ಒಂದು ವರ್ಷದಿಂದ ವೇತನವಿಲ್ಲ: ಪರಿಹಾರಕ್ಕಾಗಿ ಕೋರ್ಟ್ ಮೊರೆ ಹೋಗಲು ಸಜ್ಜಾದ ಎಚ್ಇಸಿ ಉದ್ಯೋಗಿಗಳು
ರಾಂಚಿ (ಜಾರ್ಖಂಡ್),ಜ.25: ಕೆಲವು ವರ್ಷಗಳ ಹಿಂದೆ ಇಸ್ರೋಗಾಗಿ ಉಡಾವಣಾ ವೇದಿಕೆಯನ್ನು ನಿರ್ಮಿಸಿದ್ದ ಸಾರ್ವಜನಿಕ ಕ್ಷೇತ್ರದ ಉದ್ಯಮ ಹೆವಿ ಇಂಜಿನಿಯರಿಂಗ್ ಕಾರ್ಪೊರೇಷನ್ (HEC)ನ ಸುಮಾರು 1,300 ಉದ್ಯೋಗಿಗಳು ಕಳೆದೊಂದು ವರ್ಷಕ್ಕೂ ಅಧಿಕ ಸಮಯದಿಂದ ವೇತನವಿಲ್ಲದೆ ಪರದಾಡುತ್ತಿದ್ದು,ಕಷ್ಟದಲ್ಲಿ ದಿನಗಳನ್ನು ದೂಡುತ್ತಿದ್ದಾರೆ. ಈಗ ಅವರು ಶೀಘ್ರ ಸಮಸ್ಯೆಯನ್ನು ಬಗೆಹರಿಸದಿದ್ದರೆ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಬೆದರಿಕೆಯೊಡ್ಡಿದ್ದಾರೆ.
ತಮ್ಮ ದುರ್ಭರ ಸ್ಥಿತಿಯಿಂದಾಗಿ ಮಕ್ಕಳ ಶಿಕ್ಷಣ ಶುಲ್ಕಗಳನ್ನು ಪಾವತಿಸಲು ಅಥವಾ ಅನಾರೋಗ್ಯಪೀಡಿತ ಕುಟುಂಬ ಸದಸ್ಯರಿಗೆ ಸೂಕ್ತ ಚಿಕಿತ್ಸೆಯನ್ನು ಕೊಡಿಸಲು ಸಾಧ್ಯವಾಗುತ್ತಿಲ್ಲ ಎಂದು ಎಚ್ಇಸಿ ಉದ್ಯೋಗಿಗಳು ಆರೋಪಿಸಿದ್ದಾರೆ. ಅವರ ಪೈಕಿ ಅಧಿಕಾರಿಗಳು ಸೇರಿದಂತೆ ಕೆಲವರು ಹೊಟ್ಟೆಪಾಡಿಗಾಗಿ ಹಣ್ಣುಗಳು ಅಥವಾ ಚಹಾ ಮಾರಾಟದಲ್ಲಿ ತೊಡಗಿಕೊಂಡಿದ್ದಾರೆ.
ತಮ್ಮ ಹೋರಾಟಕ್ಕಾಗಿ ಎಚ್ಇಸಿಯ ಕಾರ್ಮಿಕರು ಮತ್ತು ಅಧಿಕಾರಿಗಳು ಸಂಯುಕ್ತ ವೇದಿಕೆಯೊಂದನ್ನು ರೂಪಿಸಿಕೊಂಡಿದ್ದಾರೆ.ಜ.23ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು,ಪ್ರಧಾನಿ ನರೇಂದ್ರ ಮೋದಿ,ಭಾರತದ ಮುಖ್ಯ ನ್ಯಾಯಾಧೀಶ ಡಿ.ವೈ.ಚಂದ್ರಚೂಡ್, ಎನ್ಎಚ್ಆರ್ಸಿ ಮತ್ತು ಇತರರಿಗೆ ಇ-ಮೇಲ್ ಗಳನ್ನು ಕಳುಹಿಸುವ ಮೂಲಕ ತಮ್ಮ ಬವಣೆಯ ಬಗ್ಗೆ ಅವರ ಗಮನವನ್ನು ಸೆಳೆದಿದ್ದೇವೆ ಎಂದು ವೇದಿಕೆಯ ಅಧ್ಯಕ್ಷ ಪ್ರೇಮಶಂಕರ ಪಾಸ್ವಾನ್(prem-shankar-paswan) ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
‘ನಮ್ಮ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸದಿದ್ದರೆ ಫೆಬ್ರವರಿಯಲ್ಲಿ ನಾವು ನ್ಯಾಯಾಲಯದ ಮೆಟ್ಟಿಲನ್ನೇರಬೇಕಾಗುತ್ತದೆ ’ ಎಂದರು.
ಕಂಪನಿಯು ಅಧಿಕಾರಿಗಳಿಗೆ 15 ತಿಂಗಳ ಮತ್ತು ಕಾರ್ಮಿಕರಿಗೆ 12 ತಿಂಗಳ ವೇತನಗಳನ್ನು ಬಾಕಿಯಿರಿಸಿದೆ ಎಂದು ಉಪ ಪ್ರಬಂಧಕ ದರ್ಜೆಯ ಅಧಿಕಾರಿ ಸುಭಾಷಚಂದ್ರ ತಿಳಿಸಿದರು. ದಿಲ್ಲಿಯಲ್ಲಿ ಕುಳಿತಿರುವ ಬಿಎಚ್ಇಎಲ್ನ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ (CMD)ರು ಎಚ್ಇಸಿಯ ಸಿಎಂಡಿಯಾಗಿ ಹೆಚ್ಚುವರಿ ಹೊಣೆಯನ್ನು ಹೊಂದಿದ್ದಾರೆ. ಸುದ್ದಿಸಂಸ್ಥೆಯ ಇ-ಮೇಲ್ ಗಳಿಗೆ ಅವರು ಈವರೆಗೂ ಪ್ರತಿಕ್ರಿಯಿಸುವ ಗೋಜಿಗೆ ಹೋಗಿಲ್ಲ.
1958ರಲ್ಲಿ ಸ್ಥಾಪನೆಗೊಂಡಿದ್ದ ಎಚ್ಆರ್ಸಿ ಉಕ್ಕು,ಗಣಿಗಾರಿಕೆ, ರೈಲ್ವೆ,ವಿದ್ಯುತ್,ರಕ್ಷಣೆ,ಬಾಹ್ಯಾಕಾಶ ಸಂಶೋಧನೆ,ಪರಮಾಣು ಮತ್ತು ವ್ಯೆಹಾತ್ಮಕ ಕ್ಷೇತ್ರಗಳಿಗೆ ಬಂಡವಾಳ ಉಪಕರಣಗಳನ್ನು ಪೂರೈಕೆ ಮಾಡುವ ಭಾರತದಲ್ಲಿನ ಪ್ರಮುಖ ಕಂಪನಿಗಳಲ್ಲೊಂದಾಗಿತ್ತು. ಉದ್ಯೋಗಿಗಳು ವೇತನ ಬಾಕಿಯ ವಿರುದ್ಧ ನವಂಬರ್,2022ರಿಂದ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.