ಮಧ್ಯ ಪ್ರದೇಶದ ಬಾಗೇಶ್ವರ್‌ ಧಾಮ್‌ ಮತ್ತದರ ಮುಖ್ಯಸ್ಥ ಸುದ್ದಿಯಲ್ಲಿರುವುದು ಏಕೆ?: ಇಲ್ಲಿದೆ ಮಾಹಿತಿ

Update: 2023-01-23 09:31 GMT

ಹೊಸದಿಲ್ಲಿ: ಕಳೆದ ಕೆಲ ದಿನಗಳಿಂದ ಮಧ್ಯ ಪ್ರದೇಶದ ಛತರ್ಪುರ್‌ ಜಿಲ್ಲೆಯ ಬಾಗೇಶ್ವರ್‌ ಧಾಮ್‌ ದೇವಸ್ಥಾನದ ಮುಖ್ಯಸ್ಥ ಹಾಗೂ ಧಾರ್ಮಿಕ ಪ್ರಚಾರಕ ಧೀರೇಂದ್ರ ಕೃಷ್ಣ ಶಾಸ್ತ್ರಿ ಸುದ್ದಿಯಲ್ಲಿದ್ದಾರೆ. ಟಿವಿ ಚರ್ಚಾ ಕಾರ್ಯಕ್ರಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲೂ ಅವರ ಬಗ್ಗೆ ಚರ್ಚೆಗಳಾಗುತ್ತಿವೆ.

ಅದಕ್ಕೆ ಕಾರಣಗಳು ಇಲ್ಲಿವೆ.

ಸ್ವಘೋಷಿತ ದೇವಮಾನವನಾಗಿರುವ ಧೀರೇಂದ್ರ ಕೃಷ್ಣ ಶಾಸ್ತ್ರಿ ದೇಶಾದ್ಯಂತ ಸಂಚರಿಸಿ ಧಾರ್ಮಿಕ ಪ್ರವಚನಗಳನ್ನು 'ಕಥಾ' ರೂಪದಲ್ಲಿ ನೀಡುತ್ತಾರೆ. ಇತ್ತೀಚೆಗೆ ಮಹಾರಾಷ್ಟ್ರ ಮೂಲದ ಅಂಧಶ್ರದ್ಧೆ ವಿರೋಧಿ ಸಂಘಟನೆಯೊಂದು ಅವರಿಗೆ ಸವಾಲೆಸೆದು ಅವರು ನಾಗ್ಪುರ್‌ನ ಕಾರ್ಯಕ್ರಮವೊಂದರಲ್ಲಿ ತಮ್ಮಲ್ಲಿದೆ ಎಂದು ಹೇಳುವ ಪವಾಡ ಶಕ್ತಿಯನ್ನು ಸಾಬೀತುಪಡಿಸಬೇಕೆಂದು ಹೇಳಿತ್ತು.

ಈ ಕುರಿತು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಶಾಸ್ತ್ರಿ, ತನಗೆ ಬಾಗೇಶ್ವರ್‌ ಬಾಲಾಜಿ ಮೇಲೆ ನಂಬಿಕೆಯಿದೆ. "ಯಾರು ಬೇಕಾದರೂ ನನ್ನ ಮಾತುಗಳು ಹಾಗೂ ಕ್ರಿಯೆಗಳನ್ನು ಕ್ಯಾಮರಾ ಎದುರು ಸವಾಲೆಸೆಯಬಹುದು. ನನಗೆ ಯಾವುದು ಸ್ಫೂರ್ತಿ ನೀಡುವುದೋ ಅದನ್ನು ಬರೆಯುತ್ತೇನೆ ಹಾಗೂ ನಾನು ಬರೆದಿದ್ದು ನಿಜವಾಗುತ್ತದೆ," ಎಂದಿದ್ದಾರೆ.

ಇದೀಗ ವೈರಲ್‌ ಆಗಿರುವ ಶಾಸ್ತ್ರಿಯ 'ಕಥಾ' ಒಂದರ ವೀಡಿಯೋದಲ್ಲಿ ಸಭಿಕರ ಮಧ್ಯದಲ್ಲಿದ್ದ ಪತ್ರಕರ್ತರೊಬ್ಬರನ್ನು ಕರೆದು ಅವರ ಮತ್ತು ಅವರ ಕುಟುಂಬ ಸದಸ್ಯರ ಕುರಿತ ಮಾಹಿತಿಯನ್ನು ಹೇಳಿಕೊಳ್ಳುತ್ತಾರೆ. ತನ್ನ ಬಗ್ಗೆ ಇಷ್ಟೆಲ್ಲಾ ಮಾಹಿತಿ ಶಾಸ್ತ್ರಿಗಿರುವುದು‌ ಅಚ್ಚರಿ ಎಂದು ಆ ಪತ್ರಕರ್ತ ನಂತರ ಹೇಳುವುದು ಕೇಳಿಸುತ್ತದೆ. ಆದರೆ ಆ ಪತ್ರಕರ್ತನ ಕುರಿತ ಮಾಹಿತಿ ಆತನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಕಾಣಬಹುದು ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿತ್ತು.

ಹಿರಿಯ ಬಿಜೆಪಿ ನಾಯಕ ಕೈಲಾಶ್‌ ವಿಜಯವರ್ಘಿಯಾ ಸಹಿತ ಹಲವು ಬಿಜೆಪಿ ನಾಯಕರು ಈ ದೇವಮಾನವನ ಸಮರ್ಥನೆಗೆ ನಿಂತಿದ್ದಾರೆ. ಹಲವು ದ್ವೇಷದ ಭಾಷಣ ಪ್ರಕರಣದ ಆರೋಪಿಯಾಗಿರುವ ಬಿಜೆಪಿ ನಾಯಕ ಕಪಿಲ್‌ ಮಿಶ್ರಾ ಅಂತೂ ಒಂದು ಹೆಜ್ಜೆ ಮುಂದೆ ಹೋಗಿ ಶಾಸ್ತ್ರಿ ಪರ ದಿಲ್ಲಿಯಲ್ಲಿ ರ್ಯಾಲಿ ನಡೆಸಿದ್ದೇ ಅಲ್ಲದೆ, ಧಾರ್ಮಿಕ ಮತಾಂತರಗಳು ಮತ್ತು ʻಲವ್‌ ಜಿಹಾದ್‌ʼ ವಿರುದ್ಧ ಮಾತನಾಡಿದ್ದಕ್ಕಾಗಿ ಶಾಸ್ತ್ರಿಯನ್ನು ಟಾರ್ಗೆಟ್‌ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಬಾಗೇಶ್ವರ್‌ ಧಾಮ್‌ ವೆಬ್‌ಸೈಟ್‌ ಪ್ರಕಾರ ಶಾಸ್ತ್ರಿಯ ವಯಸ್ಸು 26 ಆಗಿದ್ದು ಅವರ ಕಥಾಗಳಿಂದಾಗಿ ಲಕ್ಷಾಂತರ ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಅವರು ಹಲವಾರು ಸಮಾಜ ಕಲ್ಯಾಣ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ವೆಬ್‌ಸೈಟ್‌ ತಿಳಿಸುತ್ತದೆ.

ಇದನ್ನೂ ಓದಿ: ಕರ್ನಾಟಕ ಹಿಜಾಬ್ ವಿವಾದದ ವಿಚಾರಣೆ ನಡೆಸಲು ತ್ರಿಸದಸ್ಯ ಪೀಠ ರಚಿಸುವ ಕುರಿತು ಸುಪ್ರೀಂಕೋರ್ಟ್ ಚಿಂತನೆ

Similar News