7 ವರ್ಷಗಳ ಜಾಮೀನು ಬಿಡುಗಡೆಯಲ್ಲಿರುವ ತೀಸ್ತಾ ದಂಪತಿಗೆ ಮತ್ತೆ ಕಸ್ಟಡಿ ಯಾಕೆ?

ಗುಜರಾತ್ ಪೊಲೀಸ್, ಸಿಬಿಐಗೆ ಯಾಕೆ ಸುಪ್ರೀಂಕೋರ್ಟ್ ಪ್ರಶ್ನೆ

Update: 2023-01-26 15:36 GMT

ಹೊಸದಿಲ್ಲಿ,ಜ.26: ಏಳು ವರ್ಷಗಳಿಗೂ ಅಧಿಕ ಸಮಯದಿಂದ ಜಾಮೀನು ಬಿಡುಗಡೆಯಲ್ಲಿರುವ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಹಾಗೂ ಆಕೆಯ ಪತಿ ಜಾವೇದ್ ಆನಂದ್ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲು ಯಾಕೆ ಬಯಸುತ್ತಿದ್ದೀರೆಂದು ಸುಪ್ರೀಂಕೋರ್ಟ್ ಬುಧವಾರ ಗುಜರಾತ್ ಪೊಲೀಸ್ ಹಾಗೂ ಕೇಂದ್ರೀಯ ತನಿಖಾ ದಳವನ್ನು ಪ್ರಶ್ನಿಸಿದೆ.

 2002ರ ಗುಜರಾತ್ ಗಲಭೆಯ ಸಂತ್ರಸ್ತರಿಗಾಗಿ ಸಂಗ್ರಹಿಸಲಾದ ನಿಧಿಗಳನ್ನು ದುರುಪಯೋಗಪಡಿಸಿದ ಆರೋಪದಲ್ಲಿ  ತೀಸ್ತಾ ಹಾಗೂ ಜಾವೇದ್ ದಂಪತಿಯ ವಿರುದ್ಧ  ಮೂರು ಎಫ್ಐಆರ್ಗಳು ಸಲ್ಲಿಕೆಯಾಗಿದ್ದವು. ಈ ಸಂಬಂಧ ಸೆಟಲ್ವಾಡ್, ಜಾವೇದ್ ಆನಂದ್, ಗುಜರಾತ್ ಪೊಲೀಸರು ಹಾಗೂ ಸಿಬಿಐ ಸಲ್ಲಿಸಿದ ಅರ್ಜಿಗ ವಿಚಾರಣೆ  ನಡೆಸಿದ ಸಂದರ್ಭ  ನ್ಯಾಯಮೂರ್ತಿಗಳಾದ ಎಸ್.ಕ. ಕೌಲ್, ಎ.ಎಸ್.ಓಕಾ ಹಾಗೂ ಬಿ.ವಿ.ನಾಗರತ್ನ ಅವರನ್ನೊಳಗೊಂಡ ನ್ಯಾಯಪೀಠವು   ಈ ಪ್ರಶ್ನೆಯನ್ನು ಎತ್ತಿದೆ.

ಸೆಟಲ್ವಾಡ್ ಹಾಗೂ ಜಾವೇದ್ ಆನಂದ್ ಪರವಾಗಿ ವಾದಿಸಿದ ಹಿರಿಯ ನ್ಯಾಯವಾದಿ ಕಪಿಲ್ಸಿಬಾಲ್ ಹಾಗೂ ಅಪರ್ಣಾ ಭಟ್ ಅವರು, ಈ ದಂಪತಿಯ ವಿರುದ್ದದ ಪ್ರಕರಣಗಳು ಕಳೆದ ಎಂಟು ವರ್ಷಗಳಿಂದ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಯಿದೆ. ಅಲ್ಲದೆ ನ್ಯಾಯಾಲಯವು ಪ್ರತ್ಯೇಕ ಪ್ರಕರಣಗಳಲ್ಲಿ ಅವರಿಗೆ ನಿರೀಕ್ಷಣಾ ಜಾಮೀನು ಹಾಗೂ ನಿಯಮಿತವಾದ ಜಾಮೀನು ನೀಡಿದೆ. ದಂಪತಿಯ ವಿರುದ್ದ ಸಿಬಿಐ ಇನ್ನೂ ಕೂಡಾ ಚಾರ್ಜ್ಶೀಟ್ ಸಲ್ಲಿಸಿಲ್ಲವೆಂದು ಸಿಬಲ್ ವಾದಿಸಿದರು.

ಉಭಯ  ವಕೀಲರ ವಾದಪ್ರತಿವಾದವನ್ನು ಆಲಿಸಿದ  ನ್ಯಾಯಾಲಯವು, ‘‘ ಓರ್ವ ವ್ಯಕ್ತಿಯನ್ನು ಎಷ್ಟು ಸಮಯದವರೆಗೆ ಕಸ್ಟಡಿಯಲ್ಲಿ ಇರಿಸುತ್ತೀರೆಂಬುದೇ ಇಲ್ಲಿ ಉದ್ಭವಿಸುವ ಪ್ರಶ್ನೆಯಾಗಿದೆ. ದಂಪತಿಗೆ ನಿರೀಕ್ಷಣಾ ಜಾಮೀನು ನೀಡಿ ಏಳು ವರ್ಷಗಳು ಕಳೆದಿವೆ. ಆದರೂ ನೀವು ಅವರನ್ನು ಕಸ್ಟಡಿಗೆ ಕಳುಹಿಸಲು ಬಯಸುತ್ತಿದ್ದೀರಿ ಎಂದು ನ್ಯಾಯಾಲಯ ಸಿಬಿಐ ಹಾಗೂ ಗುಜರಾತ್ ವಕೀಲರನ್ನುದ್ದೇಶಿಸಿ ಹೇಳಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ  ಹೆಚ್ಚುವರಿ ದಾಖಲೆ, ಸಾಮಾಗ್ರಿಗಳನ್ನು  ಹಾಜರುಪಡಿಸಲು ತಮಗೆ ನಾಲ್ಕು ವಾರಗಳ ಕಾಲಾವಕಾಶ ನೀಡುವಂತೆ  ಗುಜರಾತ್ ಪೊಲೀಸ್ ಹಾಗೂ  ಸಿಬಿಐ ನ್ಯಾಯಪೀಠವನ್ನು ಕೋರಿದ್ದು ಅದಕ್ಕೆ  ನ್ಯಾಯಾಲಯ ತನ್ನ ಸಮ್ಮತಿಯನ್ನು ಸೂಚಿಸಿದೆ.

ಇದನ್ನೂ ಓದಿ: ಪ್ರಜಾಸತ್ತಾತ್ಮಕ ತತ್ವ ಎತ್ತಿ ಹಿಡಿಯಲು ಪತ್ರಿಕಾ ಸ್ವಾತಂತ್ರ್ಯ ಪ್ರಮುಖ ಅಂಶ: ಪ್ರಧಾನಿ ಮೋದಿ ಕುರಿತ BBC ಸಾಕ್ಷ್ಯಚಿತ್ರ ನಿಷೇಧಕ್ಕೆ ಅಮೆರಿಕ ಪ್ರತಿಕ್ರಿಯೆ

Similar News