಲಿಫ್ ಡೈವಿಂಗ್ ಕ್ರೀಡೆ ವಿದೇಶಿ ಪ್ರವಾಸಿಗರನ್ನು ಹೆಚ್ಚು ಹೆಚ್ಚು ಆಕರ್ಷಿಸುತ್ತಿದೆ. ಸೈಂಟ್ ಮೇರಿಸ್‌ನಲ್ಲಿರುವ ಕ್ಲಿಫ್ ಡೈವಿಂಗ್ ತುಂಬಾ ಸುರಕ್ಷಿತವಾಗಿದೆ. ಯಾವುದೇ ಅಪಾಯ ಆಗದಂತೆ ಪ್ಲಾಟ್‌ಫಾರಮ್ ಕೂಡ ನಿರ್ಮಿಸಲಾಗಿದೆ. ಈಜು ಬಾರದವರು ಇಲ್ಲಿಂದ ಜಿಗಿಯುವುದು ಅಪಾಯ ಕಾರಿಯಾಗಿದೆ. ಕಡ್ಡಾಯವಾಗಿ ಈಜು ಬರುವವರು ಮಾತ್ರ ಇಲ್ಲಿ ಪ್ರಯತ್ನ ಮಾಡುವುದು ಉತ್ತಮ ಎಂದು ಸರ್ಫ್ ಲೈಫ್ ಸೆವಿಂಗ್ ಇಂಡಿಯಾ ಇದರ ನಿರ್ದೇಶಕ ಪಾರ್ಥ ವಾರಣಾಸಿ ತಿಳಿಸಿದರು.
‘ಇಲ್ಲಿರುವ ಕ್ಲಿಫ್ ಡೈವಿಂಗ್ ಉಬ್ಬರದಲ್ಲಿ 18- ಇಳಿತದಲ್ಲಿ 25ಅಡಿ ಎತ್ತರ ಇರುತ್ತದೆ. ಕೆಳಗಡೆ ಸುರಕ್ಷತೆಗಾಗಿ ಒಬ್ಬರನ್ನು ಲೈಫ್‌ಜಾಕೆಟ್‌ನೊಂದಿಗೆ ಮತ್ತು ಬೋಟಿನೊಂದಿಗೆ ನಿಯೋಜಿಸಲಾಗುತ್ತದೆ. ಈ ಪ್ರದೇಶದಲ್ಲಿ ಸಮುದ್ರ 28 ಅಡಿಗಿಂತ ಹೆಚ್ಚು ಆಳ ಇದೆ. ಈಜು ಬರುವವರಿಗೆ ತರಬೇತಿ ನೀಡಿದ ಬಳಿಕ ಮಾತ್ರವೇ ಇಲ್ಲಿಂದ ಜಿಗಿಯಲು ಅವಕಾಶ ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಹೊಸತನದ ಸ್ಲ್ಯಾಕ್‌ಲೈನ್ ಕ್ರೀಡೆ
ಯುರೋಪ್‌ನಲ್ಲಿ ಹೆಚ್ಚು ಪ್ರಸಿದ್ಧಿಯಾಗಿರುವ ಸಮುದ್ರದ ನೀರಿನ ಮೇಲೆ ಪಟ್ಟಿಯನ್ನು ಕಟ್ಟಿ ಅದರ ಮೇಲೆ ಬ್ಯಾಲೆನ್ಸ್ ಮಾಡಿಕೊಂಡು ನಡೆಯುವ ಸ್ಲ್ಯಾಕ್ ಲೈನ್ ಕ್ರೀಡೆಯನ್ನು ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಸೈಂಟ್ ಮೇರಿಸ್ ದ್ವೀಪದಲ್ಲಿ ಪ್ರವಾಸಿಗರಿಗೆ ಪರಿಚಯಿಸಲಾಗಿದೆ.
