ಐಟಿ ನಿಯಮಗಳಿಗೆ ತಿದ್ದುಪಡಿಗಳನ್ನು ಕೈಬಿಡಲು ಐಎನ್ಎಸ್ ಆಗ್ರಹ‌

Update: 2023-01-24 16:49 GMT

ಹೊಸದಿಲ್ಲಿ,ಜ.24: ಪ್ರೆಸ್ ಇನ್ಫಾರ್ಮೇಷನ್ ಬ್ಯೂರೊ (ಪಿಐಬಿ)ದ ಸತ್ಯ ಪರಿಶೀಲನೆ ಘಟಕವು ಸುಳ್ಳು ಎಂದು ಘೋಷಿಸಿದ ಸುದ್ದಿ ಅಥವಾ ಮಾಹಿತಿಯನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳು ಅಳಿಸುವುದನ್ನು ಅಗತ್ಯವಾಗಿಸಿರುವ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳಿಗೆ ಕರಡು ತಿದ್ದುಪಡಿಯನ್ನು ಕೈಬಿಡುವಂತೆ ಇಂಡಿಯನ್ ನ್ಯೂಸ್ಪೇಪರ್ ಸೊಸೈಟಿ (ಐಎನ್ಎಸ್)ಯು ಮಂಗಳವಾರ ಕೇಂದ್ರ ಸರಕಾರವನ್ನು ಆಗ್ರಹಿಸಿದೆ.

ಸರಕಾರದ ವ್ಯವಹಾರಗಳ ಕುರಿತು ಮಾಧ್ಯಮಗಳ ಜಾಲತಾಣಗಳಲ್ಲಿಯ ಸುದ್ದಿಗಳ ವಾಸ್ತವಿಕ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ನ್ಯಾಯಸಮ್ಮತತೆ ಹಾಗೂ ಸೂಕ್ತ ಪ್ರಕ್ರಿಯೆಯ ಅತ್ಯುನ್ನತ ಮಾನದಂಡಗಳನ್ನು ಪೂರೈಸಲು ಕಾರ್ಯವಿಧಾನವೊಂದನ್ನು ಸೃಷ್ಟಿಸಲು ಸಂಬಂಧಿಸಿದವರೊಂದಿಗೆ ಸಮಾಲೋಚನೆಗಳನ್ನು ಆರಂಭಿಸುವಂತೆ ಐಎನ್ಎಸ್ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವನ್ನೂ ಕೇಳಿಕೊಂಡಿದೆ.

ವ್ಯಾಖ್ಯೆಯಂತೆ ಸರಕಾರದ ನೋಡಲ್ ಏಜೆನ್ಸಿಯಾಗಿ ಪಿಐಬಿಯ ಪಾತ್ರವು ಅದರ ಕಾರ್ಯಕ್ರಮಗಳು,ಉಪಕ್ರಮಗಳು ಮತ್ತು ಸಾಧನೆಗಳ ಕುರಿತು ಮಾಹಿತಿಯನ್ನು ಪ್ರಚಾರ ಮಾಡುವುದಾಗಿದೆ ಎಂದು ಐಎನ್ಎಸ್ ಬೆಟ್ಟು ಮಾಡಿದೆ.

ಕಳೆದ ವಾರ ಸಚಿವಾಲಯವು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು,2021ಕ್ಕೆ ಹೊರಡಿಸಿರುವ ಪರಿಷ್ಕೃತ ಕರಡು ತಿದ್ದುಪಡಿಗಳು ಪಿಐಬಿಯ ಸತ್ಯ ಪರಿಶೀಲನೆ ಘಟಕವು ಸುಳ್ಳು ಎಂದು ಘೋಷಿಸಿದ ಸುದ್ದಿ ಅಥವಾ ಮಾಹಿತಿಯನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳು ಅಳಿಸುವುದನ್ನು ಅಗತ್ಯವಾಗಿಸಿವೆ.

ಈ ತಿದ್ದುಪಡಿಗಳು ಕೇಂದ್ರ ಸರಕಾರಕ್ಕೆ ಸಂಬಂಧಿಸಿದ ಹೇಳಿಕೆಗಳನ್ನು ಪರಿಶೀಲಿಸುವ ಹೊಣೆಗಾರಿಕೆಯನ್ನು ಅದರದೇ ಏಜೆನ್ಸಿಗೆ ನೀಡುತ್ತವೆ ಮತ್ತು ಅದಕ್ಕೆ ಕಾನೂನಿನ ಶಕ್ತಿಯನ್ನು ತುಂಬುತ್ತವೆ ಎಂದಿರುವ ಐಎನ್ಎಸ್,ತನ್ನ ಸ್ವಂತ ವಿಷಯದಲ್ಲಿ ತಾನೇ ನ್ಯಾಯಾಧೀಶನಾಗಲು ಕಾನೂನನ್ನು ಮಾಡುವ ಮೂಲಕ ಸರಕಾರವು ಟೀಕೆಗಳನ್ನು ಮತ್ತು ನ್ಯಾಯಯುತವಾದ ಟೀಕೆಗಳನ್ನೂ ಪರಿಣಾಮಕಾರಿಯಾಗಿ ನಿರ್ಬಂಧಿಸುವ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಿದೆ.

ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ,ದಿ ಪ್ರೆಸ್ ಅಸೋಸಿಯೇಷನ್,ಡಿಜಿಪಬ್ ಫೌಂಡೇಷನ್ ಆಫ್ ಇಂಡಿಯಾ, ನ್ಯೂಸ್ ಬ್ರಾಡ್ಕಾಸ್ಟರ್ಸ್ ಮತ್ತು ಡಿಜಿಟಲ್ ಅಸೋಸಿಯೇಷನ್ನಂತಹ ಮಾಧ್ಯಮ ಸಂಸ್ಥೆಗಳೂ ತಿದ್ದುಪಡಿಗಳನ್ನು ಕೈಬಿಡುವಂತೆ ಈಗಾಗಲೇ ಸರಕಾರಕ್ಕೆ ಆಗ್ರಹಿಸಿವೆ.

Similar News