×
Ad

ಉಡುಪಿ| ಕೋಡಿಬೆಂಗ್ರೆ ಶಾಲಾ ಶಿಕ್ಷಕರ ವರ್ಗಾವಣೆಗೆ ಪೋಷಕರ ವಿರೋಧ; ಕೌನ್ಸಿಲಿಂಗ್ ಕಚೇರಿ ಮುಂದೆ ಪ್ರತಿಭಟನೆ

ಪೊಲೀಸರೊಂದಿಗೆ ವಾಗ್ವಾದ

Update: 2023-01-24 19:01 IST

ಉಡುಪಿ: ಕೋಡಿಬೆಂಗ್ರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ  ಶಿಕ್ಷಕರೊಬ್ಬರನ್ನು ವರ್ಗಾವಣೆಗೊಳಿಸಿರುವುದನ್ನು ವಿರೋಧಿಸಿ ಶಾಲಾಭಿವೃದ್ಧಿ ಸಮಿತಿ ಹಾಗೂ ಪೋಷಕರು ಇಂದು ಜಿಲ್ಲೆಯ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ ನಡೆಯುತ್ತಿದ್ದ ಉಡುಪಿ ಸರಕಾರಿ ಬಾಲಕಿಯರ ಕಾಲೇಜಿನ ಆವರಣದಲ್ಲಿರುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಮುಂದೆ ಪ್ರತಿಭಟನೆ ನಡೆಸಿದರು.

ಜಿಲ್ಲೆಯ ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ವರ್ಗಾವಣೆ ಮಾಡುವ ನಿಟ್ಟಿನಲ್ಲಿ ಕೌನ್ಸಿಲಿಂಗ್ ನಡೆಯುತ್ತಿದ್ದ ಸಂಸ್ಥೆಯ ಮುಂದೆ ಜಮಾಯಿಸಿದ ಕೋಡಿಬೆಂಗ್ರೆ ಶಾಲಾ ಮಕ್ಕಳ ಪೋಷಕರು, ತಮ್ಮ ಶಾಲೆಯ ಶಿಕ್ಷಕರನ್ನು ವರ್ಗಾವಣೆ ಮಾಡುವ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪೋಷಕರನ್ನು ತಡೆದು ವಾಪಾಸ್ಸು ಕಳುಹಿಸಲು ಪ್ರಯತ್ನಿಸಿದರು.

ಈ ಸಂದರ್ಭ ಪೋಷಕರು ಮತ್ತು ಪೊಲೀಸರ ಮಧ್ಯೆ ವಾಗ್ವಾದ ನಡೆಯಿತು. ನ್ಯಾಯ ಸಿಗದೆ ಇಲ್ಲಿಂದ ಹೋಗುವುದಿಲ್ಲ ಮತ್ತು ಕೂಡಲೇ ವರ್ಗಾವಣೆ ಪ್ರಕ್ರಿಯೆ ನಿಲ್ಲಿಸಬೇಕು ಎಂದು ಪೋಷಕರು ಪಟ್ಟು ಹಿಡಿದರು. ಬಳಿಕ ಆಗಮಿಸಿದ ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಡಿ.ಆರ್.ಮಂಜಪ್ಪ ಪ್ರತಿಭಟನಕಾರರನ್ನು ಸಮಾಧಾನಪಡಿಸಿ, ಸಂಬಂಧಪಟ್ಟವರಿಗೆ ಮನವಿ ಸಲ್ಲಿಸುವಂತೆ ಸೂಚನೆ ನೀಡಿದರು.  

ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ನಿರ್ದೇಶಕರುಗಳಾದ ನಾಗರಾಜ ಕುಂದರ್, ಮನೋಹರ್ ಕುಂದರ್, ರಮೇಶ್ ತಿಂಗಳಾಯ, ಪ್ರಶಾಂತ್ ಕಾಂಚನ್, ಸ್ಥಳೀಯ ಗ್ರಾಪಂ ಸದಸ್ಯರಾದ ಪ್ರಸಾದ್ ತಿಂಗಳಾಯ, ವಿನಯ ಅಮೀನ್, ಎಸ್‌ಡಿಎಂಸಿ ಉಪಾಧ್ಯಕ್ಷ ಚಂದ್ರ ಬಂಗೇರ, ಪೋಷಕರು ಹಾಗೂ ಹಳೆ ವಿದ್ಯಾರ್ಥಿಗಳು ಹಾಜರಿದ್ದರು.

