ಬಹಿಷ್ಕಾರದ ಕರೆಯ ನಡುವೆಯೂ ವ್ಯಾಪಕ ಮೆಚ್ಚುಗೆ ಪಡೆದ 'ಪಠಾಣ್'

ಮೊದಲ ಐದು ದಿನಗಳಲ್ಲೇ 300 ಕೋಟಿ ಬಾಚಲಿದೆ: ತಜ್ಞರ ನಿರೀಕ್ಷೆ

Update: 2023-01-25 16:49 GMT

ಮುಂಬೈ: ಶಾರುಖ್ ಖಾನ್ ಅವರ ಬಹುನಿರೀಕ್ಷಿತ ಚಿತ್ರ ಪಠಾಣ್ ಅಂತಿಮವಾಗಿ   ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ನಿರೀಕ್ಷೆಯಂತೆ, ಚಿತ್ರವು   ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದ್ದು, ದೇಶಾದ್ಯಂತ ಹಲವಾರು ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಆಗುತ್ತಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಬಲಪಂಥೀಯರ ಬಹಿಷ್ಕಾರದ ಕರೆಯ ನಡುವೆಯೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಪಠಾಣ್ ಚಿತ್ರವು ಕೇವಲ ಭಾರತದಲ್ಲಿ ಮಾತ್ರವೇ ಮೊದಲ ದಿನದಂದು 40 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಗಳಿಸುವ ನಿರೀಕ್ಷೆಯಿದೆ.

ನಿರ್ಮಾಪಕ ಮತ್ತು ಚಲನಚಿತ್ರ ವ್ಯವಹಾರ ತಜ್ಞ ಗಿರೀಶ್ ಜೋಹರ್ ಪ್ರಕಾರ ಪಠಾಣ್‌ ಚಿತ್ರವು ವಾರಾಂತ್ಯದಲ್ಲಿ 300 ಕೋಟಿಗೂ ಅಧಿಕ ವ್ಯವಹಾರ ನಡೆಸಲಿದೆ ಎಂದು ಟೈಮ್ಸ್‌ ನೌ ವರದಿ ಮಾಡಿದೆ.

“ಓಪನಿಂಗ್ ಟ್ರೆಂಡಿಂಗ್ ತುಂಬಾ ವಿಸ್ತಾರವಾಗಿದೆ. ಇದೊಂದು ಅದ್ಭುತ ಆರಂಭ.   ರಜಾದಿನವಲ್ಲದ ದಿನದಲ್ಲಿ ಬಿಡುಗಡೆಯಾಗಿದ್ದರೂ ಇದು (ಪಠಾಣ್) ಅತಿ ಹೆಚ್ಚು-ಟ್ರೆಂಡಿಂಗ್ ಆಗಿದೆ. (ನಿಖರವಾದ) ಸಂಖ್ಯೆಗಳು ಇನ್ನೂ ಬರಬೇಕಿದೆ. ಸದ್ಯಕ್ಕೆ ಮೊದಲನೇ ದಿನದಲ್ಲಿ 40 ಕೋಟಿ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದ್ದೇನೆ. ಸಂಜೆ ಮತ್ತು ತಡರಾತ್ರಿಯ ಪ್ರದರ್ಶನಗಳ ಬಳಿಕ ಅಂಕಿ ಸಂಖ್ಯೆಗಳು ಬರಲಿದೆ” ಎಂದು ಅವರು ಹೇಳಿದ್ದಾರೆ.

