"ಪ್ರಜಾಸತ್ತಾತ್ಮಕ ತತ್ವ ಎತ್ತಿ ಹಿಡಿಯಲು ಪತ್ರಿಕಾ ಸ್ವಾತಂತ್ರ್ಯ ಪ್ರಮುಖ ಅಂಶವಾಗಿದೆ"

ಪ್ರಧಾನಿ ಮೋದಿ ಕುರಿತ BBC ಸಾಕ್ಷ್ಯಚಿತ್ರ ನಿಷೇಧಕ್ಕೆ ಅಮೆರಿಕ ಪ್ರತಿಕ್ರಿಯೆ

Update: 2023-01-26 07:42 GMT

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಕುರಿತು ಬಿಬಿಸಿ (BBC) ನಿರ್ಮಿಸಿರುವ ಸಾಕ್ಷ್ಯಚಿತ್ರ ಸರಣಿಯನ್ನು ಭಾರತದಲ್ಲಿ ನಿಷೇಧಿಸಿರುವ ಕ್ರಮವು ಪತ್ರಿಕಾ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದು ಎಂದು ವ್ಯಾಖ್ಯಾನಿಸಿರುವ ಅಮೆರಿಕಾ ರಾಜ್ಯ ಇಲಾಖೆ, ವಾಕ್ ಸ್ವಾತಂತ್ರ್ಯದಂತಹ ಪ್ರಜಾಸತ್ತಾತ್ಮಕ ತತ್ವಗಳನ್ನು ಎತ್ತಿ ಹಿಡಿಯುವುದು ಭಾರತ ಸೇರಿದಂತೆ ಜಗತ್ತಿನಾದ್ಯಂತ ಬಹು ಮುಖ್ಯ ಸಂಗತಿಯಾಗಿದೆ ಎಂದು ಅಭಿಪ್ರಾಯಪಟ್ಟಿದೆ ಎಂದು ndtv.com ವರದಿ ಮಾಡಿದೆ.

ಈ ಕುರಿತು ಬುಧವಾರ ದೈನಂದಿನ ವಿವರಣೆ ನೀಡಿರುವ ಅಮೆರಿಕಾ ರಾಜ್ಯ ಇಲಾಖೆಯ ವಕ್ತಾರ ನೆಡ್ ಪ್ರೈಸ್, ವಾಷಿಂಗ್ಟನ್ ಪತ್ರಿಕಾ ಸ್ವಾತಂತ್ರ್ಯವನ್ನು ಬೆಂಬಲಿಸುತ್ತದೆ ಎಂದು ಒತ್ತಿ ಹೇಳಿದ್ದು, ಜಗತ್ತಿನಾದ್ಯಂತ ವಾಕ್ ಸ್ವಾತಂತ್ರ್ಯದಂತಹ ಪ್ರಜಾಸತ್ತಾತ್ಮಕ ತತ್ವಗಳನ್ನು ಎತ್ತಿ ಹಿಡಿಯಲು ಪತ್ರಿಕಾ ಸ್ವಾತಂತ್ರ್ಯ ಬಹು ಮುಖ್ಯ ಸಂಗತಿಯಾಗಿದೆ ಎಂದು ಪ್ರತಿಪಾದಿಸಿದ್ದಾರೆ.

"ಜಗತ್ತಿನಾದ್ಯಂತ ಪತ್ರಿಕಾ ಸ್ವಾತಂತ್ರ್ಯದ ಮಹತ್ವವನ್ನು ನಾವು ಬೆಂಬಲಿಸುತ್ತೇವೆ. ನಮ್ಮ ಪ್ರಜಾಪ್ರಭುತ್ವಗಳನ್ನು ಬಲಪಡಿಸಲು ಮಾನವ ಹಕ್ಕುಗಳ ಕೊಡುಗೆ ಇರುವುದರಿಂದ ವಾಕ್ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ ಅಥವಾ ನಂಬಿಕೆಯಂತಹ ಪ್ರಜಾಸತ್ತಾತ್ಮಕ ತತ್ವಗಳ ಪ್ರಾಮುಖ್ಯತೆಯ ಬಗ್ಗೆ ಗಮನ ಸೆಳೆಯುವುದನ್ನು ಮುಂದುವರಿಸುತ್ತೇವೆ. ಜಗತ್ತಿನಾದ್ಯಂತ ನಾವು ಹೊಂದಿರುವ ಸಂಬಂಧಗಳಲ್ಲಿ ಇದೇ ಅಂಶವನ್ನು ನಾವು ಒತ್ತಿ ಹೇಳುತ್ತೇವೆ. ಭಾರತದಲ್ಲೂ ಕೂಡಾ ನಾವು ಇದೇ ಅಂಶವನ್ನು ನಿರ್ದಿಷ್ಟವಾಗಿ ಹೇಳುತ್ತೇವೆ" ಎಂದು ಮಾಧ್ಯಮಗಳ ಪ್ರಶ್ನೆಯೊಂದಕ್ಕೆ ನೆಡ್ ಪ್ರೈಸ್ ಉತ್ತರಿಸಿದ್ದಾರೆ.

ಇದಕ್ಕೂ ಮುನ್ನ, ಕಳೆದ ವಾರ ಬಿಬಿಸಿ ಸಾಕ್ಷ್ಯಚಿತ್ರ ಸರಣಿಯಿಂದ ಅಂತರ ಕಾಯ್ದುಕೊಂಡಿದ್ದ ಬ್ರಿಟನ್ ಪ್ರಧಾನಿ ರಿಷಿ  ಸುನಕ್, ಭಾರತದ ಪ್ರಧಾನಿ ನರೇಂದ್ರ ಮೋದಿಯನ್ನು ಬೆಂಬಲಿಸಿದ್ದರು. "ನರೇಂದ್ರ ಮೋದಿಯವರ ಚಾರಿತ್ರ್ಯ ಹರಣವನ್ನು ನಾನು ಒಪ್ಪುವುದಿಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದರು.

Similar News