ಕಾಂಗ್ರೆಸ್ ಹಿರಿಯ ನಾಯಕ ಎ.ಕೆ. ಆ್ಯಂಟನಿ ಪುತ್ರ ಅನಿಲ್ ಆ್ಯಂಟನಿ ಕಾಂಗ್ರೆಸ್ ಗೆ ರಾಜೀನಾಮೆ

Update: 2023-01-25 05:50 GMT

ಹೊಸದಿಲ್ಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಕುರಿತ  ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರವನ್ನು ಟೀಕಿಸಿದ ಒಂದು ದಿನದ ನಂತರ ಕಾಂಗ್ರೆಸ್ ನ ಹಿರಿಯ ನಾಯಕ  ಎ.ಕೆ. ಆ್ಯಂಟನಿ ಅವರ ಪುತ್ರ ಅನಿಲ್ ಕೆ.  ಆ್ಯಂಟನಿ ಪಕ್ಷವನ್ನು ತೊರೆದಿದ್ದಾರೆ.

ಅನಿಲ್ ಆ್ಯಂಟನಿ ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ತ್ಯಜಿಸುವ ನಿರ್ಧಾರವನ್ನು ಘೋಷಿಸಿದರು, ತಮ್ಮ ರಾಜೀನಾಮೆ ಪತ್ರವನ್ನು ಟ್ವಿಟ್ಟರ್ ನಲ್ಲಿ  ಹಂಚಿಕೊಂಡರು.

ಕಾಂಗ್ರೆಸ್ ನ ಎಲ್ಲ ಹುದ್ದೆಗಳಿಗೆ ರಾಜೀನಾಮೆ ನೀಡಿರುವ ಅನಿಲ್, ಬಿಬಿಸಿ ಸಾಕ್ಷ್ಯಚಿತ್ರದ ವಿರುದ್ಧ ಮಾಡಿರುವ ಟ್ವೀಟ್ ಅನ್ನು ಹಿಂತೆಗೆದುಕೊಳ್ಳಲು ಅಸಹಿಷ್ಣುತೆಯ ಕರೆಗಳು ಹಾಗೂ ಫೇಸ್ ಬುಕ್ ನಲ್ಲಿ ದ್ವೇಷ/ನಿಂದನೆ ಬರುತ್ತಿತ್ತು ಎಂದು ಹೇಳಿದ್ದಾರೆ.

"ಭಾರತದ ವಿರುದ್ಧ ಪೂರ್ವಾಗ್ರಹಗಳ ಸುದೀರ್ಘ ಇತಿಹಾಸ" ಹೊಂದಿರುವ ಬಿಬಿಸಿಯನ್ನು ಸರಕಾರಿ ಪ್ರಾಯೋಜಿತ ಚಾನೆಲ್ ಎಂದು ನಿನ್ನೆ ಕರೆದಿರುವ, ಮಾಜಿ ಕೇರಳ ಮುಖ್ಯಮಂತ್ರಿ ಎ.ಕೆ ಆ್ಯಂಟನಿಯ ಪುತ್ರ ಅನಿಲ್ ಆ್ಯಂಟನಿ ಅವರು, ದೇಶದ ಸಾರ್ವಭೌಮತ್ವವನ್ನು "ದುರ್ಬಲ’’ಗೊಳಿಸುವ ರೀತಿಯಲ್ಲಿ ಬಿಬಿಸಿ ಸಾಕ್ಷ್ಯಚಿತ್ರ ನಿರ್ಮಿಸಿದೆ  ಎಂದು ಟೀಕಿಸಿದ್ದರು.

ಅನಿಲ್  ಅವರ ದೃಷ್ಟಿಕೋನವು ಕೇರಳದ ಕಾಂಗ್ರೆಸ್ಸಿಗಿಂತ  ವ್ಯತಿರಿಕ್ತವಾಗಿತ್ತು.  ಪ್ರಧಾನಿ ಕುರಿತ ಬಿಬಿಸಿ  ಸಾಕ್ಷ್ಯಚಿತ್ರವನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಪ್ರದರ್ಶಿಸಲಾಗುವುದು ಎಂದು ಕೇರಳ ಕಾಂಗ್ರೆಸ್ ಘೋಷಿಸಿತ್ತು.

ಅನಿಲ್ ಆ್ಯಂಟನಿ ಅವರು ಕೇರಳ ಕಾಂಗ್ರೆಸ್ ನ ಡಿಜಿಟಲ್ ಕಮ್ಯುನಿಕೇಶನ್ ಅನ್ನು ನಿಭಾಯಿಸುತ್ತಿದ್ದರು. ನರೇಂದ್ರ ಮೋದಿ ಗುಜರಾತ್ ನ ಮುಖ್ಯಮಂತ್ರಿಯಾಗಿದ್ದಾಗ 2002ರ ಗುಜರಾತ್ ಗಲಭೆಗೆ ಸಂಬಂಧಿಸಿದ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರವನ್ನು ರಾಜ್ಯದಲ್ಲಿ ಪ್ರದರ್ಶಿಸಲಾಗುವುದು ಎಂದು ರಾಜ್ಯ ಕಾಂಗ್ರೆಸ್ ನ ವಿವಿಧ ವಿಭಾಗಗಳು ಪ್ರಕಟಿಸಿದ ಸಮಯದಲ್ಲಿ ಅನಿಲ್ ಬಿಬಿಸಿ ಸಾಕ್ಷ್ಯಚಿತ್ರವನ್ನು ಟೀಕಿಸಿದ್ದರು.

Similar News