ಮೋದಿ ರಾಜ್ಯಕ್ಕೆ ನೂರು ಬಾರಿ ಬಂದರೂ ಬಿಜೆಪಿ ಅಧಿಕಾರಕ್ಕೆ ಬರಲ್ಲ: ಸಿದ್ದರಾಮಯ್ಯ

►"ಬಿಜೆಪಿಯವರಿಗೆ ಅಭಿವೃದ್ಧಿ ಕೆಲಸಗಳ ಬಗ್ಗೆ ನಂಬಿಕೆ ಇಲ್ಲ" ►ಉಡುಪಿಯಲ್ಲಿ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮ

Update: 2023-01-22 08:27 GMT

ಉಡುಪಿ, ಜ.22: ಮೋದಿ ಪ್ರಧಾನಿಯಾಗಿ ರಾಜ್ಯಕ್ಕೆ ಬರುವುದಕ್ಕೆ ನಮ್ಮದೇನು ತಕರಾರು ಇಲ್ಲ. ಕರ್ನಾಟಕದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಹೇಳಿ ಅವರು ನೂರು ಬಾರಿ ರಾಜ್ಯಕ್ಕೆ ಬಂದರೂ ಏನು ಮಾಡಲು ಆಗುವುದಿಲ್ಲ. ಈಗಾಗಲೇ ಜನ ಬಿಜೆಪಿ ಬಗ್ಗೆ ಭ್ರಮನಿರಸನರಾಗಿದ್ದಾರೆ. ಬಿಜೆಪಿ ಯನ್ನು ಸೋಲಿಸಿ ಕಾಂಗ್ರೆಸ್‌ನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂಬ ಬಗ್ಗೆ ಜನ ಈಗಾಗಲೇ ತೀರ್ಮಾನ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಉಡುಪಿಯಲ್ಲಿ ಇಂದು ನಡೆದ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ಬಿಜೆಪಿಯವರಿಗೆ ಅಭಿವೃದ್ಧಿ ಕೆಲಸಗಳ ಬಗ್ಗೆ ನಂಬಿಕೆ ಇಲ್ಲ. ಲವ್ ಜಿಹಾದ್ ಅವರ ಬಗ್ಗೆ ಹೆಚ್ಚು ಹೆಚ್ಚು ಮಾತನಾಡಿ, ರಸ್ತೆ ಚರಂಡಿ, ಬಡವರ ಕಾರ್ಯಕ್ರಮಗಳು, ಅಭಿವೃದ್ದಿ ಬಗ್ಗೆ ಮಾತನಾಡಬೇಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಪಕ್ಷದವರಿಗೆ ಫರ್ಮಾನು ಹೊರಡಿಸಿದ್ದಾರೆ. ಅವರ ಮನಸ್ಸಿನಲ್ಲಿ ಏನು ಇದೆ ಎಂಬುದನ್ನು ಬಾಯಿ ಬಿಟ್ಟೆ ಹೇಳಿದ್ದಾರೆ. ಇವರಿಂದ ಕರಾವಳಿ ಸೇರಿದಂತೆ ಕರ್ನಾಟಕ ಅಭಿವೃದ್ಧಿ ಆಗಲು ಸಾಧ್ಯವಿಲ್ಲ ಎಂದು ಅವರು ಟೀಕಿಸಿದರು.

ಹಿಟ್ಲರ್ ಸ್ವಲ್ಪ ದಿನ ಮೆರೆದ ಆಮೇಲೆ ಅವರ ಕಥೆ ಏನಾಯಿತು. ಅದೇ ರೀತಿ ಮುಸಲೋನಿಯ, ಫ್ರ್ಯಾಂಕೋ ಏನಾದರೂ? ಇವರೆಲ್ಲ ಸ್ವಲ್ಪದಿನ ಮೆರೆಯುತ್ತಾರೆ. ಜನ ಇವರ ಮಾತುಗಳನ್ನು ನಂಬುವುದಿಲ್ಲ. ಮುಂದೆ ಇವರಿಗೆ ಬುದ್ಧಿ ಕಲಿಸುತ್ತಾರೆ ಎಂದು ಅವರು ಹೇಳಿದರು.

