ಭಾರತದಲ್ಲಿ ಮಾನವ ಹಕ್ಕು ಉಲ್ಲಂಘನೆಗಳು ಗಣರಾಜ್ಯೋತ್ಸವ ಆಚರಣೆಗಳನ್ನು ಮಸುಕಾಗಿಸಿದೆ: ಯುರೋಪಿಯನ್‌ ಯೂನಿಯನ್‌ ಸದಸ್ಯೆ

Update: 2023-01-26 11:45 GMT

ಹೊಸದಿಲ್ಲಿ: "ಭಾರತದ ಗಣರಾಜ್ಯೋತ್ಸವ ಆಚರಣೆಯು (Republic Day) ಅಲ್ಲಿನ ಮಾನವ ಹಕ್ಕು ಉಲ್ಲಂಘನೆಗಳಿಂದ ಮಸುಕಾಗಿದೆ," ಎಂಬ ಯುರೋಪಿಯನ್‌ ಪಾರ್ಲಿಮೆಂಟ್‌ ಸದಸ್ಯ ಹಾಗೂ ಭಾರತದೊಂದಿಗಿನ ಸಂಬಂಧಗಳ ಯುರೋಪಿಯನ್‌ ಯೂನಿಯನ್‌ನ ಪರ್ಯಾಯ ಸದಸ್ಯೆಯಾಗಿರುವ ಅಲ್ವೀನಾ ಅಲಮೇತ್ಸ (Alviina Alametsa) ಹೇಳಿದ್ದಾರೆ ಹಾಗೂ ಭಾರತ ಭೇಟಿ ವೇಳೆ ತಾವು ಈ ಹಕ್ಕುಗಳ ಉಲ್ಲಂಘನೆಗೆ ಸಾಕ್ಷಿಯಾಗಿದ್ದಾಗಿಯೂ ತಿಳಿಸಿದ್ದಾರೆ ಎಂದು thewire.in ವರದಿ ಮಾಡಿದೆ.

ಭಾರತದ ಗಣರಾಜ್ಯೋತ್ಸವದ ಮುನ್ನಾ ದಿನ ನಡೆದ "ಭಾರತದಲ್ಲಿ ಸಂವಿಧಾನಿಕ ಹಕ್ಕುಗಳ ರಕ್ಷಣೆಯ ಪರಿಶೀಲನೆ" ಕುರಿತಾದ ವರ್ಚುವಲ್‌ ಸಭೆಯೊಂದಲ್ಲಿನ ಫಿನ್ನಿಶ್‌ ಗ್ರೀನ್‌ ಲೀಗ್‌ ರಾಜಕಾರಣಿಯಾಗಿರುವ ಅಲ್ವೀನಾ ಮೇಲಿನಂತೆ ಹೇಳಿದರು. ಈ ಕಾರ್ಯಕ್ರಮವನ್ನು  ಯುರೋಪಿಯನ್‌ ಯೂನಿಯನ್‌ ಮತ್ತು ಭಾರತದ ನಡುವಿನ ಸಂಬಂಧಗಳಲ್ಲಿ ಪ್ರಮುಖ ಪಾತ್ರ ವಹಿಸುವ ಮಾನವ ಹಕ್ಕುಗಳು ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ರಕ್ಷಣೆಗಾಗಿ ಪಣತೊಟ್ಟಿರುವ ಹೊರದೇಶಗಳ ಭಾರತೀಯರ ಸಂಸ್ಥೆ ಲಂಡನ್‌ ಸ್ಟೋರಿ ಆಯೋಜಿಸಿತ್ತು.

"ಭಾರತದಲ್ಲಿ ಹೋರಾಟಗಾರರ ಬಂಧನ, ಅಲ್ಪಸಂಖ್ಯಾತರ ಮೇಲೆ ದಾಳಿಗಳು ಹಾಗೂ ಮಾಧ್ಯಮದ ದಮನ ಅಲ್ಲಿ ಮಾನವ ಹಕ್ಕುಗಳು ಮತ್ತು ಸ್ವಾತಂತ್ರ್ಯದ ಅವನತಿಯ ಸೂಚಕವಾಗಿದೆ. ಪೊಲೀಸ್‌ ದೌರ್ಜನ್ಯಗಳು ಕೂಡ ದುರಾದೃಷ್ಟಕರ ಮತ್ತು  ಹೆಚ್ಚಿನ ಕ್ರಮಗಳು ಟೀಕಾಕಾರರ ದನಿಯನ್ನು ದಮನಿಸುವ ಯತ್ನಗಳಾಗಿವೆ," ಎಂದು ಅವರು ಹೇಳಿದರು.