ವರ್ಗಾವಣೆ ನಿಯಮಕ್ಕೆ ವಿರೋಧ
‘2020ರ ಕೊರೋನ ಸಂದರ್ಭದಲ್ಲಿ ನಮ್ಮ ಶಾಲೆಯಲ್ಲಿ ಕೇವಲ 20 ಮಕ್ಕಳಿದ್ದರು. ಮುಚ್ಚುವ ಪರಿಸ್ಥಿತಿಯಲ್ಲಿದ್ದ ಶಾಲೆಯನ್ನು ಉಳಿಸಲು ಗ್ರಾಮಸ್ಥರು ಒಂದಾಗಿ ಶ್ರಮಿಸಿದ್ದರು. ತಮ್ಮ ಮಕ್ಕಳನ್ನು ಖಾಸಗಿ ಆಂಗ್ಲ ಮಾಧ್ಯಮ ಶಾಲೆ ಯಿಂದ ತೆಗೆದು ಈ ಸರಕಾರಿ ಶಾಲೆಗೆ ಸೇರಿಸಿದರು. ಇದರಿಂದ ಇಲ್ಲಿನ ಮಕ್ಕಳ  ಸಂಖ್ಯೆ 72ಕ್ಕೆ ಏರಿತು. ಆಗ ಖಾಯಂ ಶಿಕ್ಷಕರು ನಾಲ್ಕು ಮಂದಿ ಇದ್ದರು. ಅದರಲ್ಲಿ ಒಬ್ಬರು ಟೀಚರ್ ವಾರ್ಗವಣೆ ಮಾಡಲಾಗಿತ್ತು. ಅವರ ಬದಲು ಇನ್ನೊಬ್ಬ ಶಿಕ್ಷಕರು ನೀಡುವುದಾಗಿ ಹೇಳಿ ಒಂದು ವರ್ಷಗಳಾದರೂ ನೀಡಿಲ್ಲ’ ಎಂದು ಎಸ್‌ಡಿಎಂಸಿ ಅಧ್ಯಕ್ಷ ರವೀಂದ್ರ ಶ್ರೀಯಾನ್ ತಿಳಿಸಿದರು.

2020-21ರ ಮಾನದಂಡ ಪ್ರಕಾರ 1-5 ತರಗತಿಯಲ್ಲಿ 50ಕ್ಕಿಂತ ಹೆಚ್ಚು ಮಕ್ಕಳಿದ್ದರೆ ಇಬ್ಬರು ಶಿಕ್ಷಕರು ಮತ್ತು 6-7 ತರಗತಿಯಲ್ಲಿ 11 ಮಕ್ಕಳಿದ್ದರೆ ಇಬ್ಬರು ಶಿಕ್ಷಕರು ಇರಬೇಕು ಎಂಬ ನಿಯಮ ಇತ್ತು. 2020-21ರಲ್ಲಿ ನಮ್ಮ ಶಾಲೆಯಲ್ಲಿ 6-7ತರಗತಿಯಲ್ಲಿ 10 ಮಕ್ಕಳಿದ್ದರು. ಒಂದು ಮಕ್ಕಳು ಕಡಿಮೆ ಇದ್ದಾರೆಂದು ಹೇಳಿ ಇಬ್ಬರು ಶಿಕ್ಷಕರಲ್ಲಿ ಒಬ್ಬರನ್ನು ವರ್ಗಾವಣೆ ಮಾಡಲಾಗಿದೆ. ಆದರೆ ಈಗ ನಮ್ಮ ಶಾಲೆಯಲ್ಲಿ 6-7ನೆ ತರಗತಿಯಲ್ಲಿ 11 ಮಕ್ಕಳಿದ್ದಾರೆ. ಆದುದರಿಂದ ಇಲಾಖೆಯವರು 2022-23ನೆ ಮಕ್ಕಳ ಅಂಕಿಅಂಶ ಆಧಾರದ ಮೇಲೆ ಕೌನ್ಸಿಲಿಂಗ್ ಮಾಡಬೇಕು. ಈ ಹಿಂದೆ ವರ್ಗಾವಣೆ ಮಾಡಿರುವ ಶಿಕ್ಷರನ್ನು ನೀಡ ಬೇಕು ಎಂದು ಅವರು ಒತ್ತಾಯಿಸಿದರು.

