ಚುನಾವಣೆ ಘೋಷಣೆ ಮೊದಲೇ ಮತದಾರರ ಓಲೈಕೆ: ಪುಣ್ಯ ಕ್ಷೇತ್ರ ದರ್ಶನಕ್ಕೆ ಪಕ್ಷಗಳ ಪೈಪೋಟಿ

Update: 2023-01-23 04:38 GMT

ಬೆಂಗಳೂರು, ಜ.23: ವಿಧಾನಸಭೆ ಸಾರ್ವತ್ರಿಕ ಚುನಾವಣೆಯ ದಿನಾಂಕ ಘೋಷಣೆಗೂ ಮೊದಲೇ ರಾಜಧಾನಿ ಬೆಂಗಳೂರಿನಲ್ಲಿ ಮತದಾರರ ಓಲೈಕೆ ಆರಂಭಗೊಂಡಿದೆ. ಇದಕ್ಕೆ ಪುಷ್ಟಿ ನೀಡುವಂತೆ ರಾಜಕಾರಣಿಗಳು ಜನರನ್ನು (ಮತದಾರರನ್ನು) ಧಾರ್ಮಿಕ ಕ್ಷೇತ್ರಗಳಿಗೆ ಉಚಿತವಾಗಿ ಪೈಪೋಟಿಗೆ ಬಿದ್ದು ಕಳುಹಿಸುತ್ತಿರುವ ದೃಶ್ಯ ಸಾಮಾನ್ಯವಾಗಿಬಿಟ್ಟಿದೆ.

ಇಲ್ಲಿನ ಕೆಆರ್ ಪುರಂ, ಸಿ.ವಿ.ರಾಮನ್‌ನಗರ, ಗೋವಿಂದರಾಜನಗರ, ರಾಜಾಜಿನಗರ ವಿಧಾನಸಭಾ ಕ್ಷೇತ್ರ ಸೇರಿದಂತೆ ವಿವಿಧ ಕಡೆಗಳಲ್ಲಿ ಅಪಾರ ಸಂಖ್ಯೆಯಲ್ಲಿ ಪುಣ್ಯ ಕ್ಷೇತ್ರಗಳಿಗೆ ಉಚಿತವಾಗಿ ಬಸ್‌ಗಳಲ್ಲಿ ಕರೆದೊಯ್ದು ದರ್ಶನ ಮಾಡಿಸಲಾಗುತ್ತಿದೆ. ಇದಕ್ಕೆ ತಗಲುವ ಖರ್ಚುವೆಚ್ಚಗಳನ್ನು ಆಯಾ ಕ್ಷೇತ್ರಗಳ ಚುನಾವಣೆ ಆಕಾಂಕ್ಷಿಗಳು ಭರಿಸುತ್ತಿರುವುದಾಗಿ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ.

ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಸ್ಥಳೀಯ ಮಟ್ಟದ ಹಲವು ನಾಯಕರು, ಶಾಸಕರ ಹಿಂಬಾಲಕರು ಈ ದರ್ಶನಗಳ ಗಿಫ್ಟ್ ಅಡಿಯಲ್ಲಿ ಸಾವಿರಾರು ಜನರನ್ನು ಜಮಾಯಿಸಿಕೊಂಡು ರಾಜ್ಯದ ಹೊರಭಾಗದ ದೇವಾಲಯ, ಪ್ರಾರ್ಥನಾ ಕ್ಷೇತ್ರಗಳಿಗೆ ಕರೆದೊಯ್ದು, ಎರಡು ಮೂರು ದಿನ ಸುತ್ತಾಡಿಸಿ ವಾಪಸ್ ಮನೆಗೆ ತಲುಪಿಸುವ ಕಾಯಕದಲ್ಲಿ ಹತ್ತು-ಹದಿನೈದು ದಿನಗಳಿಂದ ನಿರತರಾಗಿದ್ದಾರೆ.

