ಪ್ರತಿ ನಾಲ್ವರು ಭಾರತೀಯರಲ್ಲಿ ಒಬ್ಬರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿ: ಸಮೀಕ್ಷೆ

Update: 2023-01-25 18:03 GMT

ಹೊಸದಿಲ್ಲಿ,ಜ.25: ಪ್ರತಿ ನಾಲ್ವರು ಭಾರತೀಯರ ಪೈಕಿ ಓರ್ವರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದರೆ ಅವರ ಪೈಕಿ ಮೂವರು ಹೆಚ್ಚುತ್ತಿರುವ ಹಣದುಬ್ಬರದ ಬಗ್ಗೆ ಚಿಂತಿತರಾಗಿದ್ದಾರೆ. ಆದರೂ ಅವರಲ್ಲಿ ಅರ್ಧದಷ್ಟು ಜನರು 2023ರಲ್ಲಿ ದೇಶದ ಆರ್ಥಿಕತೆಯು ಬೆಳೆಯಲಿದೆ ಎಂಬ ನಂಬಿಕೆಯನ್ನು ಹೊಂದಿದ್ದಾರೆ ಎಂದು ಮಾರ್ಕೆಟಿಂಗ್ ಡಾಟಾ ಮತ್ತು ಅನಾಲಿಟಿಕ್ಸ್ ಸಂಸ್ಥೆ ಕಾಂಟರ್ ನಡೆಸಿರುವ ಸಮೀಕ್ಷೆಯು ತಿಳಿಸಿದೆ.

ಬಳಕೆದಾರರು ಆದಾಯ ತೆರಿಗೆಗೆ ಸಂಬಂಧಿಸಿದಂತೆ ನೀತಿ ಬದಲಾವಣೆಗಳನ್ನು ನಿರೀಕ್ಷಿಸಿದ್ದಾರೆ. ಪ್ರಾಥಮಿಕ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಈಗಿನ 2.5 ಲ.ರೂ.ಗಳಿಂದ ಮತ್ತು ಶೇ.30 ತೆರಿಗೆಯ ಗರಿಷ್ಠ ಮಿತಿಯನ್ನು ಈಗಿನ 10 ಲ.ರೂ.ಗಳಿಂದ ಹೆಚ್ಚಿನ ಮಟ್ಟಕ್ಕೆ ಏರಿಸಲಾಗುವುದು ಎನ್ನುವುದು ಅತ್ಯಂತ ಸಾಮಾನ್ಯ ನಿರೀಕ್ಷೆಯಾಗಿದೆ ಎಂದು ಕೇಂದ್ರ ಮುಂಗಡಪತ್ರ ಸಮೀಕ್ಷೆಯ ತನ್ನ ಎರಡನೇ ಆವೃತ್ತಿಯಲ್ಲಿ ಕಾಂಟರ್ ಹೇಳಿದೆ.

ಸ್ಥೂಲ ಆರ್ಥಿಕ ಮಟ್ಟದಲ್ಲಿ ಹೆಚ್ಚಿನವರು ಧನಾತ್ಮಕ ದೃಷ್ಟಿಕೋನವನ್ನು ಹೊಂದಿದ್ದಾರೆ. ಶೇ.31ರಷ್ಟು ಜನರು ಆರ್ಥಿಕ ಮಂದಗತಿಯನ್ನು ನಿರೀಕ್ಷಿಸಿದ್ದರೆ,ಶೇ.50ರಷ್ಟು ಜನರು 2023ರಲ್ಲಿ ಭಾರತೀಯ ಆರ್ಥಿಕತೆಯು ಬೆಳೆಯಲಿದೆ ಎಂದು ನಂಬಿದ್ದಾರೆ. ಮಹಾನಗರಗಳಿಗೆ ಹೋಲಿಸಿದರೆ ಶೇ.54ರಷ್ಟು ಇತರ ನಗರಗಳು ಹೆಚ್ಚು ಆಶಾದಾಯಕವಾಗಿವೆ ಎಂದು ತಿಳಿಸಿರುವ ಕಾಂಟರ್,ಆದರೂ ಜಾಗತಿಕ ಆರ್ಥಿಕ ಹಿಂಜರಿತ ಮತ್ತು ಕೋವಿಡ್ ಮರುಕಳಿಸುವ ಸಂಭಾವ್ಯತೆ ಭಾರತೀಯರಿಗೆ ಚಿಂತೆಯ ಪ್ರಮುಖ ಕ್ಷೇತ್ರಗಳಾಗಿವೆ ಎಂದು ಹೇಳಿದೆ.