"ಜನವರಿ 26 ರಂದು (ಗಣರಾಜ್ಯೋತ್ಸವದ ರಜೆ) ಪಠಾಣ್ ಚಿತ್ರಕ್ಕೆ ಇನ್ನಷ್ಟು ವೀಕ್ಷಕರು ಬರುವ ನಿರೀಕ್ಷೆ ಇದೆ. ಚಿತ್ರವು ಮೊದಲ ಐದು ದಿನಗಳಲ್ಲಿ (ಮೊದಲ ವಾರಾಂತ್ಯದಲ್ಲಿ) ವಿಶ್ವಾದ್ಯಂತ 300 ಕೋಟಿ ರೂಪಾಯಿಗಳನ್ನು ಸಂಗ್ರಹಿಸುತ್ತದೆ ಎಂದು ನಾನು ನಿರೀಕ್ಷಿಸುತ್ತೇನೆ. ಕೇವಲ ಭಾರತದಲ್ಲಿ ಮಾತ್ರ 200 ಕೋಟಿಗೂ ಅಧಿಕ ವ್ಯವಹಾರ ಮಾಡಬಹುದು”ಎಂದು ಅವರು ಸೇರಿಸಿದ್ದಾರೆ.

ಚಿತ್ರೋದ್ಯಮದ ವ್ಯವಹಾರ ತಜ್ಞ ತರಣ್‌ ಆದರ್ಶ್‌ ಕೂಡಾ ಪಠಾಣ್‌ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದು, ಚಿತ್ರ ʼಬ್ಲಾಕ್‌ ಬಸ್ಟರ್‌ʼ ಎಂದು ಟ್ವೀಟ್‌ ಮಾಡಿದ್ದಾರೆ.

ಠುಸ್‌ ಪಠಾಕಿಯಾದ ಬಲಪಂಥೀಯರ ಬಾಯ್ಕಾಟ್‌ ಪ್ರಹಸನ

ಪಠಾಣ್‌ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆಗಳು ಬರುತ್ತಿದ್ದರೂ ಬಲಪಂಥೀಯರು ಚಿತ್ರವನ್ನು ಭಾರತವೇ ಬಹಿಷ್ಕರಿಸಿದೆ ಎಂದು ಪ್ರಚಾರ ಮಾಡುತ್ತಿದ್ದಾರೆ.   ಸುದರ್ಶನ್‌ ಟಿವಿ ಸಂಪಾದಕ ಸುರೇಶ್‌ ಚವ್ಹಾಂಕೆ, ಸಾಧ್ವಿ ಪ್ರಾಚಿ, ಬಿಜೆಪಿ ಮುಖಂಡ ಅರುಣ್‌ ಯಾದವ್‌, ಯೋಗಿ ದೇವನಾಥ್‌ ಮೊದಲಾದವರು ಪಠಾಣ್‌ ವಿರುದ್ಧ ಬಹಿಷ್ಕಾರಕ್ಕೆ ಕರೆ ನೀಡಿದ್ದಾರೆ.

 ಬಲಪಂಥೀಯರ ವಿರೋಧದ ತೀವ್ರತೆಯೂ ಜೋರಾಗಿದ್ದು, ಬೆಂಗಳೂರು ಸೇರಿದಂತೆ ಭಾರತದ ಹಲವೆಡೆ ಪಠಾಣ್‌ ಪ್ರದರ್ಶನಕ್ಕೆ ತಡೆ ಒಡ್ಡಿ ಪ್ರತಿಭಟನೆಗಳು ನಡೆದಿವೆ. ಇಂದೋರ್‌ನಲ್ಲಿ ಚಿತ್ರದ ಪ್ರದರ್ಶನವು ರದ್ದಾಗಿದೆ ಎಂದು ವರದಿಯಾಗಿದೆ. ಅದಾಗ್ಯೂ, ಇದು ಯಾವುದೂ ಚಿತ್ರದ ಗಳಿಕೆಗೆ ಯಾವುದೇ ನಷ್ಟವನ್ನು ಉಂಟು ಮಾಡಿಲ್ಲ ಎಂದು ಹೇಳಲಾಗಿದೆ.

ವರ್ಷಗಳ ಬಳಿಕ ತೆರೆ ಮೇಲೆ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿರುವ ಶಾರುಖ್‌ ಖಾನ್‌ರಿಗೆ ಚಿತ್ರಾಭಿಮಾನಿಗಳು ಭರ್ಜರಿ ಸ್ವಾಗತವನ್ನೇ ನೀಡಿದ್ದಾರೆ.

Similar News