ಇಲ್ಲಿನ ಕೆಆರ್ ಪುರಂ ವಿಧಾನಸಭಾ ಕ್ಷೇತ್ರದಲ್ಲಿ ಇದುವರೆಗೂ 10 ಸಾವಿರಕ್ಕೂ ಅಧಿಕ ಮಂದಿಯನ್ನು ನೆರೆಯ ತಮಿಳುನಾಡಿನಲ್ಲಿರುವ ಮೇಲ್ಮರುವತ್ತೂರಿನಲ್ಲಿರುವ ಓಂ ಶಕ್ತಿ ದೇವಾಲಯಕ್ಕೆ ಕರೆದೊಯ್ದು, ವಾಪಸ್ ಕರೆತಂದಿರುವ ಚಿತ್ರಗಳು, ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರ ವೆಚ್ಚವನ್ನು ಅಲ್ಲಿನ ಶಾಸಕರೂ ಆದ ಸಚಿವ ಬಿ.ಎ. ಬಸವರಾಜ ಅವರ ಬೆಂಬಲಿಗರು ಭರಿಸಿದ್ದರು ಎನ್ನುವ ಮಾತುಗಳು ಕೇಳಿಬಂದಿವೆ.

ರಾಜಾಜಿನಗರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ರಘುವೀರ್ ಎಸ್.ಗೌಡ ಅವರು ಬರೋಬ್ಬರಿ 2 ಸಾವಿರ ಮಂದಿಯನ್ನು ರಾಜ್ಯದ ಮಲೈ ಮಹದೇಶ್ವರ ಬೆಟ್ಟ, ನಿಮಿಷಾಂಬದೇವಿ ದೇವಸ್ಥಾನ, ಶ್ರೀರಂಗಪಟ್ಟಣ, ರಂಗನಾಥ ದೇವಸ್ಥಾನ, ಮೈಸೂರು ಚಾಮುಂಡಿಬೆಟ್ಟ, ನಂಜನಗೂಡು ಶ್ರೀ ಕಂಠೇಶ್ವರ ದೇವಸ್ಥಾನಕ್ಕೆ ಉಚಿತ ಪ್ರವಾಸಕ್ಕೆ ವ್ಯವಸ್ಥೆ ಮಾಡಿದ್ದರು.

ಮತ್ತೊಂದೆಡೆ, ವಸತಿ ಸಚಿವ ವಿ.ಸೋಮಣ್ಣ ಅವರು, ಗೋವಿಂದ ರಾಜನಗರ ವಿಧಾನಸಭಾ ಕ್ಷೇತ್ರದ ಕಾವೇರಿಪುರ ವಾರ್ಡ್‌ನಲ್ಲಿ ಕ್ಷೇತ್ರದ 5 ಸಾವಿರ ಭಕ್ತರಿಗೆ ನೂರಕ್ಕೂ ಹೆಚ್ಚು ಬಸ್‌ಗಳಲ್ಲಿ ಧರ್ಮಸ್ಥಳ ಮಂಜುನಾಥಸ್ವಾಮಿ ದೇವಸ್ಥಾನ, ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳಿಗೆ ಉಚಿತ ಪ್ರವಾಸ ಆಯೋಜಿಸಿದ್ದಲ್ಲದೆ, ಭಕ್ತರಿಗೆ ಶುಭಕೋರಿ ಬೀಳ್ಕೊಡುಗೆ ಮಾಡಿದರು.

ಇಲ್ಲಿನ ಸಿ.ವಿ.ರಾಮನ್ ನಗರದ ಬಿಜೆಪಿ ಶಾಸಕ ಎಸ್.ರಘು ತಮ್ಮ ಕ್ಷೇತ್ರ ವ್ಯಾಪ್ತಿಯ ಹಲವು ಜನರನ್ನು ಬಸ್‌ಗಳ ಮೂಲಕ ಹೊರಭಾಗದ ಪುಣ್ಯ ಕ್ಷೇತ್ರಗಳಿಗೆ ಕಳುಹಿಸಿಕೊಟ್ಟಿದ್ದು, ಅವರ ಬೆಂಬಲಿಗರೇ ಸಂಪೂರ್ಣ ಖರ್ಚುಗಳನ್ನು ಭರಿಸಿದ್ದರು ಎಂದು ತಿಳಿದುಬಂದಿದೆ.

