ಏಕದಿನ ಕ್ರಿಕೆಟ್: ರಿಕಿ ಪಾಂಟಿಂಗ್ ದಾಖಲೆ ಸರಿಗಟ್ಟಿದ ರೋಹಿತ್ ಶರ್ಮಾ

Update: 2023-01-24 11:27 GMT

ಹೊಸದಿಲ್ಲಿ, ಜ.24: ನ್ಯೂಝಿಲ್ಯಾಂಡ್ ವಿರುದ್ಧ ಇಂದೋರ್‌ನಲ್ಲಿ ಮಂಗಳವಾರ ನಡೆದ 3ನೇ ಏಕದಿನ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿದ ಭಾರತದ ನಾಯಕ ರೋಹಿತ್ ಶರ್ಮಾ ದೀರ್ಘ ಸಮಯದ ಬಳಿಕ ಮೂರಂಕೆಯನ್ನು ತಲುಪಿದ್ದಲ್ಲದೆ, ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.

35ರ ಹರೆಯದ ರೋಹಿತ್ 83 ಎಸೆತಗಳಲ್ಲಿ ಶತಕ ಪೂರೈಸಿದರು. 2020ರ ಜನವರಿ ನಂತರ ರೋಹಿತ್ ಗಳಿಸಿದ ಮೊದಲ ಏಕದಿನ ಶತಕ ಇದಾಗಿದೆ. ನ್ಯೂಝಿಲ್ಯಾಂಡ್ ವಿರುದ್ಧ 2ನೇ ಬಾರಿ ಶತಕ ಸಿಡಿಸಿದರು.
ರೋಹಿತ್ ತಾನಾಡಿರುವ 241ನೇ ಏಕದಿನ ಪಂದ್ಯದಲ್ಲಿ 30ನೇ ಶತಕ ಸಿಡಿಸಿದರು. ಈ ಮೂಲಕ ಆಸ್ಟ್ರೇಲಿಯದ ಮಾಜಿ ನಾಯಕ ಪಾಂಟಿಂಗ್ ದಾಖಲೆಯನ್ನು ಸರಿಗಟ್ಟಿದರು. ಪಾಂಟಿಂಗ್ 365 ಪಂದ್ಯಗಳಲ್ಲಿ 30 ಶತಕಗಳನ್ನು ಸಿಡಿಸಿದ್ದರು.

ಗರಿಷ್ಠ ಏಕದಿನ ಶತಕ ಗಳಿಸಿದವರ ಪಟ್ಟಿಯಲ್ಲಿ ಸಚಿನ್ ತೆಂಡುಲ್ಕರ್(49 ಶತಕ) ಹಾಗೂ ವಿರಾಟ್ ಕೊಹ್ಲಿ(46 ಶತಕ)ಮೊದಲೆರಡು ಸ್ಥಾನದಲ್ಲಿದ್ದಾರೆ.

ರೋಹಿತ್ ಶತಕ ಸಿಡಿಸಿದ ಬೆನ್ನಿಗೇ 101 ರನ್‌ಗೆ ಮಿಚೆಲ್ ಬ್ರೆಸ್‌ವೆಲ್‌ಗೆ ವಿಕೆಟ್ ಒಪ್ಪಿಸಿದರು. ರೋಹಿತ್ 85 ಎಸೆತಗಳಲ್ಲಿ 9 ಬೌಂಡರಿ ಹಾಗೂ 6 ಸಿಕ್ಸರ್‌ಗಳನ್ನು ಸಿಡಿಸಿದರು. ರೋಹಿತ್ ತನ್ನ ವೃತ್ತಿಜೀವನದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಈ ತನಕ 273 ಸಿಕ್ಸರ್ ಹಾಗೂ 896 ಬೌಂಡರಿಗಳನ್ನು ಬಾರಿಸಿದ್ದಾರೆ.

2018ರಲ್ಲಿ ನಾಟಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧ 82 ಎಸೆತಗಳಲ್ಲಿ ಶತಕ ಸಿಡಿಸಿದ್ದ ರೋಹಿತ್ ಇಂದು ಎರಡನೇ ಅತ್ಯಂತ ವೇಗದಲ್ಲಿ (83 ಎಸೆತ)ಶತಕವನ್ನು ಪೂರೈಸಿದರು.

ಶುಭಮನ್ ಗಿಲ್ ಶತಕ

ರೋಹಿತ್ ಅವರ ಆರಂಭಿಕ ಜೊತೆಗಾರ ಶುಭಮನ್ ಗಿಲ್ ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿದ್ದು, ಕೇವಲ 72 ಎಸೆತಗಳಲ್ಲಿ ಶತಕ ಸಿಡಿಸಿದರು. 112 ರನ್ ಗಳಿಸಿ ಟಿಕ್ನೆರ್‌ಗೆ ವಿಕೆಟ್ ಒಪ್ಪಿಸಿದ ಗಿಲ್ 78 ಎಸೆತಗಳಲ್ಲಿ 13 ಬೌಂಡರಿ ಹಾಗೂ 5 ಸಿಕ್ಸರ್‌ಗಳನ್ನು ಸಿಡಿಸಿದ್ದರು.

Similar News