ಕೋಲಾರದಲ್ಲಿಯೇ ಸ್ಪರ್ಧೆ: ಕೋಲಾರದಲ್ಲಿ ಸ್ಪರ್ಧಿಸುವ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ನಾನು ಮನೆ ಹುಡುಕುತ್ತಿಲ್ಲ, ನಮ್ಮ ಪಾರ್ಟಿಯವರು ಹುಡುಕುತ್ತಿದ್ದಾರೆ. ಇದೆಲ್ಲ ನನಗೆ ಗೊತ್ತೇ ಇಲ್ಲ. ನಾನು ಕೋಲಾರದಿಂದಲೇ ಸ್ಪರ್ಧಿಸಲು ತೀರ್ಮಾನ ಮಾಡಿದ್ದೇನೆ. ಅಂತಿಮವಾಗಿ ಹೈಕಮಾಂಡ್ ಏನು ಹೇಳುತ್ತದೆಯೋ ಅದರಂತೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಅಮಿತ್ ಶಾ ಅವರಿಂದ ಆಪರೇಷನ್ ಓಲ್ಡ್ ಮೈಸೂರು ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಾಯಲ್ಲಿ ಹೇಳಿದ ತಕ್ಷಣ ಆಗಿ ಬಿಡಲು ಸಾಧ್ಯವೇ?  ಮಮತಾ ಬ್ಯಾನರ್ಜಿಯನ್ನು ಕೆಳಗೆ ಇಳಿಸಿಯೇ ಇಳಿಸುತ್ತೇವೆ ಎಂದು ಹೇಳಿ ಅಮಿತ್ ಶಾ ಪಶ್ಚಿಮ ಬಂಗಾಳಕ್ಕೆ ನೂರು ಬಾರಿ ಹೋಗಿದ್ದರು. ಆದರೆ ಅವರಿಂದ ಅದು ಸಾಧ್ಯವಾಗಿಲ್ಲ. ಕರ್ನಾಟಕಕ್ಕೆ ಬಂದರು ಅಮಿತ್ ಶಾಗೆ ಅದೇ ಗತಿ ಆಗುತ್ತದೆ ಎಂದರು.

ಚುನಾವಣೆ ಗಿಮಿಕ್:  ಎಂಎಲ್‌ಎ ಗೆಲ್ಲಿಸಲು ತೆಲಂಗಾಣ ಶಾಸಕರೊಬ್ಬರು 500 ಕೋಟಿ ರೂ. ಕೊಡುತ್ತಿರುವ ಕುರಿತ ಬಿಜೆಪಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಇದೆನ್ನಲ್ಲ ನಂಬಕ್ಕೆ ಆಗುತ್ತದೆಯೇ. ಶಾಸಕರಿಗೆ 500 -600 ಕೋಟಿ ಕೊಡುತ್ತಾರೆ ಎಂದರೆ ನಂಬಲು ಸಾಧ್ಯವೇ? ಡಿ ಕಾಂಗ್ರೆಸ್, ಎಸ್ ಕಾಂಗ್ರೆಸ್ ಎಂಬುದು ಎಲ್ಲವೂ ಚುನಾವಣೆ ಗಿಮಿಕ್. ಜನ ಎಲ್ಲವನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಆಗಬೇಕಾದರೆ ಕೋಟಿ ಹಣ ಕೊಡಬೇಕು, ಯಡಿಯೂರಪ್ಪ ಮನೆಯಲ್ಲಿಯೇ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪ ಮಾಡಿರುವ ಯತ್ನಾಳ್ ಬಗ್ಗೆ ಯಾಕೆ ಈವರೆಗೆ ಕ್ರಮ ತೆಗೆದುಕೊಂಡಿಲ್ಲ. ನಡ್ಡಾ ಕಾರ್ಯಕ್ರಮಕ್ಕೆ ಯತ್ನಾಳ್ ಗೈರು ಹಾಜರಾಗಿದ್ದಾರೆ. ಅವರೇ ಹೋಗಿಲ್ಲ ಅಂದರೆ ಏನು ಅರ್ಥ. ಅಲ್ಲಿ ಗುಂಪುಗಾರಿಕೆ ಇದೆಯೋ ಇಲ್ಲವೋ. ನಮ್ಮಲ್ಲಿ ಏನು ಗುಂಪುಗಾರಿಕೆ ಇರುವುದು. ನಾನು ಮತ್ತು ಡಿಕೆ ಶಿವಕುಮಾರ್ ಒಟ್ಟಿಗೆ ಪ್ರಯಾಣ ಮಾಡುತ್ತಿದ್ದೇವೆ ಎಂದರು.

