ಧಾರ್ಮಿಕ ಸ್ಥಳಗಳನ್ನು ಧಾರ್ಮಿಕ ಜನರಿಗೇಕೆ ಬಿಟ್ಟುಬಿಡಬಾರದು?: ಆಂಧ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ

Update: 2023-01-27 10:01 GMT

ಹೊಸದಿಲ್ಲಿ: ಅಹೋಬಿಲಂ ಮಠಕ್ಕೆ ಸೇರಿದ್ದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಆಡಳಿತವನ್ನು ಸರಕಾರದ ಸುಪರ್ದಿಗೆ ತರುವ  ತನ್ನ ಯೋಜನೆಗೆ ಹೈಕೋರ್ಟಿನಿಂದ ಅನುಮತಿ ದೊರೆಯದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದ ಆಂಧ್ರ ಪ್ರದೇಶ ಸರ್ಕಾರದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ನಿರಾಕರಿಸಿದ  ನ್ಯಾಯಾಲಯ "ಧಾರ್ಮಿಕ ಸ್ಥಳಗಳನ್ನು ಧಾರ್ಮಿಕ ಜನರಿಗೇ ಬಿಟ್ಟುಬಿಡಬಾರದೇಕೆ?" ಎಂದು ಪ್ರಶ್ನಿಸಿದೆ.

ಆಂದ್ರ ಪ್ರದೇಶ ಹೈಕೋರ್ಟಿನ ಅಕ್ಟೋಬರ್‌ 13, 2022 ಆದೇಶವನ್ನು ಪ್ರಶ್ನಿಸಿ ಆಂಧ್ರ ಪ್ರದೇಶ ಸರ್ಕಾರ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಸ್‌ ಕೆ ಕೌಲ್‌ ಮತ್ತು ಎ ಎಸ್‌ ಓಕಾ ಅವರ ಪೀಠ ನಡೆಸುತ್ತಿದೆ.

"ಶ್ರೀ ಅಹೋಬಿಲಂ ಮಠ ಪರಂಪರಾಧೀನ ಶ್ರೀ ಲಕ್ಷ್ಮೀ ಸ್ವಾಮಿ ಅಹೋಬಿಲಂ ದೇವಸ್ಥಾನಂ ಅಹೋಬಿಲಂ ಮಠದೊಂದಿಗೆ ಧಾರ್ಮಿಕ ಪದ್ಧತಿ ಮತ್ತು ಆಡಳಿತದ ಕಾರಣ ಸಂಯೋಜಿತವಾಗಿರುವುದರಿಂದ ಈ ದೇವಸ್ಥಾನ ಅಹೋಬಿಲಂ ಮಠದ ಅವಿಭಾಜ್ಯ ಅಂಗವಾಗಿದೆ," ಎಂದು ಹೈಕೋರ್ಟ್‌ ತನ್ನ ಆದೇಶದಲ್ಲಿ ತಿಳಿಸಿತ್ತು.

ಈ ದೇವಸ್ಥಾನಕ್ಕೆ ಈ ಹಿಂದೆಯೂ ಕಾರ್ಯನಿರ್ವಾಹಕ ಅಧಿಕಾರಿಯನ್ನು ನೇಮಕಗೊಳಿಸಲಾಗಿತ್ತಾದರೂ ಮಾರ್ಚ್‌ 2019 ರಲ್ಲಿ ಅಧಿಕಾರಿಯೊಬ್ಬರನ್ನು ನೇಮಕಗೊಳಿಸಿದ ನಂತರ ಪ್ರತಿಭಟನೆಗಳು ಆರಂಭಗೊಂಡಿದ್ದವು ಎಂದು ರಾಜ್ಯ ಸರ್ಕಾರ ವಾದಿಸಿತ್ತು.

ಇದರಿಂದ ಸಮಾಧಾನಗೊಳ್ಳದ ಸುಪ್ರೀಂ ಕೋರ್ಟ್‌ ಪೀಠ, "ನೀವೇಕೆ ಅದರಲ್ಲಿ ಕಾಲಿಡುತ್ತಿದ್ದೀರಿ?" ಎಂದು ಪ್ರಶ್ನಿಸಿತು. ರಾಜ್ಯ ಸರ್ಕಾರದ ವಕೀಲರು ತಮ್ಮ ವಾದವನ್ನು ಮುಂದುವರಿಸಲು ಯತ್ನಿಸಿದಾಗ ಜಸ್ಟಿಸ್‌ ಕೌಲ್‌ ಪ್ರತಿಕ್ರಿಯಿಸಿ "ದೇವಸ್ಥಾನದ ಜನರು ಅದನ್ನು ನಿಭಾಯಿಸಲಿ... ಧಾರ್ಮಿಕ ಸ್ಥಳಗಳನ್ನು ಧಾರ್ಮಿಕ ಜನರಿಗೇಕೆ ಬಿಟ್ಟುಬಿಡಬಾರದು?" ಎಂದು ಕೇಳಿದರು.

ಇದನ್ನೂ ಓದಿ: ಆರೋಪಿ ಸ್ಯಾಂಟ್ರೊ ರವಿಯ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

Similar News