ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶಿಸುವುದಾಗಿ ರಾಜಕೀಯ ಗುಂಪುಗಳಿಂದ ಘೋಷಣೆ

ಮಧ್ಯಪ್ರವೇಶಿಸುವಂತೆ ಸಿಎಂ ಪಿಣರಾಯಿ ವಿಜಯನ್‌ರನ್ನು ಆಗ್ರಹಿಸಿದ ಬಿಜೆಪಿ

Update: 2023-01-24 17:21 GMT

ತಿರುವನಂತಪುರ (ಕೇರಳ), ಜ. 24: ಬಿಬಿಸಿಯ ವಿವಾದಾತ್ಮಕ ಸಾಕ್ಷ್ಯಚಿತ್ರ ‘‘ಇಂಡಿಯಾ: ದಿ ಮೋದಿ ಕ್ವಶ್ಚನ್’’ ಅನ್ನು ರಾಜ್ಯದಲ್ಲಿ ಪ್ರದರ್ಶಿಸಲಾಗುವುದು ಎಂದು ಕೇರಳದ ಹಲವು ರಾಜಕೀಯ ಗುಂಪುಗಳು ಮಂಗಳವಾರ ಘೋಷಿಸಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಧ್ಯಪ್ರವೇಶಿಸುವಂತೆ ಹಾಗೂ ಅಂತಹ ಪ್ರಯತ್ನಕ್ಕೆ ಕಡಿವಾಣ ಹಾಕುವಂತೆ ಬಿಜೆಪಿ ಆಗ್ರಹಿಸಿದೆ. 

ಸಾಕ್ಷ್ಯಚಿತ್ರವನ್ನು ರಾಜ್ಯದಲ್ಲಿ ಪ್ರದರ್ಶಿಸಲಾಗುವುದು ಎಂದು ಸಿಪಿಐ (ಎಂ)ನ ಯುವ ಘಟಕ ಡಿವೈಎಫ್‌ಐ ತನ್ನ ಫೇಸ್‌ಬುಕ್‌ನಲ್ಲಿ ಪ್ರಕಟಿಸುವ ಮೂಲಕ ರಾಜಕೀಯ ಬಿರುಗಾಳಿ ಎಬ್ಬಿಸಿದೆ. 

ಇದನ್ನನುಸರಿಸಿ ಎಸ್‌ಎಫ್‌ಐ ಹಾಗೂ ಯುವ ಕಾಂಗ್ರೆಸ್ ಸೇರಿದಂತೆ ಕೆಪಿಸಿಸಿಯ ಹಲವು ಘಟಕಗಳು ಇದೇ ರೀತಿಯ ಘೋಷಣೆ ಮಾಡಿವೆ.  ಗಣರಾಜ್ಯೋತ್ಸವದ ದಿನದಂದು ಜಿಲ್ಲೆಯ ಕೇಂದ್ರ ಕಚೇರಿಯಲ್ಲಿ ಈ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಗುವುದು ಎಂದು ಕೆಪಿಸಿಸಿಯ ಅಲ್ಪಸಂಖ್ಯಾತ ಘಟಕ ಹೇಳಿದೆ. 

ಈ ಕ್ರಮವನ್ನು ‘ದೇಶದ್ರೋಹ’  ಎಂದು ಬಿಜೆಪಿ ಬಣ್ಣಿಸಿದೆ. ಅಲ್ಲದೆ ಕೂಡಲೇ ಮಧ್ಯಪ್ರವೇಶಿಸುವಂತೆ ಹಾಗೂ ಅಂತಹ ಪ್ರಯತ್ನವನ್ನು ಚಿಗುರಿನಲ್ಲೇ ಚಿವುಟಿ ಹಾಕುವಂತೆ ಕೇರಳದ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದೆ. 

ರಾಜ್ಯದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಬಿಜೆಪಿಯ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಅವರು ಪಿಣರಾಯಿ ವಿಜಯನ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
 
ಕೇಂದ್ರ ವಿದೇಶಾಂಗ ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್ ಅವರು ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡದಂತೆ ಹಾಗೂ ಈ ವಿಷಯದಲ್ಲಿ ಕೂಡಲೇ ಮಧ್ಯಪ್ರವೇಶಿಸುವಂತೆ ಪಿಣರಾಯಿ ವಿಜಯನ್ ಅವರನ್ನು ಆಗ್ರಹಿಸಿದ್ದಾರೆ. 

Similar News