"ಮಾನವ ಹಕ್ಕುಗಳ ರಕ್ಷಣೆ ಭಾರತ-ಯುರೋಪಿಯನ್‌ ಯೂನಿಯನ್‌ ಪಾಲುದಾರಿಕೆಯಲ್ಲಿ ಮಹತ್ವ ಪಡೆದಿದೆ ಹಾಗೂ ಭಾರತದ ಅಂತಾರಾಷ್ಟೀಯ ಪಾಲುದಾರರು ಆ ದೇಶದಲ್ಲಿ ನಡೆಯುವ ಘಟನೆಗಳಿಗೆ ಅದನ್ನು ಹೊಣೆಗಾರನನ್ನಾಗಿಸಬೇಕು, ಯುರೋಪಿಯನ್‌ ದೇಶಗಳಲ್ಲೂ ಅಲ್ಪಸಂಖ್ಯಾತರ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಈ ಕುರಿತು ಕೂಡ ಕ್ರಮಗಳು ಅಗತ್ಯವಿದೆ" ಎಂದು ಅವರು ಹೇಳಿದರು.

ಅನ್ವಿತಾ ಅವರು ಇತ್ತೀಚೆಗೆ ಭಾರತಕ್ಕೆ ಮೊದಲ ಬಾರಿ ಭೇಟಿ ನೀಡಿದ್ದು ಈ ಸಂದರ್ಭ ವಕೀಲರು, ಪತ್ರಕರ್ತರು ಹಾಗೂ ಸರ್ಕಾರಿ ಪ್ರತಿನಿಧಿಗಳನ್ನು ಭೇಟಿಯಾಗಿದ್ದರು.

ತಮ್ಮ ಭಾರತ ಭೇಟಿಯ ಅನುಭವಗಳನ್ನು ಹಂಚಿಕೊಂಡ ಆಕೆ " ನಾನು ಭೇಟಿಯಾದ ಅನೇಕ ಮಾನವ ಹಕ್ಕುಗಳ ಹೋರಾಟಗಾರರು, ಅಪಾಯಕಾರಿ ಹಾಗೂ ನಿರ್ಬಂಧಿತ ಸನ್ನಿವೇಶಗಳಲ್ಲಿ ಕೆಲಸ ಮಾಡುತ್ತಿರುವುದನ್ನು ನೋಡಿದೆ. ಅವರ ಕಚೇರಿಗಳನ್ನು ಮುಚ್ಚಲಾಗಿದೆ ಹಾಗೂ ಖಾತೆಗಳನ್ನು ಮುಟ್ಟುಗೋಲು ಹಾಕಲಾಗಿದೆ. ಹಲವಾರು ಗೌರವಾನ್ವಿತ ಎನ್‌ಜಿಒಗಳನ್ನು ಭೇಟಿಯಾದೆ ಹಾಗೂ ಅವರೆಲ್ಲೂ ಭೂಗತವಾಗಿ ಕಾರ್ಯಾಚರಿಸಬೇಕಾಗಿ ಬಂದಿದೆ," ಎಂದು ಅವರು ಹೇಳಿದರು.

"ಸಂವಿಧಾನದಲ್ಲಿ ಪ್ರದತ್ತವಾದ ಎಲ್ಲಾ ಹಕ್ಕುಗಳನ್ನೂ ಭಾರತ ಗೌರವಿಸುವಂತಾಗಬೇಕೆಂದು ಪ್ರಜಾಪ್ರಭುತ್ವ ದಿನದಂದು ಆಶಿಸುತ್ತೇನೆ," ಎಂದು ಅವರು ಬರೆದಿದ್ದಾರೆ.

ಇದನ್ನೂ ಓದಿ: ತೀಸ್ತಾರನ್ನು ಮತ್ತೆ ಏಕೆ ಜೈಲಿಗೆ ಕಳುಹಿಸಬೇಕೆಂದಿರುವಿರಿ: CBI, ಗುಜರಾತ್‌ ಪೊಲೀಸರಿಗೆ ಸುಪ್ರೀಂ ಕೋರ್ಟ್‌ ಪ್ರಶ್ನೆ

Similar News