ಆರೋಗ್ಯವಂತ ವ್ಯಕ್ತಿ ಎಷ್ಟು ವರ್ಷ ಬದುಕಬಹುದು?: ಚರ್ಚೆಗೆ ಗ್ರಾಸವಾದ ಹಿರಿಯಜ್ಜಿ ನಿಧನ

Update: 2023-01-24 02:41 GMT

ಪ್ಯಾರೀಸ್: ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎನಿಸಿದ್ದ 118 ವರ್ಷ ವಯಸ್ಸಿನ ಮಹಿಳೆ ಮೃತಪಟ್ಟಿದ್ದಾರೆ. ಆರೋಗ್ಯವಂತ ಮನುಷ್ಯನೊಬ್ಬ ಎಷ್ಟು ವರ್ಷ ಬದುಕಲು ಸಾಧ್ಯ ಎಂಬ ಶತಮಾನಗಳ ಚರ್ಚೆಗೆ ಈ ಘಟನೆ ಮತ್ತೆ ಚಾಲನೆ ನೀಡಿದೆ.

ಗಿನಿಸ್ ವಿಶ್ವದಾಖಲೆಗಳ ಪ್ರಕಾರ, ಫ್ರಾನ್ಸ್‌ನ ಕ್ರೈಸ್ತ ಸನ್ಯಾಸಿನಿ ಲೂಸಿಲ್ ರ್ಯಾಂಡಮ್ ಕಳೆದ ವಾರ ಮೃತಪಟ್ಟ ಬಳಿಕ ಸ್ಪೇನ್‌ನ ಮಾರಿಯಾ ಬ್ರನ್ಯಾಸ್ ಮೊರೇರಾ (115), ವಿಶ್ವದ ಹಿರಿಯಜ್ಜಿ ಪಟ್ಟ ಅಲಂಕರಿಸಿದ್ದಾರೆ.

ಯಾವುದೇ ಅಪಘಾತ ಅಥವಾ ಕಾಯಿಲೆಗಳಿಗೆ ಬಲಿಯಾಗದಿದ್ದರೆ ಆರೋಗ್ಯವಂತ ವ್ಯಕ್ತಿಯೊಬ್ಬ 100 ವರ್ಷ ಬದುಕಲು ಸಾಧ್ಯ ಎಂದು ಫ್ರಾನ್ಸ್‌ನ ವಿಜ್ಞಾನಿ ಜಾರ್ಜಿಯಸ್ ಯೂಲಿಸ್ ಲೆಕ್ಲೆರ್ಕ್ 18ನೇ ಶತಮಾನದಲ್ಲಿ ಪ್ರತಿಪಾದಿಸಿದ್ದರು. ಆ ಬಳಿಕ ವೈದ್ಯಕೀಯ ರಂಗದ ಸುಧಾರಣೆಗಳು ಮತ್ತು ಜೀವನಮಟ್ಟ ಸುಧಾರಿಸಿದ್ದರಿಂದ ಆಯಸ್ಸು ಕೆಲ ದಶಕದಷ್ಟು ಹೆಚ್ಚಿದೆ. ಫ್ರಾನ್ಸ್‌ನ ಜೆನ್ನಿ ಕಾಲ್ಮೆಂಟ್ ಅವರು 1995ರಲ್ಲಿ 120ನೇ ಹುಟ್ಟುಹಬ್ಬ ಆಚರಿಸಿಕೊಂಡದ್ದು ಹೊಸ ಮೈಲುಗಲ್ಲು ಎನಿಸಿತ್ತು. ಇವರು 122ನೇ ವಯಸ್ಸಿನಲ್ಲಿ ಮೃತಪಟ್ಟರು. ಇದುವರೆಗೆ ಸುಧೀರ್ಘ ಜೀವನ ನಡೆಸಿದ ವ್ಯಕ್ತಿ ಎಂಬ ಹೆಗ್ಗಳಿಕೆ ಇವರದ್ದು.

ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ, 2021ರಲ್ಲಿ ವಿಶ್ವಾದ್ಯಂತ 5.93 ಲಕ್ಷ ಮಂದಿ ಶತಾಯುಷಿಗಳಿದ್ದಾರೆ. ಒಂದು ದಶಕದ ಹಿಂದೆ ಈ ಪ್ರಮಾಣ 3.53 ಲಕ್ಷ ಇತ್ತು. ಮುಂದಿನ ದಶಕದಲ್ಲಿ ಶತಾಯುಷಿಗಳ ಸಂಖ್ಯೆ ದ್ವಿಗುಣಗೊಳ್ಳುವ ಸಾಧ್ಯತೆ ಇದೆ ಎಂದು ಸ್ಟಾಟಿಸ್ಟಾ ಡಾಟಾ ಏಜೆನ್ಸಿ ಅಂದಾಜಿಸಿದೆ.

ಆದರೆ ಮನುಷ್ಯ ಗರಿಷ್ಠ ಎಷ್ಟು ವರ್ಷ ಬದುಕಲು ಸಾಧ್ಯ ಎನ್ನುವ ಬಗ್ಗೆ ವಿಜ್ಞಾನಿಗಳಲ್ಲಿ ಒಮ್ಮತ ಇಲ್ಲ. ಮನುಷ್ಯನ ಗರಿಷ್ಠ ಆಯಸ್ಸು 115 ವರ್ಷ ಎಂದು ಫ್ರಾನ್ಸ್ ಜನಸಂಖ್ಯಾ ತಜ್ಞ ಜೀನ್ ಮೇರಿ ರಾಬಿನ್ ಹೇಳುತ್ತಾರೆ. ಸಂಶೋಧಕರ ಪ್ರಕಾರ, 85ನೇ ವರ್ಷದವರೆಗೆ ವಯಸ್ಸು ಹೆಚ್ಚಿದಂತೆಲ್ಲ ಸಾವಿನ ಪ್ರಮಾಣ ಹೆಚ್ಚುತ್ತಾ ಹೋಗುತ್ತದೆ. ಆ ಬಳಿಕ ಸಾವಿನ ದರ ನಿಧಾನವಾಗುತ್ತದೆ. 107ನೇ ವಯಸ್ಸಿನ ಆಸುಪಾಸಿನಲ್ಲಿ ಮೃತಪಡುವ ಶತಾಯುಷಿಗಳ ಪ್ರಮಾಣ ಶೇಕಡ 50 ರಿಂದ 60ರಷ್ಟಿರುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ.

Similar News