ಮೂಡುಬಿದಿರೆ: ಶಿರ್ತಾಡಿಯಲ್ಲಿ 14 ಕೋಟಿ ರೂ. ವೆಚ್ಚದ ವಿದ್ಯುತ್ ಉಪಕೇಂದ್ರದ ಶಿಲಾನ್ಯಾಸ

Update: 2023-01-24 13:16 GMT

ಮೂಡುಬಿದಿರೆ: ಕಳೆದ 20 ತಿಂಗಳಲ್ಲಿ ರಾಜ್ಯದಲ್ಲಿ 350ಕ್ಕೂ ಅಧಿಕ ಸಬ್‍ಸ್ಟೇಶನ್‍ಗಳನ್ನು ಸ್ಥಾಪಿಸಲಾಗಿದ್ದು ಇತರ ಹಲವು ಸಬ್‍ಸ್ಟೇಶನ್‍ಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗಿದ್ದು ದಾಖಲೆ. ಬೆಳಕು ಯೋಜನೆಯಿಂದ ಎರಡೂವರೆ ಲಕ್ಷ ಕುಟುಂಬಗಳು ಪ್ರಯೋಜನಪಡೆದಿದ್ದಾರೆ. ಪ್ರತಿ ಮೂರನೇ ಶನಿವಾರ ನಡೆಯುವ ವಿದ್ಯುತ್ ಅದಾಲತ್‍ನಿಂದ ಗ್ರಾಮಾಂತರ ಪ್ರದೇಶದ ವಿದ್ಯುತ್ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿದೆ. ಎಸ್‍ಸಿ ಎಸ್‍ಟಿಯವರಿಗಾಗಿರುವ ಅಮೃತ್ ಜ್ಯೋತಿ ಯೋಜನೆಯೂ ಫಲಪ್ರದವಾಗಿದೆ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು. 

ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿಯಿಂದ ಗುಣಮಟ್ಟದ ವಿದ್ಯುತ್ ಸರಬರಾಜಿಗಾಗಿ ಶಿರ್ತಾಡಿ ದಡ್ಡಲ್‍ಪಲ್ಕೆಯಲ್ಲಿ 14 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ 33/11 ಕೆವಿ ವಿದ್ಯುತ್ ಉಪಕೇಂದ್ರದ  ನಿರ್ಮಾಣಕ್ಕೆ ಮಂಗಳವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. 

ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿದರು. ಜನರ ಬಹು ವರ್ಷಗಳ ಬೇಡಿಕೆಯಾಗಿದ್ದ ವಿದ್ಯುತ್ ಸಬ್‍ಸ್ಟೇಶನ್ ಸ್ಥಾಪನೆಯಿಂದ ಶಿರ್ತಾಡಿ, ವಾಲ್ಪಾಡಿ, ಅಳಿಯೂರು, ಮಾಂಟ್ರಾಡಿ, ದರೆಗುಡ್ಡೆ, ಹೊಸ್ಮಾರು ಮೊದಲಾದ ಪ್ರದೇಶಗಳು ಕಳೆದ 15 ವರ್ಷಗಳಿಂದ ಎದುರಿಸುತ್ತಿರುವ  ವಿದ್ಯುತ್ ಸಮಸ್ಯೆಗಳು ದೂರವಾಗಿ, ಗುಣಮಟ್ಟದ ವಿದ್ಯುತ್ ಪೂರೈಕೆ ಸಾಧ್ಯವಾಗಲಿದೆ. ಕ್ಷೇತ್ರದಲ್ಲಿ 200 ಟಿಸಿಗಳ ಬೇಡಿಕೆ ಇದ್ದು 60ನ್ನು ಸ್ಥಾಪಿಸಲಾಗಿದೆ. 8.5 ಕೋ.ರೂ. ವೆಚ್ಚದಲ್ಲಿ ಹಳೆಯ ತಂತಿ ಬದಲಾಯಿಸುವ ಕಾಮಗಾರಿಗಳು ನಡೆಯಬೇಕಾಗಿದೆ. ಮೂಡುಬಿದಿರೆ ಮೆಸ್ಕಾಂನಲ್ಲಿ ಎರಡು ಡಿವಿಶನ್ ಮತ್ತು ಎರಡು ಸೆಕ್ಷನ್, ಬೆಳುವಾಯಿಯಲ್ಲಿ ಎರಡು ಸೆಕ್ಷನ್ ಆಗಬೇಕಾಗಿದೆ ಎಂದು ಇಂಧನ ಸಚಿವರ ಬಳಿ ಮನವಿ ಮಾಡಿದರು. 

ಶಿರ್ತಾಡಿ ಗ್ರಾಪಂ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಮೂಡುಬಿದಿರೆ ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್, ಮುಡಾ ಮಾಜಿ ಅಧ್ಯಕ್ಷ ಮೇಘನಾಥ ಶೆಟ್ಟಿ, ಹಿರಿಯ ಕೃಷಿಕ ಎಸ್.ಡಿ. ಸಂಪತ್ ಸಾಮ್ರಾಜ್ಯ ಮುಖ್ಯ ಅತಿಥಿಗಳಾಗಿದ್ದರು. 

ಮೆಸ್ಕಾಂ ನಿರ್ದೇಶಕಿ (ತಾಂತ್ರಿಕ) ಡಿ. ಪದ್ಮಾವತಿ, ಮುಖ್ಯ ಆರ್ಥಿಕ ಅಧಿಕಾರಿ ಜಗದೀಶ್, ಮುಖ್ಯ ಎಂಜಿನಿಯರ್ ಪುಷ್ಪಾ ಎಸ್.ಎ., ಅಧೀಕ್ಷಕ  ರವಿಕಾಂತ್ ಕಾಮತ್,  ವಿವಿಧೆಡೆಗಳ ಮೆಸ್ಕಾಂ ಅಧಿಕಾರಿಗಳು, ನೌಕರರು, ಗುತ್ತಿಗೆದಾರ ಮಣಿಪಾಲ್ ಎನರ್ಜಿ ಆ್ಯಂಡ್ ಇನ್‍ಫ್ರಾಟೆಕ್ ಲಿ.ನ ಅಧಿಕಾರಿಗಳು ಉಪಸ್ಥಿತರಿದ್ದರು.  

ಮೆಸ್ಕಾಂ ಅಧೀಕ್ಷಕ ಎಂಜಿನಿಯರ್ (ವಿ) ಕೃಷ್ಣರಾಜ ಕೆ. ಸ್ವಾಗತಿಸಿದರು. ಕಾವೂರು ವಿಭಾಗಗ ಕಾರ್ಯನಿರ್ವಾಹಕ ನಿ. ಇಂಜಿನಿಯರ್ ಸಂತೋಷ್ ನಾಯ್ಕ್ ಎಸ್. ವಂದಿಸಿದರು. ಗಣೇಶ ಬಿ. ಅಳಿಯೂರು ನಿರೂಪಿಸಿದರು. 

Similar News