ಗುಜರಾತ್ ಗಲಭೆ ಬಗ್ಗೆ ತನಿಖೆ ನಡೆಸಿದ್ದ ಬ್ರಿಟಿಷ್ ಸರಕಾರ: ಮಾಜಿ ವಿದೇಶಾಂಗ ಕಾರ್ಯದರ್ಶಿ ಜಾಕ್ ಸ್ಟ್ರಾ ಬಹಿರಂಗ

ಗಲಭೆ ಸಂದರ್ಭ ಮಧ್ಯಪ್ರವೇಶಿಸದಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದ ಮೋದಿ: ತನಿಖಾ ವರದಿಯಲ್ಲಿ ಉಲ್ಲೇಖ

Update: 2023-01-22 18:16 GMT

ಗುವಾಹಟಿ,ಜ.22: 2002ರ ಗುಜರಾತ್ ಗಲಭೆಗೆ ಸಂಬಂಧಿಸಿ ಬ್ರಿಟಿಷ್ ಸರಕಾರವು ತನ್ನದೇ ಆದ ತನಿಖೆಯೊಂದನ್ನು ನಡೆಸಿತ್ತು. ಗುಜರಾತ್ ಹತ್ಯಾಕಾಂಡಕ್ಕೆ ನರೇಂದ್ರ ಮೋದಿ(Narendra Modi) ನೇರ ಹೊಣೆಗಾರರೆಂದು ವರದಿ ತಿಳಿಸಿತ್ತು ಎಂದು ಬ್ರಿಟನ್ ನ ಮಾಜಿ ವಿದೇಶಾಂಗ ಕಾರ್ಯದರ್ಶಿ ಜಾಕ್ ಸ್ಟ್ರಾ(Jack Straw) ತಿಳಿಸಿದ್ದಾರೆ.

ಗುಜರಾತ್ ಗಲಭೆ ಬಳಿಕ ಗುಜರಾತಿ ಮುಸ್ಲಿಂ ಮೂಲದ ಅನೇಕ ಬ್ರಿಟನ್ ಪ್ರಜೆಗಳು, ಭಾರತದಲ್ಲಿರುವ ತಮ್ಮ ಬಂಧು,ಬಾಂಧವರ ಸುರಕ್ಷತೆಯ ಬಗ್ಗೆ ಆತಂಕ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಗುಜರಾತ್ ಗಲಭೆಯ ಬಗ್ಗೆ ತನಿಖೆ ನಡೆಸುವಂತೆ ತಾವು ಆಗಿನ ಟೋನಿಬ್ಲೇರ್ ಸರಕಾರಕ್ಕೆ ಮನವಿಗಳನ್ನು ಸಲ್ಲಿಸಿದ್ದೆವು ಎಂದು ಅವರು ತಿಳಿಸಿದ್ದಾರೆ.

2002ರ ಗುಜರಾತ್ ಗಲಭೆಗಳ ಕುರಿತ ಸಾಕ್ಷಚಿತ್ರದ ಕುರಿತ ಬಿಬಿಸಿ ಸಾಕ್ಷಚಿತ್ರ ಹಿರಿಯ ಪತ್ರಕರ್ತ ಕರಣ್ ಥಾಪರ್(Karan Thapar) ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಜಾಕ್ ಸ್ಟ್ರಾ, ‘‘ಭಾರತದಲ್ಲಿನ ಆಗಿನ ಬ್ರಿಟಿಶ್ ಹೈಕಮಿಶನರ್ ಅವರು ಗುಜರಾತ್ ಗಲಭೆ ಬಗ್ಗೆ ವರದಿಯೊಂದನ್ನು ಲಂಡನ್   ನಲ್ಲಿರುವ ವಿದೇಶಾಂಗ ಕಚೇರಿಗೆ ಕಳುಹಿಸಿದ್ದರು. 2002ರ ಗುಜರಾತ್ ಹತ್ಯಾಕಾಂಡಕ್ಕೆ ನರೇಂದ್ರ ಮೋದಿ ನೇರ ಹೊಣೆಗಾರರೆಂದು ಆ ವರದಿಯಲ್ಲಿ ತಿಳಿಸಲಾಗಿತ್ತು ಎಂದವರು ಹೇಳಿದ್ದಾರೆ. ‘‘ ಘಟನೆಯ ಬಗ್ಗೆ ತನಿಖೆ ನಡೆಸಿದ್ದವರ ಭಾವನೆ ಹಾಗಿತ್ತು’’ ಎಂದು ಜಾಕ್ಸ್ಟ್ರಾ ತಿಳಿಸಿದ್ದಾರೆ.

