ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದ ವೇಳೆಯೇ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿಯನ್ನು ವಜಾಗೊಳಿಸಿದ ಗೂಗಲ್ !

Update: 2023-01-27 11:32 GMT

ಕ್ಯಾಲಿಫೋರ್ನಿಯಾ: ಗೂಗಲ್ (Google) ಪ್ರಕಟಿಸಿರುವ ಉದ್ಯೋಗ ಕಡಿತದಿಂದ ಸುಮಾರು 12,000 ಉದ್ಯೋಗಿಗಳು ತೊಂದರೆಗೀಡಾಗಿದ್ದು, ಅನೇಕರು ತಾವು ಉದ್ಯೋಗದಿಂದ ವಜಾಗೊಂಡಿರುವುದು ಕಂಪ್ಯೂಟರ್ ವ್ಯವಸ್ಥೆಯನ್ನು ಪ್ರವೇಶಿಸಲು ಸಾಧ್ಯವಾಗದಾಗ ತಿಳಿಯಿತು ಎಂದು ಅಳಲು ತೋಡಿಕೊಂಡಿದ್ದಾರೆ. ಗೂಗಲ್ ತನ್ನ ಉದ್ಯೋಗ ಕಡಿತ ನೀತಿಯನ್ನು ಎಷ್ಟು ಗೌಪ್ಯವಾಗಿ ಜಾರಿಗೊಳಿಸುತ್ತಿದೆಯೆಂದರೆ, ಸ್ವತಃ ತನ್ನ ಮಾನವ ಸಂಪನ್ಮೂಲ ವಿಭಾಗಕ್ಕೂ ಈ ಸಂಗತಿ ತಿಳಿಯದಷ್ಟು! ಇಂತಹುದೇ ಅನಿರೀಕ್ಷಿತ ಉದ್ಯೋಗ ಕಡಿತದಿಂದ ಸ್ವತಃ ಮಾನವ ಸಂಪನ್ಮೂಲ ಅಧಿಕಾರಿಯೊಬ್ಬರು ಉದ್ಯೋಗದಿಂದ ವಜಾಗೊಂಡಿದ್ದಾರೆ ಎಂದು indiatoday.in ವರದಿ ಮಾಡಿದೆ.

ಗೂಗಲ್ ಸಂಸ್ಥೆಯಲ್ಲಿ ನೇಮಕಾತಿ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಡ್ಯಾನ್ ಲ್ಯಾಂಗಿಯನ್-ರಿಯಾನ್ ಎಂಬುವವರು, ತಾನು ಸಮರ್ಥ ಅಭ್ಯರ್ಥಿಯೊಬ್ಬರ ಸಂದರ್ಶನ ನಡೆಸುವಾಗಲೇ ನನ್ನ ಕರೆಯ ಸಂಪರ್ಕ ಕಡಿತಗೊಂಡಿತು. ನಂತರ ಸಂಸ್ಥೆಯ ಆಂತರಿಕ ಅಂತರ್ಜಾಲವನ್ನು ಬಳಸಿಕೊಂಡು ಶುಕ್ರವಾರ ಮತ್ತೆ ಲಾಗಿನ್ ಆಗಲು ಪ್ರಯತ್ನಿಸಿದರೂ ಸಾಧ್ಯವಾಗದೆ ವಿಫಲನಾದೆ ಎಂದು ಅಳಲು ತೋಡಿಕೊಂಡಿರುವುದಾಗಿ ವರದಿಯಾಗಿದೆ.

ಇದು ಕೇವಲ ಡ್ಯಾನ್ ಲ್ಯಾಂಗಿಯನ್-ರಿಯಾನ್ ಕತೆ ಮಾತ್ರವಲ್ಲ; ಅವರ ತಂಡದಲ್ಲಿನ ಇತರ ಸದಸ್ಯರ ದೂರೂ ಇದೇ ಆಗಿದೆ. ತಾವು ಕಂಪ್ಯೂಟರ್ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರೆಲ್ಲ ತಮ್ಮ ವ್ಯವಸ್ಥಾಪಕರ ಗಮನಕ್ಕೆ ತಂದರೂ, ಅವರದನ್ನು ತಾಂತ್ರಿಕ ತೊಂದರೆ ಎಂದು ತಳ್ಳಿ ಹಾಕಿದ್ದಾರೆ. ಇಮೇಲ್ ಮೂಲಕ ಅವರನ್ನೆಲ್ಲ ವಜಾಗೊಳಿಸಿರುವ ಸಂದೇಶವನ್ನು ನೀಡಿದಾಗಲಷ್ಟೆ ಅವರಿಗೆಲ್ಲ ತಾವು ಉದ್ಯೋಗ ಕಳೆದುಕೊಂಡಿರುವ ಸಂಗತಿ ಅರಿವಾಗಿದೆ.

ಜಾಗತಿಕ ಆರ್ಥಿಕ ಹಿಂಜರಿಕೆಯ ಭೀತಿಯಲ್ಲಿ ಅಮೆರಿಕಾದಲ್ಲಿನ ಹಲವಾರು ದೈತ್ಯ ತಂತ್ರಜ್ಞಾನ ಕಂಪನಿಗಳು ಸರಣಿ ಉದ್ಯೋಗ ಕಡಿತ ಪ್ರಕಟಿಸುತ್ತಿದ್ದು, ಈ ಪೈಕಿ ಭಾರತ ಮೂಲದ ಉದ್ಯೋಗಿಗಳೇ ಹೆಚ್ಚು ಸಂತ್ರಸ್ತರಾಗಿದ್ದಾರೆ. ಅಮೆರಿಕಾದಲ್ಲಿ ಶುರುವಾಗಿರುವ ಉದ್ಯೋಗ ಕಡಿತ ಪ್ರಕ್ರಿಯೆಯಿಂದ ಈವರೆಗೆ ಸುಮಾರು 80,000 ಭಾರತೀಯರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಮೈಕ್ರೋಸಾಫ್ಟ್ ಬಳಕೆದಾರರಿಗೆ ಕೆಲವು ತುರ್ತು ಎಚ್ಚರಿಕೆ ನೀಡಿದ ಭಾರತ ಸರ್ಕಾರ

Similar News