ಇದರ ಬಗ್ಗೆ ಮಾಹಿತಿ ನೀಡಿದ ಸಾಹಸ ಕ್ರೀಡೆಗಳ ಸಹಾಯಕ ಗೋಕುಲ್, ಇದೊಂದು ಹೊಸ ರೀತಿಯ ಕ್ರೀಡೆಯಾಗಿದೆ. ಇದರ ಮೇಲೆ ದೇಹವನ್ನು ಸಮಾತೋಲನ ಮಾಡಿಕೊಂಡು ನಡೆಯುವಾಗ ದೇಹದ ಎಲ್ಲ ಭಾಗಗಳಿಗೂ ಉತ್ತಮ ವ್ಯಾಯಮ ದೊರೆಯುತ್ತದೆ. ಇದರಲ್ಲಿ 10 ನಿಮಿಷ ನಡೆಯುವುದು ಒಂದು ಗಂಟೆ ವಾಕಿಂಗ್ ಮಾಡುವುದಕ್ಕೆ ಸಮಾನವಾಗಿದೆ ಎಂದರು.
ಸಾಕಷ್ಟು ಸುರಕ್ಷತೆಯಿಂದ ಇದನ್ನು ಅಳವಡಿಸಲಾಗಿದೆ. ಇಲ್ಲಿನ ಸ್ಲ್ಯಾಕ್‌ಲೈನ್ ನಲ್ಲಿ ನಡೆಯುವವರ ಕಾಲಿಗೆ ಹಗ್ಗ(ಲೀಷ್) ಅಳವಡಿಸಲಾಗಿರುತ್ತದೆ. ಒಂದು ವೇಳೆ ವ್ಯಕ್ತಿ ನೀರಿಗೆ ಬಿದ್ದರೂ ಲೀಷ್ ಹಿಡಿದುಕೊಂಡು ಮತ್ತೆ ನಡೆಯಬಹುದಾ ಗಿದೆ. ಪಟ್ಟಿಯನ್ನು ಕಟ್ಟಿ ಹಾಕಿರುವವಲ್ಲಿ ಮಾತ್ರ ಜಾಗೃತೆಯಿಂದ ನಡೆಯಬೇಕಾ ಗುತ್ತದೆ. ಯಾಕೆಂದರೆ ಅಲ್ಲಿ ಕಲ್ಲುಬಂಡೆಗಳಿರುತ್ತದೆ. ಉಳಿದ ನಡೆದ ಬಿದ್ದರೂ ನೀರಿನಲ್ಲಿರುತ್ತೇವೆ ಭಾರತದಲ್ಲಿ ಈ ಸ್ಪೋರ್ಟ್ಸ್ ಈಗ ತುಂಬಾ ಪ್ರಸಿದ್ಧಿ ಪಡೆಯು ತ್ತಿದೆ ಎಂದು ಅವರು ತಿಳಿಸಿದರು.
ಸೈಂಟ್ ಮೇರಿಸ್ ಸಮೀಪದಲ್ಲಿ ಸ್ಕೂಬಾ ಡೈವಿಂಗ್ ಕೂಡ ಆರಂಭಿಸಲಾಗಿದೆ. ‘ಕಾಪು ಮತ್ತು ಸೈಂಟ್ ಮೇರಿಸ್ ದ್ವೀಪದಲ್ಲಿಯೂ ಸ್ಕೂಬಾ ಡೈವಿಂಗ್ ಆರಂಭಿಸಿದ್ದೇವೆ. ಅದಕ್ಕಾಗಿ ಇಲ್ಲಿ ಉತ್ತಮ ಸ್ಥಳ ಇದೆ. ಸ್ಥಳದಲ್ಲಿಯೇ ತರಬೇತಿ ನೀಡಿ 5-7 ಮೀಟರ್ ಸಮುದ್ರದೊಳಗೆ ಕರೆದುಕೊಂಡು ಹೋಗಲಾಗುವುದು. ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಕೂಡ ವಹಿಸಲಾಗುತ್ತದೆ ಎಂದು ಸ್ಕೂಬಾ ಡೈವ್ ತರಬೇತುದಾರರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಲ್ಪೆ ಬೀಚ್ ಉಸ್ತುವಾರಿ ಸುದೇಶ್ ಶೆಟ್ಟಿ, ಮಂಜುನಾಥ ಕೊಳ, ಕ್ಲಿಪ್ ಡೈವಿಂಗ್ ತರಬೇತುದಾರ ಯಾದವ್ ಮೊದಲಾದವರು ಉಪಸ್ಥಿತರಿದ್ದರು.