‘ನಮಗೆ ನ್ಯಾಯ ದೊರಕಿಸಿ ಕೊಡುವಂತೆ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಇಲ್ಲದಿದ್ದರೆ ಕೋಡಿಬೆಂಗ್ರೆ ಶಾಲೆಯನ್ನು ಮುಚ್ಚಿ ಹೋರಾಟ ಮಾಡುತ್ತೇವೆ. ಇದಕ್ಕೆ ಜಿಲ್ಲಾಡಳಿತ ಹೊಣೆ ಆಗುತ್ತದೆ. ಆದುದರಿಂದ ರಾಜ್ಯ ಸರಕಾರ ಹಾಗೂ ಶಿಕ್ಷಣ ಇಲಾಖೆ ಇತ್ತ ಗಮನ ಹರಿಸಿ, ಈ ಸರಕಾರಿ ಶಾಲೆಯನ್ನು ಉಳಿಸುವಂತೆ ಮಾಡಬೇಕು. ಅಲ್ಲದೆ ಶಿಕ್ಷಕರ ವರ್ಗಾವಣೆಗೆ ಇರುವ ನಿಯಮಗಳನ್ನು ಬದಲಾವಣೆ ಮಾಡಬೇಕು ಎಂದು ಎಸ್‌ಡಿಎಂಸಿ ನಿರ್ದೇಶಕ ರಮೇಶ್ ತಿಂಗಳಾಯ ಕೋಡಿಬೆಂಗ್ರೆ ಆಗ್ರಹಿಸಿದರು.

‘ಶಿಕ್ಷಕರಿದ್ದರೆ ಮಾತ್ರ ಮಕ್ಕಳನ್ನು ಸೇರಿಸುತ್ತಾರೆ. ಅದಕ್ಕಾಗಿ ಡಿಡಿಪಿಐ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಕೋಡಿಬೆಂಗ್ರೆ ಮುಚ್ಚಿ ಹೋರಾಟ ಇದಕ್ಕೆ ಜಿಲ್ಲಾಡಳಿತ ಹೊಣೆ. ರಾಜ್ಯ ಸರಕಾರ ಶಿಕ್ಷಣ ಇಲಾಖೆ ಇತ್ತ ಗಮನ ಹರಿಸಿ  ಸರಕಾರಿ ಶಾಲೆಯನ್ನು ಉಳಿಸುವಂತೆ ಮಾಡಬೇಕು. ನಿಯಮಗಳನ್ನು ಒಂದನೇ ತರಗತಿ ಎಲ್ಲ ಶಿಕ್ಷಣ ಶಿಕ್ಷಕರನ್ನು ನೀಡಬೇಕು ಈ ನಿಯಮ ಬದಲಾವಣೆ ಆಗಬೇಕು’
-ರಮೇಶ್ ತಿಂಗಳಾಯ ಕೋಡಿಬೆಂಗ್ರೆ, ಎಸ್‌ಡಿಎಂಸಿ ನಿರ್ದೇಶಕರು


ಸರಕಾರದ ಆದೇಶದಂತೆ ಈಗ ನಡೆಯುತ್ತಿರುವ ಕೌನ್ಸಿಲಿಂಗ್ ಪ್ರಕ್ರಿಯೆಗೆ ತಾತ್ಕಾಲಿಕ ತಡೆ ನೀಡಲಾಗಿಜೆ. ಮುಂದಿನ ಆದೇಶದವರೆಗೆ ಕೌನ್ಸಿಲಿಂಗ್ ಪ್ರಕ್ರಿಯೆ ನಡೆಯುವುದಿಲ್ಲ. ಇದರಿಂದ ಪ್ರಸ್ತುತ ಯಾವುದೇ ಶಾಲೆಗಳಿಗೂ ಸಮಸ್ಯೆ ಆಗುವುದಿಲ್ಲ. ಕೋಡಿಬೆಂಗ್ರೆಯ ಸ್ಥಳೀಯರ ಬೇಡಿಕೆ ನಮ್ಮ ಗಮನಕ್ಕೆ ಬಂದಿದೆ. ಈ ನಿಯಮ ರಾಜ್ಯ ಸರಕಾರ ರೂಪಿಸಿರುವುದರಿಂದ ಜಿಲ್ಲಾ ಹಂತದಲ್ಲಿ ಇದರ ಬದಲಾವಣೆಗೆ ಅವಕಾಶ ಇಲ್ಲ.
-ಕೆ.ಗಣಪತಿ, ಉಪನಿರ್ದೇಶಕರು, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ

Similar News