ತಿಂಗಳಲ್ಲಿ ಮೂರನೇ ಬಾರಿ ದಿಲ್ಲಿ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕಂಪನ

Update: 2023-01-24 18:15 GMT

ಹೊಸದಿಲ್ಲಿ, ಜ. 24: ನೇಪಾಳದಲ್ಲಿ ಮಂಗಳವಾರ ಅಪರಾಹ್ನ 5.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ದಿಲ್ಲಿ, ಎನ್‌ಸಿಆರ್ ಹಾಗೂ ಜೈಪುರದ ವಿವಿಧ ಭಾಗಗಳಲ್ಲಿ ಕಂಪನದ ಅನುಭವವಾಗಿದೆ. 

ಭೂಕಂಪನ ಅಪರಾಹ್ನ 2.28ಕ್ಕೆ ಸಂಭವಿಸಿದ್ದು, ಉತ್ತರಾಖಂಡದಲ್ಲಿರುವ ಪಿತೋರ್‌ಗಢದ ಪೂರ್ವಕ್ಕೆ 148 ಕಿ.ಮೀ. ದೂರದಲ್ಲಿರುವ ನೇಪಾಳದಲ್ಲಿ ಕೇಂದ್ರವನ್ನು ಹೊಂದಿತ್ತು ಎಂದು ಭೂಕಂಪ ಶಾಸ್ತ್ರದ ರಾಷ್ಟ್ರೀಯ ಕೇಂದ್ರ ಹೇಳಿದೆ. ‘‘ಭೂಕಂಪನದ ಆಘಾತ ಭಯಾನಕವಾಗಿತ್ತು’’ ಎಂದು ನೋಯ್ಡಾದ ಬಹುಮಹಡಿಯ ಕಟ್ಟಡದಲ್ಲಿ ವಾಸಿಸುತ್ತಿರುವ ಶಂತನು ಅವರು ಹೇಳಿದ್ದಾರೆ. 

‘‘ನಾನು ಸಿವಿಕ್ ಸೆಂಟರ್‌ನಲ್ಲಿರುವ ಒಂದು ಬ್ಲಾಕ್‌ನ 5ನೇ ಮಹಡಿಯಲ್ಲಿ ಇದ್ದೆ. ನನ್ನ ಪಾದದ ಅಡಿಯಲ್ಲಿ ಘರ್ಜಿಸುವ ಸದ್ದು ಕೇಳಿ ಬಂತು ಹಾಗೂ ಲಘುವಾಗಿ ನಡುಗುವುದು ಅನುಭವಕ್ಕೆ ಬಂತು. ಬಹುಶಃ  ಭೂಕಂಪನ ಇಲ್ಲಿಂದ ಹಾದು ಹೋಗಿರಬೇಕು’’ ಎಂದು ದಿಲ್ಲಿಯ ನಿವಾಸಿ ಅಮಿತ್ ಪಾಂಡೆ ಅವರು ಹೇಳಿದ್ದಾರೆ. 

ದಿಲ್ಲಿಯ ಮಹಾನಗರ ಪಾಲಿಕೆಯ ಕೇಂದ್ರ ಕಚೇರಿ ಇರುವ ಸಿವಿಕ್ ಸೆಂಟರ್‌ನ ಕಟ್ಟಡದಲ್ಲಿ ಕಲಾಪದಲ್ಲಿ ತೊಡಗಿದ್ದ ಹಲವರಿಗೆ ಭೂಕಂಪನದ ಅನುಭವ ಉಂಟಾಗಿದೆ.  ರಾಜಸ್ಥಾನದ ರಾಜಧಾನಿ ಜೈಪುರದ ಹಲವು ಭಾಗಗಳಲ್ಲಿ ಕೂಡ ಭೂಕಂಪದ ಅನುಭವವಾಗಿದೆ. ಪ್ರಾಣ ಅಥವಾ ಸೊತ್ತು ಹಾನಿಯಾದ ಬಗ್ಗೆ ವರದಿಯಾಗಿಲ್ಲ. 

Similar News