ಏಕದಿನ ಕ್ರಿಕೆಟಿನ ನಂ.1 ಬೌಲರ್ ಆಗಿ ಹೊರಹೊಮ್ಮಿದ ಮುಹಮ್ಮದ್ ಸಿರಾಜ್

Update: 2023-01-25 10:47 GMT

ಹೊಸದಿಲ್ಲಿ: ಇತ್ತೀಚೆಗೆ  ಶ್ರೀಲಂಕಾ ಹಾಗೂ ಮಂಗಳವಾರ ಕೊನೆಗೊಂಡಿರುವ ನ್ಯೂಝಿಲ್ಯಾಂಡ್  ವಿರುದ್ಧ ಸರಣಿಯಲ್ಲಿ  ಅಮೋಘ ಪ್ರದರ್ಶನದ ನೀಡಿರುವ  ಭಾರತದ ವೇಗದ ಬೌಲರ್ ಮುಹಮ್ಮದ್ ಸಿರಾಜ್ (Mohammed Siraj)ಬುಧವಾರ ಐಸಿಸಿ ಏಕದಿನ ರ್ಯಾಂಕಿಂಗ್ ನಲ್ಲಿ ನೂತನ  ನಂ.1 ಬೌಲರ್ ಆಗಿ ಹೊರಹೊಮ್ಮಿದರು.

ಸಿರಾಜ್ ಕಳೆದೆರಡು ವರ್ಷಗಳಿಂದ ಜಸ್ಪ್ರೀತ್ ಬುಮ್ರಾ ಗಾಯದ ಕಾರಣ ತಂಡದಿಂದ ಗೈರು ಹಾಜರಾಗಿದ್ದ ಸಮಯದಲ್ಲಿ ಏಕದಿನ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಅತ್ಯುತ್ತಮ ಬೌಲರ್ ಆಗಿದ್ದಾರೆ.. 28 ವರ್ಷ ವಯಸ್ಸಿನ  ಸಿರಾಜ್ ಅವರು ಶ್ರೀಲಂಕಾ ವಿರುದ್ಧ ಕೊನೆಯ  ಪಂದ್ಯ,  ನಂತರ ನ್ಯೂಝಿಲ್ಯಾಂಡ್ ವಿರುದ್ಧದ ಮೊದಲ ಪಂದ್ಯಗಳಲ್ಲಿ 4 ವಿಕೆಟ್‌ಗಳ ಗೊಂಚಲು ಮೂಲಕ ತಂಡಕ್ಕೆ ತಮ್ಮ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದ್ದರು.

ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ  ಏಕದಿನ ಕ್ರಿಕೆಟ್ ಸರಣಿಯಲ್ಲಿ, ಬಲಗೈ ವೇಗಿ 10.22 ರ ಸರಾಸರಿಯಲ್ಲಿ ಒಟ್ಟು ಒಂಬತ್ತು ವಿಕೆಟ್ ಗಳನ್ನು ಪಡೆದಿದ್ದರು.

ನ್ಯೂಝಿಲ್ಯಾಂಡ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಆಡಿರುವ 2 ಪಂದ್ಯಗಳಲ್ಲಿ ಸಿರಾಜ್ ಐದು ವಿಕೆಟ್‌ಗಳನ್ನು ಗಳಿಸಿದ್ದರು.  ಅಂತಿಮ ಪಂದ್ಯಕ್ಕೆ ವಿಶ್ರಾಂತಿ ಪಡೆದಿದ್ದರು.

ಸಿರಾಜ್  729 ರೇಟಿಂಗ್ ಅಂಕಗಳನ್ನು ಗಳಿಸಿ ಐಸಿಸಿ ರ್ಯಾಂಕಿಂಗ್‌ ನಲ್ಲಿ ಹೊಸ ನಂ.1 ಬೌಲರ್ ಆಗಿ ಹೊರಹೊಮ್ಮಿದರು.

ಆಸ್ಟ್ರೇಲಿಯದ ಜೋಶ್ ಹೇಝಲ್ ವುಡ್ ಎರಡನೇ ಸ್ಥಾನದಲ್ಲಿದ್ದರೆ, ನ್ಯೂಝಿಲ್ಯಾಂಡ್‌ನ ಟ್ರೆಂಟ್ ಬೌಲ್ಟ್ ಮೂರನೇ ಸ್ಥಾನದಲ್ಲಿದ್ದಾರೆ.

ಮಂಗಳವಾರ, ಭಾರತ ತಂಡ ನ್ಯೂಝಿಲ್ಯಾಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಬೆನ್ನಿಗೆ  ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಏರಿತ್ತು.

Similar News