ಮಣಿಪಾಲ ಇನ್ ಹೊಟೇಲಿನಲ್ಲಿ ಬೃಹತ್ ರಕ್ತದಾನ ಶಿಬಿರ
ಉಡುಪಿ: ಉಡುಪಿ ಕರಾವಳಿ ಬೈಪಾಸ್‌ನಲ್ಲಿರುವ ಮಣಿಪಾಲ ಇನ್ ಹೊಟೇಲಿನ ಮೂರನೇ ವಾರ್ಷಿಕೋತ್ಸವ ಹಾಗೂ ದೇಶದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರವನ್ನು ಹೊಟೇಲಿನ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿತ್ತು.
ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರ ಮತ್ತು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಕಾರದೊಂದಿಗೆ ಏರ್ಪಡಿಸಲಾದ ಶಿಬಿರಕ್ಕೆ ಹೊಟೇಲಿನ ಆಡಳಿತ ನಿರ್ದೇಶಕ ಮೌಲಾನ ಇಬ್ರಾಹಿಂ ಗಂಗೊಳ್ಳಿ ಸ್ವತಃ ತಾವೇ ಪ್ರಥಮವಾಗಿ ರಕ್ತದಾನ ಮಾಡುವ ಮೂಲಕ ಚಾಲನೆ ನೀಡಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಮೌಲಾನ ಇಬ್ರಾಹಿಂ, ರಕ್ತದಾನವು ಪುಣ್ಯ ಹಾಗೂ ದೇವರು ಮೆಚ್ಚುವ ಕೆಲಸ. ಇಂದು ರಕ್ತ ಅತೀ ಅವಶ್ಯಕವಾಗಿದೆ. ಅದರಲ್ಲೂ ಬಡವರಿಗೆ ಸಹಾಯವಾಗಲು ಈ ರಕ್ತದಾನ ಶಿಬಿರವನ್ನು ನಾವು ಆಯೋಜಿಸಿದ್ದೇವೆ. ಇದರಲ್ಲಿ ಜಾತಿ ಧರ್ಮ ಇಲ್ಲದೆ ಎಲ್ಕರೂ ರಕ್ತದಾನ ಮಾಡಿದ್ದಾರೆ ಎಂದರು.
ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಆಹಾರ ಸುರಕ್ಷತಾ ಅಧಿಕಾರಿ ಡಾ.ಪ್ರೇಮಾನಂದ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದ ದಿವಾಕರ್ ಖಾರ್ವಿ, ಅಜ್ಮಲ್ ಅಸದಿ, ಪಾಡುರಂಗ ಹಾಗೂ ಸಾಮಾಜಿಕ ಕಾರ್ಯಕರ್ತ ರಾದ ನಿತ್ಯಾನಂದ ಒಳಕಾಡು, ವಿಶು ಶೆಟ್ಟಿ ಅಂಬಲಪಾಡಿ, ಈಶ್ವರ ಮಲ್ಪೆ, ಇಬ್ರಾಹಿಂ ಗಂಗೊಳ್ಳಿ ಸೇರಿದಂತೆ ಹಲವು ಮಂದಿಯನ್ನು ಸನ್ಮಾನಿಸಲಾಯಿತು.
ಆರ್ಕಿಟೆಕ್ಚರ್ ಭಗವಾನ್ ದಾಸ್, ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಡಾ. ವೀಣಾ, ರಾಜ್ಯ ಸರಕಾರಿ ನೌಕರರ ಸಂಘದ ಉಡುಪಿ ಜಿಲ್ಲಾ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ಉದ್ಯಮಿ ಮೊಹಿಸಿನ್, ಕಿರಣ್ ಉಪಸ್ಥಿತರಿದ್ದರು. ಶಿಬಿರದಲ್ಲಿ ಹೊಟೇಲಿನ ಸಿಬಂದಿ ಸೇರಿದಂತೆ ನೂರಾರು ಮಂದಿ ರಕ್ತದಾನ ಮಾಡಿದರು.