ಕೆಂಪು ಸೀರೆಯೂ ಉಚಿತ: ಪ್ರವಾಸಕ್ಕೆ ಉಚಿತ ಬಸ್ ವ್ಯವಸ್ಥೆ ಮಾತ್ರ ವಲ್ಲದೆ, ಮಹಿಳೆಯರಿಗೆ ಕೆಂಪು ಸೀರೆಯನ್ನು ಊಡುಗೆರೆಯಾಗಿ ನೀಡ ಲಾಗಿದೆ. ಇಲ್ಲಿನ ಕೆಆರ್ ಪುರಂ ಕ್ಷೇತ್ರ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಸಂಖ್ಯೆ ಯಲ್ಲಿ ಸೀರೆಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಪ್ರತಿಕ್ರಿಯಿಸಿದ ಹೆಸರು ಹೇಳಲು ಇಚ್ಚಿಸದ ಪಕ್ಷದ ಬೂತ್‌ಮಟ್ಟದ ಪ್ರಮುಖ್, ‘ಮುಂದಿನ ದಿನಗಳಲ್ಲಿ ಚುನಾವಣೆ ಹಿನ್ನೆಲೆ ನಾವು ಕೆಲಸ, ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತೇವೆ. ಹೀಗಾಗಿ, ಎಲ್ಲಿಯೂ ಹೋಗಲು ಸಮಯ ಸಿಗುವುದಿಲ್ಲ. ಅದ್ದರಿಂದ ಪುಣ್ಯಕ್ಷೇತ್ರಗಳನ್ನು ದರ್ಶನ ಮಾಡಿಸಲಾಗಿದೆ. ಇದರಲ್ಲಿ ಯಾವುದೇ ರೀತಿಯ ತಪ್ಪಿಲ್ಲ’ ಎಂದು ಹೇಳಿದರು.

ಆಡಳಿತ ಪಕ್ಷ ಬಿಜೆಪಿಯ ಹಲವು ನಾಯಕರು ಕಾಮಗಾರಿ ಹೆಸರಿನಲ್ಲಿ ಶೇ.40ರಷ್ಟು ಕಮಿಷನ್ ಹಣ ತಿಂದಿದ್ದಾರೆ. ಇದೀಗ ಆ ಹಣವನ್ನು ಪುಣ್ಯಕ್ಷೇತ್ರ ಹೆಸರಿನಲ್ಲಿ ಖರ್ಚು ಮಾಡಿ ಓಲೈಕೆ ಮಾಡಲು ಮುಂದಾಗಿದ್ದಾರೆ. ಇಂತಹ ಗಿಮಿಕ್ ಗಳು ಈ ಬಾರಿ ನಡೆಯುವುದಿಲ್ಲ. ಪಕ್ಷವೂ ಇಂತಹ ಆಮಿಷ ಚಟುವಟಿಕೆಗಳ ವಿರುದ್ಧ ಅಭಿಯಾನ ನಡೆಸಲಿದೆ.

ಜಗದೀಶ್ ವಿ.ಸದಂ, ಆಪ್ ಪಕ್ಷದ ನಾಯಕ

--------------------------

ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುತ್ತಿರುವ ಕಾರಣ ಅಕ್ರಮ ಮಾರ್ಗಗಳಲ್ಲಿ ಸಂಪಾದನೆ ಮಾಡಿದ ಹಣವನ್ನು ಖರ್ಚು ಮಾಡಿ, ಈ ರೀತಿಯ ಪ್ರವಾಸಗಳಿಗೆ ಕರೆದೊಯ್ದು, ಪರೋಕ್ಷವಾಗಿ ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗ ಸ್ವಯಂ ದೂರು ದಾಖಲಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.

ಸಿ.ಎನ್.ದೀಪಕ್, ಪ್ರಧಾನ ಕಾರ್ಯದರ್ಶಿ, ಕೆಆರ್‌ಎಸ್ ಪಕ್ಷ

Similar News