ಹಿಂಡೆನ್‌ಬರ್ಗ್‌ ವರದಿ ಹೊರಬಿದ್ದ ಬೆನ್ನಲ್ಲೇ ಅದಾನಿ ಗ್ರೂಪ್‌ ಷೇರುಗಳಲ್ಲಿ ಕುಸಿತ; 46,086 ಕೋಟಿ ರೂ. ನಷ್ಟ

Update: 2023-01-25 11:52 GMT

ಹೊಸದಿಲ್ಲಿ: ಅದಾನಿ ಗ್ರೂಪ್‌ ವಿರುದ್ಧ ಹಲವು ಆರೋಪಗಳನ್ನು ಹೊಂದಿರುವ ಹಿಂಡೆನ್‌ಬರ್ಗ್‌ ವರದಿ ಬಿಡುಗಡೆಯು ಕಂಪೆನಿಯ ಷೇರುಗಳ ಮೇಲೆ ನೇರ ಪರಿಣಾಮ ಬೀರಿದೆ. ಅದಾನಿ ಗ್ರೂಪ್‌ ಷೇರು ಬೆಲೆಗಳು ಭಾರೀ ಕುಸಿತ ಕಂಡಿವೆ ಎಂದು ವರದಿಯಾಗಿದೆ.

ಅದಾನಿ ಗ್ರೂಪ್‌ನ ಏಳು ಕಂಪೆನಿಗಳ ಸ್ಟಾಕ್‌ಗಳು ಇಂದು ಒಂದೇ ದಿನ ರೂ 46,086 ಕೋಟಿ ಕಳೆದುಕೊಂಡಿವೆ. ಅದಾನಿ ಟೋಟಲ್‌ ಗ್ಯಾಸ್‌ ರೂ. 12,366 ಕೋಟಿ ಕಳೆದುಕೊಂಡಿದ್ದರೆ ಅದಾನಿ ಪೋರ್ಟ್ಸ್‌ ರೂ 8,342 ಕೋಟಿ ಹಾಗೂ ಅದಾನಿ ಟ್ರಾನ್ಸ್‌ಮಿಷನ್‌ ರೂ 8,039 ಕೋಟಿ ಕಳೆದುಕೊಂಡಿದೆ.

ಈ ಬೆಳವಣಿಗೆಗೆ ಕಾರಣವಾದ ಹಿಂಡೆನ್‌ಬರ್ಗ್‌ ಸಂಶೋಧನಾ ವರದಿಯನ್ನು ಎರಡು ವರ್ಷಗಳ ಕೂಲಂಕಷ ಅಧ್ಯಯನ ಮತ್ತು ತನಿಖೆಯ ನಂತರ ಈ ಫೊರೆನ್ಸಿಕ್‌ ಫಿನಾನ್ಶಿಯಲ್ ರಿಸರ್ಚ್‌ ಸಂಸ್ಥೆ ಸಿದ್ಧಪಡಿಸಿದೆ. ಈ ಕುರಿತು ಹಿಂಡೆನ್‌ಬರ್ಗ್‌ ರಿಸರ್ಚ್‌ ತನ್ನ ಅಧಿಕೃತ ಹ್ಯಾಂಡಲ್‌ ಮೂಲಕ ಟ್ವೀಟ್‌ ಮಾಡಿದೆ.

"ಇಂದು ನಾವು ನಮ್ಮ 2 ವರ್ಷಗಳ ತನಿಖೆಯ ವಿವರಗಳನ್ನು ಬಹಿರಂಗಪಡಿಸುತ್ತಿದ್ದೇವೆ. 17.8 ಟ್ರಿಲಿಯನ್‌(218 ಬಿಲಿಯನ್‌ ಅಮೆರಿಕನ್‌ ಡಾಲರ್) ಮೌಲ್ಯದ ಭಾರತೀಯ ಸಂಸ್ಥೆ ಅದಾನಿ ಗ್ರೂಪ್‌  ಸ್ಟಾಕ್‌ ತಿರುಚುವಿಕೆ ಹಾಗೂ ಲೆಕ್ಕ ವಂಚನೆಯನ್ನು ದಶಕಗಳ ಕಾಲ ನಡೆಸಿದೆ ಎಂಬುದರ ಕುರಿತು ಪುರಾವೆ ಪ್ರಸ್ತುತಪಡಿಸುತ್ತಿದ್ದೇವೆ," ಎಂದು ಸಂಸ್ಥೆ ಟ್ವೀಟ್‌ ಮೂಲಕ ತಿಳಿಸಿದೆ.

ಸಂಸ್ಥೆಯ ವರದಿಯ ಪ್ರಕಾರ ಅದಾನಿ ಗ್ರೂಪ್‌ ಸ್ಥಾಪಕ ಮತ್ತು ಅಧ್ಯಕ್ಷರಾಗಿರುವ ಗೌತಮ್‌ ಅದಾನಿ ಸುಮಾರು 120 ಬಿಲಿಯನ್‌ ಡಾಲರ್‌ ಮೌಲ್ಯದ ಸಂಪತ್ತನ್ನು ಹೆಚ್ಚಾಗಿ ಕಳೆದ ಮೂರು ವರ್ಷಗಳಲ್ಲಿ ಸ್ಟಾಕ್‌ ಪ್ರೈಸ್‌ ಎಪ್ರೀಸಿಯೇಶನ್‌ ಮೂಲಕ ,ಮಾಡಿದ್ದಾರೆ. ಸಮೂಹದ ಏಳು ಲಿಸ್ಟೆಡ್‌ ಕಂಪೆನಿಗಳ ಸ್ಟಾಕ್‌ ಬೆಲೆಗಳು ಈ ಅವಧಿಯಲ್ಲಿ ಸರಾಸರಿ ಶೇ 819 ರಷ್ಟು ಏರಿಕೆ ಕಂಡಿವೆ. ಎಂದು ವರದಿ ಹೇಳಿದೆ.

ಅದಾನಿ ಎಂಟರ್‌ಪ್ರೈಸಸ್‌ ಸಂಸ್ಥೆ ಎಫ್‌ಪಿಒ ಮೂಲಕ ರೂ 20,000 ಕೋಟಿ  ಸಂಗ್ರಹಿಸುವ ನಿಟ್ಟಿನಲ್ಲಿ ಯೋಚಿಸುತ್ತಿರುವಾಗ ಈ ವರದಿ ಹೊರಬಿದ್ದಿದೆ.

ಇದನ್ನೂ ಓದಿ: ಅದಾನಿ ಗ್ರೂಪ್ ಕಂಪನಿಗಳ ಸಾಲಗಳ ಹೊರೆಯ ಬಗ್ಗೆ ಕಳವಳ, ಲೆಕ್ಕಪತ್ರಗಳಲ್ಲಿ ವಂಚನೆ ಆರೋಪ

Similar News