×
Ad

ಮೂಗಿನ ಮೂಲಕ ನೀಡುವ ಭಾರತದ ಮೊದಲ ಕೋವಿಡ್ ಲಸಿಕೆ ಬಿಡುಗಡೆ

Update: 2023-01-26 21:28 IST

ಹೊಸದಿಲ್ಲಿ,ಜ.26: ಮೂಗಿನ ಮೂಲಕ ನೀಡಬಹುದಾದ ದೇಶದ ಮೊದಲ ಕೋವಿಡ್ ಲಸಿಕೆ ‘ಇನ್ಕೋವ್ಯಾಕ್’  (iNCOVACC)ಅನ್ನು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಅವರು ಗುರುವಾರ ಬಿಡುಗಡೆಗೊಳಿಸಿದರು. ಹೈದರಾಬಾದ್ ಮೂಲದ ಜೈವಿಕ ತಂತ್ರಜ್ಞಾನ ಸಂಸ್ಥೆ ಭಾರತ ಬಯೊಟೆಕ್ ಈ ಲಸಿಕೆಯನ್ನು ಅಭಿವೃದ್ಧಿಗೊಳಿಸಿದೆ.

ಲಸಿಕೆಯು ಪ್ರತಿ ಡೋಸ್ ಗೆ 325 ರೂ.ಗಳಂತೆ ಸರಕಾರಿ ಆಸ್ಪತ್ರೆಗಳಿಗೆ ಮತ್ತು 800 ರೂ.ಗಳಂತೆ ಖಾಸಗಿ ಆಸ್ಪತ್ರೆಗಳಿಗೆ ಲಭ್ಯವಾಗಲಿದೆ. 28 ದಿನಗಳ ಅಂತರದಲ್ಲಿ ಲಸಿಕೆಯ ಎರಡು ಡೋಸ್ಗಳನ್ನು ನೀಡಬೇಕಾಗುತ್ತದೆ.

ತುರ್ತು ಸಂದರ್ಭಗಳಲ್ಲಿ ಇನ್ಕೋವ್ಯಾಕ್ (iNCOVACC) ನ ನಿರ್ಬಂಧಿತ ಬಳಕೆಗೆ ಕೇಂದ್ರೀಯ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆಯು ಅನುಮೋದನೆ ನೀಡಿದೆ ಎಂದು ಕೇಂದ್ರ ಸರಕಾರವು ಡಿ.1ರಂದು ತಿಳಿಸಿತ್ತು. ಪ್ರಾಥಮಿಕ ಹಂತದಲ್ಲಿ ಬೇರೆ ಲಸಿಕೆಯನ್ನು ಪಡೆದಿರುವ ವಯಸ್ಕರಿಗೆ ಇನ್ಕೋವ್ಯಾಕ್ ಅನ್ನು ಬೂಸ್ಟರ್ ಡೋಸ್ ಆಗಿ ನೀಡಬಹುದಾಗಿದೆ.

ಇನ್ಕೋವ್ಯಾಕ್ (iNCOVACC) ನಿರ್ಬಂಧಿತ ಬಳಕೆಗಾಗಿ ಅನುಮೋದನೆ ಪಡೆದಿರುವ ಮೊದಲ ಸ್ವದೇಶಿ ನಿರ್ಮಿತ ಮೂಗಿನ ಮೂಲಕ ನೀಡಬಹುದಾದ ಕೋವಿಡ್ ಲಸಿಕೆಯಾಗಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನು ಓದಿ: ದೇಶದ ಎಲ್ಲ 46 ಮಾನಸಿಕ ಆರೋಗ್ಯ ಸಂಸ್ಥೆಗಳು ಶೋಚನೀಯ ಸ್ಥಿತಿಯಲ್ಲಿವೆ: NHRC

Similar News