‘‘ ನನ್ನ ಸ್ವಕ್ಷೇತ್ರ ಸೇರಿದಂತೆ ಬ್ರಿಟನ್ನಲ್ಲಿ ಗುಜರಾತ್ ಮೂಲದ ಅದರಲ್ಲಿಯೂ ಮುಸ್ಲಿಂ ಸಮುದಾಯಕ್ಕೆ ಸಾವಿರಾರು ಮಂದಿಯಿದ್ದಾರೆ. ಗುಜರಾತ್ ನ ಕೋಮುಗಲಭೆಗಳಿಂದ ನೇರವಾಗಿ ಬಾಧಿತವಾದ ತಮ್ಮ ಕುಟುಂಬಗಳ ಬಗ್ಗೆ ಅವರು ಕಳವಳವನ್ನು ಹೊಂದಿದ್ದರು.  ಈ ಬಗ್ಗೆ ಅವರು ತಮಗೆ ಅಹವಾಲನ್ನು ಸಲ್ಲಿಸಿದ್ದರು. ಗುಜರಾತ್ ಗಲಭೆಗೆ ಸಂಬಂಧಿಸಿ ಆಗಿನ ಹೈಕಮೀಶನರ್ ತನಿಖೆಗೆ ಆದೇಶಿಸಿರುವುದಕ್ಕೆ ಇದೂ ಒಂದು ಕಾರಣವಾಗಿತ್ತು ಎಂದರು.

ಗುಜರಾತ್ ಗಲಭೆ ಬಗ್ಗೆ ತಾನು ಆಗಿನ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್(Jaswant Singh) ಸೇರಿದಂತೆ ಭಾರತೀಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾಗಿಯೂ ಸ್ಟ್ರಾ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ. ‘‘ನರೇಂದ್ರ ಮೋದಿ ಅವರು 2002ರ ಫೆಬ್ರವರಿ 27ರಂದು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿ, ಗಲಭೆಯಲ್ಲಿ ಮಧ್ಯಪ್ರವೇಶಿಸದಂತೆ ಸೂಚಿಸಿದ್ದರು’’ ಎಂದು ಬ್ರಿಟಿಶ್ ಹೈಕಮೀಶನ್ ವರದಿಯಲ್ಲಿ ಹೇಳಲಾಗಿತೆಂದು ಸ್ಟ್ರಾ ತಿಳಿಸಿದರು.

‘‘ನಾನು ವಾಜಪೇಯಿ ಸರಕಾರದ ಜೊತೆ ಅದರಲ್ಲಿಯೂ ವಿದೇಶಾಂಗ ಸಚಿವ (ಜಸ್ವಂತ್ ಸಿಂಗ್) ಜೊತೆ ಮಾತನಾಡಿದ್ದೆ. 2002ರ ಗುಜರಾತ್ ಗಲಭೆ ಹಾಗೂ 2001ರ ಡಿಸೆಂಬರ್ ಮಧ್ಯೆ ಸಂಸತ್ ಮೇಲೆ ನಡೆದ ದಾಳಿ ಘಟನೆಗಳ ಬಗ್ಗೆ ವಿವರಗಳನ್ನು ಪಡೆಯಲು ನಾನು ವಾಜಪೇಯಿ ಸರಕಾರದ ಜೊತೆ ಉತ್ತಮ ಸಂಪರ್ಕದಲ್ಲಿದ್ದೆ ಎಂದು ಮಾಜಿ ರಾಜತಾಂತ್ರಿಕರಾದ ಸ್ಟ್ರಾ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಗುಜರಾತ್ ಗಲಭೆಯ ಬಗ್ಗೆ ಬ್ರಿಟಿಶ್ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದರೆಂದು ಬಿಬಿಸಿಯ ವಿವಾದಾತ್ಮಕ ಸಾಕ್ಷ ಚಿತ್ರ ‘ದಿ ಮೋದಿ ಕ್ವಶ್ಚನ್’ ಬಹಿರಂಗಪಡಿಸಿರುವ ಹಿನ್ನೆಲೆಯಲ್ಲಿ ಸ್ಟ್ರಾ ಅವರ ಈ ಹೇಳಿಕೆ ಹೆಚ್ಚಿನ ಮಹತ್ವ ಪಡೆದಿದೆ.

ಭಾರತದಲ್ಲಿನ ಬ್ರಿಟನ್ ನ ವಸಾಹತುಶಾಹಿ ಆಡಳಿತವು ಜನಾಂಗೀಯವಾದಿ ಹಾಗೂ ಸ್ವಲ್ಪ ಭಯಾನಕವಾಗಿತ್ತು ಎಂದು ಬಣ್ಣಿಸಿದ ಸ್ಟ್ರಾ, ಬ್ರಿಟನ್ ನ ಹಿಂದಿನ ಭಾಗೀದಾರಿಕೆಯು ಉಭಯದೇಶಗಳ ನಡು ವೆ ದೀರ್ಘಾವಧಿಯ ಅನುಬಂಧವನ್ನು ಬೆಸೆದಿದ್ದು, ಅದು ಭಾರತದ ಸ್ವರೂಪ ಹಾಗೂ ಬ್ರಿಟನ್  ನ   ಸ್ವರೂಪಗಳೆರಡನ್ನೂ ಬದಲಾಯಿಸಿದೆ ಎಂದರು.

Similar News