ರಾಜ್ಯದಲ್ಲಿ ಕನಿಷ್ಠ 130 ಸ್ಥಾನದಲ್ಲಿ ಗೆಲುವು: ಮುಂದಿನ ಚುನಾವಣೆಯಲ್ಲಿ ನಾವು ಕನಿಷ್ಠ 130, ಗರಿಷ್ಠ 150ರಷ್ಟು ಸ್ಥಾನ ಗೆಲ್ಲುತ್ತೇವೆ. ಉಡುಪಿ ಜಿಲ್ಲೆಯಲ್ಲಿ ಕಳೆದ ಚುನಾವಣೆ ನಾವು ಒಂದೂ ಗೆದ್ದಿರಲಿಲ್ಲ. ಈ ಬಾರಿ ಎರಡು ಮೂರು ಮತ್ತು ದ.ಕ. ಜಿಲ್ಲೆಯಲ್ಲಿ ಐದಾರು ಸ್ಥಾನ ಗೆಲ್ಲುತ್ತೇವೆ. ಹಿಂದೆ ದಕ್ಷಿಣ ಕನ್ನಡದಲ್ಲಿ ನಾವು ಏಳು ಗೆದ್ದಿದ್ದೇವು. ಬಿಜೆಪಿಯವರು ಒಮ್ಮೆ ಗೆದ್ದರೆ ಅದೇ ಮತ್ತೆ ರಿಪೀಟ್ ಆಗುವುದಿಲ್ಲ. ಅಭ್ಯರ್ಥಿಗಳ ಪಟ್ಟಿಯನ್ನು ಫೆಬ್ರವರಿ ಮೊದಲ ವಾರ ಸಭೆ ಕರೆದು ಅಂತಿಮ ತೀರ್ಮಾನ ಮಾಡುತ್ತೇವೆ ಎಂದರು.

ಕಾಂಗ್ರೆಸ್‌ಗೆ ಕುರ್ಚಿ ಮೇಲೆ ಆಸೆ ಎಂಬ ನಡ್ಡಾ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇವರಿಗೆ ಯಾವುದರ ಮೇಲೆ ಆಸೆ. ಕುರ್ಚಿ ಮೇಲೆ ಆಸೆ ಇಲ್ಲದಿದ್ದರೆ ಅಧಿಕಾರ ಬಿಟ್ಟು ಬಿಡಲಿ. ಮಗನನ್ನು ತೆಗೆದುಕೊಂಡು ಹೋಗಿ ಬಿಜೆಪಿ ಅಧ್ಯಕ್ಷರಾಗಿ ಮಾಡಿದ್ದಾರೆ. ಈಗ ನಮಗೆ ಕುರ್ಚಿ ಮೇಲೆ ಆಸೆ ಅಂತ ಹೇಳುತ್ತಾರೆ. ಹಾಗದರೆ ಇವರಿಗೆ ಯಾವುದರ ಮೇಲೆ ಆಸೆ ಇದೆ ಎಂಬುದು ಹೇಳಲಿ. ಈ ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟವರು ಕಾಂಗ್ರೆಸ್‌ನವರು ಹೊರತು ನಡ್ಡಾ, ಮೋದಿ, ಅಮಿತ್ ಶಾ ಅಲ್ಲ ಎಂದು ಟೀಕಿಸಿದರು.