ಮುಂಬೈಯಿಂದ ಯಾಟ್ ಆಗಮನ
ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಬೀಚ್ ಉತ್ಸವದ ಪ್ರಯುಕ್ತ ಮುಂಬೈ ಯಿಂದ ತರಿಸಲಾದ ಯೋಟ್ ಮಲ್ಪೆ ಬೀಚ್‌ಗೆ ಆಗಮಿಸಲಿದೆ.
ತಾಂತ್ರಿಕ ತೊಂದರೆಯಿಂದ ಯಾಟ್ ಬರುವಾಗ ಸಮಸ್ಯೆಯಾಗಿದೆ. ಇಂದು ಸಂಜೆಯೊಳಗೆ ಆಗಮಿಸುವ ನಿರೀಕ್ಷೆ ಇದೆ. ಅದು ಒಂದು ತಿಂಗಳ ಕಾಲ ಇಲ್ಲೇ ಇರುತ್ತದೆ. ವ್ಯವಹಾರ ಒಳ್ಳೆಯ ರೀತಿಯಲ್ಲಿ ನಡೆದರೆ ಇಲ್ಲಿಯೇ ಶಾಶ್ವತವಾಗಿ ಇಟ್ಟುಕೊಳ್ಳುವ ವ್ಯವಸ್ಥೆ ಮಾಡಲಾಗುವುದು. ಯಾಟ್‌ನಲ್ಲಿ ಎರಡು ರೀತಿಯ ಪ್ಯಾಕೆಜ್ ಪರಿಚಯಿಸಲಾಗುತ್ತಿದೆ. ಒಂದು ಒಬ್ಬ ವ್ಯಕ್ತಿಗೆ ಜಾಯ್ ರೈಡ್ ಮತ್ತು ಯಾಟ್ ಕ್ರೂಸಿಂಗ್ 14 ಜನರಿಗೆ ಅರ್ಧಗಂಟೆ ರೈಡ್ ವ್ಯವಸ್ಥೆ ಕೂಡ ಇದೆ ಎಂದು ರಘುಪತಿ ಭಟ್ ತಿಳಿಸಿದರು.
‘ಸೈಂಟ್ ಮೇರಿಸ್ ದ್ವೀಪವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಸಿಆರ್‌ಝೆಡ್ ಕಾನೂನು ಅಡ್ಡಿಯಾಗುತ್ತಿದೆ. ಇದರಲ್ಲಿ ರಿಯಾಯಿತಿ ನೀಡಬೇಕಾಗುತ್ತದೆ. ಈಗ ಇಲ್ಲಿಗೆ ಬರುವ ಪ್ರವಾಸಿಗರಿಗೆ ಒಂದು ಗಂಟೆ ಮಾತ್ರ ಇರಲು ಅವಕಾಶ ನೀಡ ಲಾಗುತ್ತದೆ. ಸಂಜೆಯವರೆಗೆ ಉಳಿಯಬೇಕಾದರೆ ಇಲ್ಲಿ ಫುಡ್ ಕೋರ್ಟ್ ವ್ಯವಸ್ಥೆ ಆಗಬೇಕಾಗಿದೆ. ಇದೆಲ್ಲ ವ್ಯವಸ್ಥೆಯಾದರೆ ಹೆಚ್ಚು ಪ್ರವಾಸಿಗರನ್ನು ಇಲ್ಲಿಗೆ ಆಕರ್ಷಿಸಬಹುದಾಗಿದೆ’
-ರಘುಪತಿ ಭಟ್, ಶಾಸಕರು.