ಕಾಫಿ ಡೇ ಎಂಟರ್‌ಪ್ರೈಸಸ್‌ಗೆ ರೂ. 26 ಕೋಟಿ ದಂಡ ವಿಧಿಸಿದ ಸೆಬಿ: 45 ದಿನಗಳೊಳಗೆ ಪಾವತಿಸಲು ಸೂಚನೆ

Update: 2023-01-25 08:48 GMT

ಹೊಸದಿಲ್ಲಿ: ಅಧೀನ ಸಂಸ್ಥೆಗಳ ನಿಧಿಯನ್ನು ಸಂಸ್ಥೆಗೆ ಸಂಬಂಧಿಸಿದ ಪ್ರವರ್ತಕರಿಗೆ ವರ್ಗಾಯಿಸಿರುವ ಆರೋಪದಲ್ಲಿ ಕಾಫಿ ಡೇ ಎಂಟರ್‌ಪ್ರೈಸಸ್‌ ಲಿಮಿಟೆಡ್‌ಗೆ ಬಂಡವಾಳ ಮಾರುಕಟ್ಟೆ ನಿಯಂತ್ರಣ ಪ್ರಾಧಿಕಾರವಾದ ಸೆಬಿ ಮಂಗಳವಾರ ರೂ. 26 ಕೋಟಿ ದಂಡ ವಿಧಿಸಿದೆ ಎಂದು hindustantimes.com ವರದಿ ಮಾಡಿದೆ.

ಕಾಫಿ ಡೇ ಎಂಟರ್‌ಪ್ರೈಸಸ್‌ ಲಿಮಿಟೆಡ್‌ಗೆ ಈ ದಂಡದ ಮೊತ್ತವನ್ನು 45 ದಿನಗಳೊಳಗಾಗಿ ಪಾವತಿಸುವಂತೆ ನಿರ್ದೇಶಿಸಲಾಗಿದೆ ಎಂದು ಭಾರತೀಯ ಭದ್ರತೆಗಳು ಮತ್ತು ವಿನಿಮಯ ಮಂಡಳಿ (SEBI) ತನ್ನ ಅದೇಶದಲ್ಲಿ ಹೇಳಿದೆ. ಇದಲ್ಲದೆ ಮೈಸೂರು ಅಮಾಲ್ಗಮೇಟೆಡ್ ಕಾಫಿ ಎಸ್ಟೇಟ್ಸ್ ಉಳಿಸಿಕೊಂಡಿರುವ ಸಂಪೂರ್ಣ ಬಾಕಿ ಸೇರಿದಂತೆ ಅದಕ್ಕೆ ಸಂಬಂಧಿಸಿದ ಸಂಸ್ಥೆಗಳು ಅಧೀನ ಸಂಸ್ಥೆಗಳಿಗೆ ಉಳಿಸಿಕೊಂಡಿರುವ ಬಾಕಿ ಮೊತ್ತವನ್ನು ಬಡ್ಡಿಯೊಂದಿಗೆ ವಸೂಲಿ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದೂ ಸೆಬಿ ಸೂಚಿಸಿದೆ. ಮುಂದುವರಿದು, ರಾಷ್ಟ್ರೀಯ ಶೇರು ವಿನಿಮಯ ಕೇಂದ್ರದೊಂದಿಗೆ ಸಮಾಲೋಚನೆ ನಡೆಸಿ, ಬಾಕಿ ಮೊತ್ತವನ್ನು ವಸೂಲಿ ಮಾಡಲು ಸ್ವತಂತ್ರ ಕಾನೂನು ಸಂಸ್ಥೆಯನ್ನು ನಿಯೋಜಿಸಬೇಕು ಎಂದೂ ನಿರ್ದೇಶಿಸಿದೆ.

ಇದಕ್ಕೂ ಮುನ್ನ, ಕಾಫಿ ಡೇ ಎಂಟರ್‌ಪ್ರೈಸಸ್‌ ಲಿಮಿಟೆಡ್‌ನ ಪ್ರವರ್ತಕ ಸಂಸ್ಥೆಯಾದ ಮೈಸೂರು ಅಮಾಲ್ಗಮೇಟೆಡ್ ಕಾಫಿ ಎಸ್ಟೇಟ್ಸ್‌ಗೆ ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್ ತನ್ನ  ಏಳು ಅಧೀನ ಸಂಸ್ಥೆಗಳಿಂದ ಸುಮಾರು ರೂ. 3,535 ಕೋಟಿ ಮೊತ್ತ ವರ್ಗಾಯಿಸಿರುವುದನ್ನು ಸೆಬಿ ಪತ್ತೆ ಹಚ್ಚಿತ್ತು.

Similar News