ಡಬ್ಲ್ಯುಎಫ್ಐ ಅಧ್ಯಕ್ಷರ ವಿರುದ್ಧ ಆರೋಪಗಳ ತನಿಖೆಗೆ ಮೇರಿ ಕೋಮ್ ನೇತೃತ್ವದ ಉಸ್ತುವಾರಿ ಸಮಿತಿ

Update: 2023-01-23 17:36 GMT

ಹೊಸದಿಲ್ಲಿ, ಜ.23: ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್ಐ)ದ ಅಧ್ಯಕ್ಷ ಬ್ರಿಜ್ಭೂಷಣ ಶರಣ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪಗಳ ತನಿಖೆಯನ್ನು ನಡೆಸಲಿರುವ ಐವರು ಸದಸ್ಯರ ಮೇಲ್ವಿಚಾರಣಾ ಸಮಿತಿಯನ್ನು ಖ್ಯಾತ ಬಾಕ್ಸರ್ ಎಂ.ಸಿ.ಮೇರಿ ಕೋಮ್ ಅವರು ಮುನ್ನಡೆಸಲಿದ್ದಾರೆ. 

ಸರಕಾರವು ರಚಿಸಿರುವ ಸಮಿತಿಯು ಮುಂದಿನ ಒಂದು ತಿಂಗಳ ಕಾಲ ಡಬ್ಲುಎಫ್ಐನ ದೈನಂದಿನ ವ್ಯವಹಾರಗಳನ್ನೂ ನಿರ್ವಹಿಸಲಿದೆ. ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಯೋಗೇಶ್ವರ ದತ್ತ,ಮಾಜಿ ಬ್ಯಾಡ್ಮಿಂಟನ್ ಆಟಗಾರ ಹಾಗೂ ಮಿಷನ್ ಒಲಿಂಪಿಕ್ ಸೆಲ್ನ ಸದಸ್ಯೆ ತೃಪ್ತಿ ಮುರ್ಗುಂಡೆ, ಟಾರ್ಗೆಟ್ ಒಲಿಂಪಿಕ್ ಪೋಡಿಯಮ್ ಸ್ಕೀಮ್ (ಟಿಒಪಿಎಸ್)ನ ಮಾಜಿ ಸಿಇಒ ರಾಜಗೋಪಾಲನ್ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್)ದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕಿ (ತಂಡಗಳು) ರಾಧಿಕಾ ಸ್ರೀಮನ್ ಅವರು ಸಮಿತಿಯ ಇತರ ಸದಸ್ಯರಾಗಿದ್ದಾರೆ.

ಕೇಂದ್ರ ಕ್ರೀಡಾ ಸಚಿವ ಅನುರಾಗ ಕಶ್ಯಪ್ ಅವರು ಸೋಮವಾರ ಸಮಿತಿ ರಚನೆಯನ್ನು ಪ್ರಕಟಿಸಿದರು.

Similar News