ಭಾರತವನ್ನು ಶ್ರೇಷ್ಠ ರಾಷ್ಟ್ರವಾಗಿಸುವುದು ನೇತಾಜಿ ಮತ್ತು ಆರೆಸ್ಸೆಸ್ ನ ಸಮಾನ ಗುರಿ: ಮೋಹನ್ ಭಾಗವತ್‌

Update: 2023-01-23 17:38 GMT

ಕೋಲ್ಕತಾ, ಜ.23: ತನ್ನ ಬಲಪಂಥೀಯ ಸಂಘಟನೆಯ ಮತ್ತು ನೇತಾಜಿ ಸುಭಾಷಚಂದ್ರ ಬೋಸ್ ಅವರ ಗುರಿಗಳು ಒಂದೇ ಆಗಿವೆ,ಅದು ಭಾರತವನ್ನು ಶ್ರೇಷ್ಠ ರಾಷ್ಟ್ರವನ್ನಾಗಿಸುವುದು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ ಅವರು ಸೋಮವಾರ ಇಲ್ಲಿ ಹೇಳಿದರು.

ಆರೆಸ್ಸೆಸ್ ಮತ್ತು ನೇತಾಜಿಯವರ ಸಿದ್ಧಾಂತಗಳು ಒಂದೇ ಆಗಿರಲಿಲ್ಲ ಎಂಬ ಟೀಕೆಗಳ ನಡುವೆಯೇ ಭಾಗವತ ಹೇಳಿಕೆಯು ಹೊರಬಿದ್ದಿದೆ. ನೇತಾಜಿಯವರು ಆರೆಸ್ಸೆಸ್ನ ಹಿಂದುತ್ವ ಸಿದ್ಧಾಂತಕ್ಕೆ ವಿರುದ್ಧವಾದ ಜಾತ್ಯತೀತತೆಯಲ್ಲಿ ನಂಬಿಕೆಯನ್ನು ಹೊಂದಿದ್ದರು ಎಂದು ಟೀಕಾಕಾರರು ಬೆಟ್ಟು ಮಾಡಿದ್ದಾರೆ.

ನೇತಾಜಿಯವರ 126ನೆೀ ಜನ್ಮದಿನವಾದ ‘ಪರಾಕ್ರಮ ದಿವಸ್’ ಅಂಗವಾಗಿ ಶಹೀದ್ ಮಿನಾರ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಸ್ವಾತಂತ್ರ ಹೋರಾಟದಲ್ಲಿ ಅವರ ಕೊಡುಗೆಯನ್ನು ಪ್ರಶಂಸಿಸಿದ ಭಾಗವತ, ಬೋಸ್ ಅವರ ಗುಣಗಳು ಮತ್ತು ಬೋಧನೆಗಳನ್ನು ಮೈಗೂಡಿಸಿಕೊಳ್ಳುವಂತೆ ಹಾಗೂ ದೇಶವನ್ನು ವಿಶ್ವಗುರುವನ್ನಾಗಿ ಮಾಡಲು ಶ್ರಮಿಸುವಂತೆ ಪ್ರತಿಯೊಬ್ಬರನ್ನೂ ಆಗ್ರಹಿಸಿದರು.

‘ನೇತಾಜಿಯವರು ನಿರ್ಮಿಸಲು ಬಯಸಿದ್ದ ಭಾರತದ ಕನಸು ಇನ್ನೂ ನನಸಾಗಿಲ್ಲ,ಅದನ್ನು ಸಾಧಿಸಲು ನಾವು ಶ್ರಮಿಸಬೇಕು ’ ಎಂದು ಹೇಳಿದ ಅವರು,ಸನ್ನಿವೇಶಗಳು ಮತ್ತು ಮಾರ್ಗಗಳು ಬೇರೆಯಾಗಿರಬಹುದು,ಆದರೆ ಗಮ್ಯವು ಒಂದೇ ಆಗಿರುತ್ತದೆ ಎಂದರು.

ಸುಭಾಷ್ ಬಾಬು ಮೊದಲು ಕಾಂಗ್ರೆಸ್ನೊಂದಿಗೆ ಗುರುತಿಸಿಕೊಂಡಿದ್ದರು,ಅದರ ಸತ್ಯಾಗ್ರಹ ಮತ್ತು ಆಂದೋಲನದ ಮಾರ್ಗವನ್ನು ಅನುಸರಿಸಿದ್ದರು. ಆದರೆ ಅದು ಸಾಲದು ಮತ್ತು ಸ್ವಾತಂತ್ರ ಹೋರಾಟದ ಅಗತ್ಯವಿದೆ ಎಂದು ಅರಿತಾಗ ಅವರು ಆ ನಿಟ್ಟಿನಲ್ಲಿ ಕೆಲಸ ಮಾಡಿದ್ದರು. ಮಾರ್ಗಗಳು ಬೇರೆಯಾಗಿದ್ದರೂ ಗುರಿಗಳು ಒಂದೇ ಆಗಿವೆ ಎಂದ ಭಾಗವತ,‘ನಮ್ಮೆದುರಿಗೆ ಅನುಸರಿಸಲು ಸುಭಾಷ್ ಬಾಬು ಅವರ ಆದರ್ಶಗಳಿವೆ. ಅವರು ಹೊಂದಿದ್ದ ಗುರಿಗಳು ನಮ್ಮದೂ ಆಗಿವೆ. ಭಾರತವು ವಿಶ್ವದ ಸಣ್ಣ ಆವೃತ್ತಿಯಾಗಿದೆ ಮತ್ತು ಅದು ಜಗತ್ತಿಗೆ ನೆಮ್ಮದಿಯನ್ನು ಒದಗಿಸಬೇಕಿದೆ ಎಂದು ಅವರು ಹೇಳಿದ್ದರು. ನಾವೆಲ್ಲರೂ ಆ ನಿಟ್ಟಿನಲ್ಲಿ ಶ್ರಮಿಸಬೇಕು ’ ಎಂದರು.

Similar News