 ‘ಕರಾವಳಿ ಹಿಂದುತ್ವದ ಪ್ರಯೋಗಾಲಯ’:

ಕರಾವಳಿಯಲ್ಲಿ ಹೆಚ್ಚುತ್ತಿರುವ ಭಯೋತ್ಪಾದನಾ ಚಟುವಟಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಕರಾವಳಿ ಜಿಲ್ಲೆ ಹಿಂದುತ್ವದ ಪ್ರಯೋಗಾಲಯ. ಸುಳ್ಳು ಹೇಳುವುದೇ ಬಿಜೆಪಿಯವರ ಕಸುಬು ಆಗಿದೆ. ಸಾವರ್ಕರ್ ಹಿಟ್ಲರ್ ತತ್ವದಿಂದ ಪ್ರಭಾವಿತರಾದವರು. ಹಿಂದುತ್ವ ಶಬ್ದವನ್ನು ಸಾರ್ವಕರ್ ಹುಟ್ಟು ಹಾಕಿದರು. ಹಿಂದೂ ಬೇರೆ ಹಿಂದುತ್ವ ಬೇರೆ ಎಂದು ತಿಳಿಸಿದರು.

ಭಯೋತ್ಪಾದನೆ ಯಾರು ಮಾಡಿದರು ಕೂಡ ತಪ್ಪು. ನಾವು ಅದನ್ನು ಖಂಡಿಸುತ್ತೇವೆ. ಭಯೋತ್ಪಾದಕರಿಗೆ ಕಠಿಣವಾದ ಶಿಕ್ಷೆಯಾಗಬೇಕು. ನಮಗೆ ಹಿಂದುತ್ವದ ಹೆಸರಲ್ಲಿ ಸುಳ್ಳು ಹೇಳುವವರು ಹಾಗೂ ಮನುವಾದ ಮಾಡುವವರನ್ನು ಕಂಡರೆ ಕೋಪ. ನಾವು ಮನುಷ್ಯರನ್ನು ಪ್ರೀತಿಸುವ ಜನ. ಎಲ್ಲ ಧರ್ಮದವರು ಮನುಷ್ಯರು. ಮನುಷ್ಯ ಮನುಷ್ಯರನ್ನು ಪ್ರೀತಿಸಬೇಕು. ಅದರಲ್ಲಿ ನಾವು ನಂಬಿಕೆ ಇಟ್ಟುಕೊಂಡಿದ್ದೇವೆ ಎಂದು ಅವರು ಹೇಳಿದರು.

 ‘ಪ್ರತಾಪ್‌ ಚಂದ್ರ ಶೆಟ್ಟಿ ಕಾಂಗ್ರೆಸ್ ಬಿಟ್ಟಿಲ್ಲ’:

ಪ್ರತಾಪ್‌ ಚಂದ್ರ ಶೆಟ್ಟಿಗೆ ಪಕ್ಷದಲ್ಲಿ ಏನು ಬೇಸರ ಇಲ್ಲ. ಅವರು ನಮ್ಮ ಪಕ್ಷದ ಹಿರಿಯ ನಾಯಕ. ಬೇರೆಯವರಿಗೆ ಹಾಗೂ ಯುವಕರಿಗೆ ಅವಕಾಶ ಮಾಡಿ ಕೊಟ್ಟಿದ್ದಾರೆ. ಬಹಳ ಉತ್ಸಾಹ ಹಾಗೂ ದೀರ್ಘ ಕಾಲ ಸಕ್ರಿಯ ರಾಜಕಾರಣ ಮಾಡಿದ್ದಾರೆ. ಈಗ ಸಕ್ರಿಯ ರಾಜಕಾರಣ ಬೇಡ ಎಂದು ಹೇಳಿದ್ದಾರೆ. ಅವರು ಕಾಂಗ್ರೆಸ್ ವಿರುದ್ಧ ಮಾತನಾಡಿಲ್ಲ. ಯತ್ನಾಳ್ ತರಹ ಮಾತನಾಡಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

Similar News