2022,ಡಿ.15ರಿಂದ 2023,ಜ.15ರವರೆಗೆ ಮುಂಬೈ,ದಿಲ್ಲಿ, ಬೆಂಗಳೂರು,ಚೆನ್ನೈ ಮತ್ತು ಕೋಲ್ಕತಾ ಸೇರಿದಂತೆ 12 ಪ್ರಮುಖ ನಗರಗಳಲ್ಲಿ 21ರಿಂದ 55 ವರ್ಷ ಪ್ರಾಯದ 1,892 ಬಳಕೆದಾರರನ್ನು ಆಯ್ದುಕೊಂಡು ಸಮೀಕ್ಷೆ ನಡೆಸಿರುವ ಕಾಂಟರ್,ಮೂರನೇ ಎರಡರಷ್ಟು ಜನರು ಆದಾಯ ತೆರಿಗೆ ಕಾಯ್ದೆಯ ಕಲಂ 80 ಸಿಸಿ ಅಡಿ ಹೂಡಿಕೆಗಳಿಗೆ ಹೆಚ್ಚಿನ ತೆರಿಗೆ ರಿಯಾಯಿತಿಯನ್ನು ಬಯಸಿದ್ದಾರೆ ಎಂದು ಹೇಳಿದೆ.

ಕೆಟ್ಟ ದಿನಗಳು ಮುಗಿದಿವೆ ಎಂದು ಬಳಕೆದಾರರು ಆಶಿಸಿದ್ದರೂ, ಸಾಂಕ್ರಾಮಿಕವು ಈಗಲೂ ಮಾಯವಾಗಿಲ್ಲ ಮತ್ತು ಶೇ.55ರಷ್ಟು ಜನರು ಮುಂಗಡಪತ್ರದಲ್ಲಿ ಆರೋಗ್ಯ ರಕ್ಷಣೆಗೆ ನಿರಂತರ ಹೆಚ್ಚಿನ ಗಮನವನ್ನು ಬಯಸಿದ್ದಾರೆ ಎಂದು ಅದು ತಿಳಿಸಿದೆ.

2023ರಲ್ಲಿ ದೇಶದ ಸ್ಥೂಲ ಆರ್ಥಿಕತೆಯ ಕಾರ್ಯಕ್ಷಮತೆಯ ಬಗ್ಗೆ ಭಾರತೀಯರು ಹೆಚ್ಚು ಧನಾತ್ಮಕರಾಗಿದ್ದಾರೆ. ಹಿರಿಯರಲ್ಲಿ ಮತ್ತು ಶ್ರೀಮಂತ ವರ್ಗದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ಕುರಿತು ನಂಬಿಕೆ ಬಲವಾಗಿದೆ ಎಂದು ಕಾಂಟರ್ನ ಕಾರ್ಯನಿರ್ವಾಹಕ ಆಡಳಿತ ನಿರ್ದೇಶಕ (ದ.ಏಶ್ಯಾ-ಒಳನೋಟಗಳ ವಿಭಾಗ) ದೀಪೇಂದರ್ ರಾಣಾ ಹೇಳಿದರು. ಆದರೂ ಜಾಗತಿಕ ಆರ್ಥಿಕ ಹಿಂಜರಿತವು ಚಿತ್ರಣವನ್ನು ಕೆಡಿಸಬಹುದು ಎಂದರು.

ಆರ್ಥಿಕ ಹಿಂಜರಿತವು ತಮ್ಮ ಕುಟುಂಬಗಳ ಬಜೆಟ್ ಮತ್ತು ತಮ್ಮ ಉದ್ಯೋಗ ಭವಿಷ್ಯಗಳ ಮೇಲೆ ನೇರವಾಗಿ ಪರಿಣಾಮವನ್ನು ಬೀರುವುದರಿಂದ ಸರಕಾರವು ರಕ್ಷಕನ ಪಾತ್ರವನ್ನು ವಹಿಸಬೇಕು ಮತ್ತು ಆರ್ಥಿಕತೆಯು ಹಿಂಜರಿತಕ್ಕೆ ಒಳಗಾಗುವುದನ್ನು ತಡೆಯಲು ಹಣದುಬ್ಬರವನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೆಚ್ಚಿನ ಭಾರತೀಯರು ನಿರೀಕ್ಷಿಸಿದ್ದಾರೆ ಎಂದು ತಿಳಿಸಿದ ರಾಣಾ,ಬಳಕೆದಾರರು ಎಂದಿನಂತೆ ಒಟ್ಟಾರೆಯಾಗಿ ಆದಾಯ ತೆರಿಗೆ ನಿಯಮಗಳಲ್ಲಿ ಕೆಲವು ಪರಿಹಾರಗಳನ್ನು ಮತ್ತು ಮಧ್ಯಮ ವರ್ಗ ಸ್ನೇಹಿ ಬಜೆಟ್ ನನ್ನು ಕಾಯುತ್ತಿದ್ದಾರೆ ಎಂದರು.

Similar News