ಚಂಡೀಗಢ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್‌ ಬೆದರಿಕೆ : ಮುಂದುವರಿದ ಶೋಧ ಕಾರ್ಯಾಚರಣೆ

Update: 2023-01-24 10:49 GMT

 ಚಂಡೀಗಢ: ಚಂಡೀಗಢದ ಸೆಕ್ಟರ್‌ 43 ಪ್ರದೇಶದಲ್ಲಿರುವ ಜಿಲ್ಲಾ ಕೋರ್ಟ್‌ ಸಂಕೀರ್ಣದಲ್ಲಿ ʼಸ್ಫೋಟಕಗಳಿವೆʼ ಎಂದು ಅನಾಮಿಕ ವ್ಯಕ್ತಿಯೊಬ್ಬನಿಂದ ಬಂದ ಕರೆಯ ಹಿನ್ನೆಲೆಯಲ್ಲಿ ಇಂದು ಕೋರ್ಟ್‌ ಆವರಣದಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆದಿದೆ.

ಬಾಂಬ್‌ ಬೆದರಿಕೆ ಕರೆ ಬಂದ ಬೆನ್ನಲ್ಲೇ ನ್ಯಾಯಾಧೀಶರು, ವಕೀಲರು, ಕೋರ್ಟಿನ ಎಲ್ಲಾ ಸಿಬ್ಬಂಧಿ ಮತ್ತು ಸಂದರ್ಶಕರನ್ನು ಕನಿಷ್ಠ 30 ನ್ಯಾಯಾಲಯ ಸಭಾಂಗಣಗಳಿಂದ ಹೊರಹೋಗುವಂತೆ ಸೂಚಿಸಲಾಯಿತು. ಶೋಧ ಕಾರ್ಯಾಚರಣೆಯು ಹಿರಿಯ ಪೊಲೀಸ್‌ ಅಧಿಕಾರಿಗಳ ಉಪಸ್ಥಿತಿಯಲ್ಲಿ ಈಗಲೂ ಮುಂದುವರಿದಿದೆ.

ಅನಾಮಿಕ ವ್ಯಕ್ತಿಯೊಬ್ಬ ಹರ್ಯಾಣ ಪೊಲೀಸ್‌ ಕಂಟ್ರೋಲ್‌ ರೂಂಗೆ ಕರೆ ಮಾಡಿದ್ದನೆಂದು ತಿಳಿದು ಬಂದಿದೆ. ತಕ್ಷಣ ಈ ಮಾಹಿತಿಯನ್ನು ಚಂಡೀಗಢದ ಪೊಲೀಸ್‌ ಕಂಟ್ರೋಲ್‌ ರೂಂಗೆ ರವಾನಿಸಲಾಗಿತ್ತು ಹಾಗೂ ಕೆಲವೇ ಕ್ಷಣಗಳಲ್ಲಿ ಶೋಧ ಕಾರ್ಯಾಚರಣೆ ಆರಂಭಗೊಂಡಿತ್ತು. ಕೋರ್ಟ್‌ ಆವರಣದಲ್ಲಿ ಭಾರೀ ಸಂಖ್ಯೆಯ ಪೊಲೀಸರಿದ್ದು ಶ್ವಾನ ದಳ ಹಾಗೂ ಬಾಂಬ್‌ ನಿಷ್ಕ್ರಿಯ ತಂಡ ಕೂಡ ಸನ್ನದ್ಧ ಸ್ಥಿತಿಯಲ್ಲಿದೆ. ಉಗ್ರ ನಿಗ್ರಹ ದಳ ಹಾಗೂ ಪೊಲೀಸ್‌ ಫೊರೆನ್ಸಿಕ್‌ ತಂಡವೂ ಸ್ಥಳದಲ್ಲಿದೆ.

Similar News