×
Ad

ಒಂಭತ್ತು ವರ್ಷಗಳಲ್ಲಿ ಪ್ರತಿ ಭಾರತೀಯನ ಮೇಲಿನ ಸಾಲದ ಹೊರೆ 43,124 ರೂ.ನಿಂದ 1,09,373 ರೂ.ಗೆ ಏರಿದೆ: ಕಾಂಗ್ರೆಸ್ ಆರೋಪ

Update: 2023-01-24 13:45 IST

ಹೊಸದಿಲ್ಲಿ,ಜ.23: ಕಳೆದ ಒಂಭತ್ತು ವರ್ಷಗಳ ಮೋದಿ ಸರಕಾರದ ಆಡಳಿತದಲ್ಲಿ ಪ್ರತಿ ಭಾರತೀಯನ ತಲೆಯ ಮೇಲಿನ ಸಾಲದ ಹೊರೆಯು 43,124 ರೂ.ಗಳಿಂದ 1,09,373 ರೂ.ಗಳಿಗೆ ಏರಿಕೆಯಾಗಿದ್ದು,ಇದು 2014ರಲ್ಲಿ ಇದ್ದ ಸಾಲಕ್ಕಿಂತ 2.53 ಪಟ್ಟು ಹೆಚ್ಚಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ರವಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಗೌರವ ವಲ್ಲಭ ಅವರು,2014,ಮಾ.31ಕ್ಕೆ 55.87 ಲ.ಕೋ.ರೂ.ಗಳಿದ್ದ ಭಾರತ ಸರಕಾರದ ಸಾಲವು 2023,ಮಾ.31ರ ವೇಳೆಗೆ ಅಂದಾಜು 155.31 ಲ.ಕೋ.ರೂ.ಗೆ ಏರಲಿದೆ ಎಂದು ಆರೋಪಿಸಿದರು.

2023ನೇ ವಿತ್ತವರ್ಷದ ಅಂತ್ಯದಲ್ಲಿ ಪ್ರತಿಯೊಬ್ಬ ಭಾರತೀಯನೂ ತಾನೆಂದೂ ಪಡೆದಿರದ 1,09,373 ರೂ.ಗಳ ಸಾಲಕ್ಕೆ ಹೊಣೆಯಾಗಿರುತ್ತಾನೆ. 1947ರಿಂದ 2014,ಮಾ.31ರವರೆಗೆ ಪ್ರತಿ ಭಾರತೀಯನ ತಲೆಯ ಮೇಲೆ 43,124 ರೂ.ಗಳ ಸಾಲವಿತ್ತು, ಆದರೆ ಕಳೆದ ಒಂಭತ್ತು ವರ್ಷಗಳಲ್ಲಿ ಅದು 66,249 ರೂ.ಗಳಷ್ಟು ಹೆಚ್ಚಿ 1,09,373 ರೂ.ಗಳಿಗೆ ತಲುಪಿದೆ ಎಂದ ಅವರು,2022ನೇ ಸಾಲಿನ ಐಎಂಎಫ್ ವರದಿಯಂತೆ ನಮ್ಮ ಸಾಲ ಜಿಡಿಪಿಯ ಶೇ.83ರಷ್ಟಿತ್ತು. ಇದು ನಮ್ಮ ಸಮಾನ ರಾಷ್ಟ್ರಗಳು,ಉದಯೋನ್ಮುಖ ಮತ್ತು ಅಭಿವೃಧ್ಧಿಶೀಲ ಆರ್ಥಿಕತೆ (ಸರಾಸರಿ ಶೇ.64.5)ಗಳಿಗಿಂತ ಹೆಚ್ಚಾಗಿದೆ ಎಂದರು.

ವರದಿಗಳಂತೆ ಈಗ ಭಾರತದ ಶೇ.5ರಷ್ಟು ಅತ್ಯಂತ ಶ್ರೀಮಂತರು ದೇಶದ ಒಟ್ಟು ಸಂಪತ್ತಿನ ಶೇ.60ಕ್ಕೂ ಅಧಿಕ ಪಾಲನ್ನು ಹೊಂದಿದ್ದಾರೆ ಮತ್ತು ಕೆಳಸ್ತರದ ಶೇ.50ರಷ್ಟು ಜನರು ಒಂದಾಗಿ ಕೇವಲ ಶೇ.3ರಷ್ಟು ಸಂಪತ್ತನ್ನು ಹಂಚಿಕೊಂಡಿದ್ದಾರೆ. ಇನ್ನೊಂದೆಡೆ ಒಟ್ಟು 14.83 ಲ.ಕೋ.ರೂ.ಗಳ ಜಿಎಸ್ಟಿ ಸಂಗ್ರಹದ ಶೇ.64ರಷ್ಟು ಪಾಲು ಕೆಳಸ್ತರದ ಶೇ.50ರಷ್ಟು ಜನಸಂಖ್ಯೆಯಿಂದ ಬಂದಿದ್ದರೆ,ಉನ್ನತ ಶೇ.10ರಷ್ಟು ಜನಸಂಖ್ಯೆಯ ಪಾಲು ಕೇವಲ ಶೇ.3ರಷ್ಟಿದೆ ಎಂದು ವಲ್ಲಭ್ ಹೇಳಿದರು.

Similar News