​ಖಗೋಳದ ಅಪರೂಪದ ಅತಿಥಿ ಧೂಮಕೇತು ವಿದಾಯಕ್ಕೆ ಸಿದ್ಧ!

Update: 2023-01-27 13:01 GMT

ಉಡುಪಿ: ಖಗೋಳದ ಅಪರೂಪದ ಅತಿಥಿ ಹಸಿರು ಬಣ್ಣದ ಸಿ/2022 ಇ3 ದೀರ್ಘಾವಧಿಯ ಧೂಮಕೇತು ನಮಗೆಲ್ಲ ವಿದಾಯ ಹೇಳಲು ಸಿದ್ಧವಾಗುತ್ತಿದೆ. ಮತ್ತೆ ಇದರ ಭೇಟಿ ಬರೋಬ್ಬರಿ 50,000 ವರ್ಷಗಳ ಬಳಿಕ ಆಗಲಿದೆ.

ಧೂಮಕೇತುವು ಗ್ರಹದ ಹಾಗೆಯೇ ಸೂರ್ಯನ ಸುತ್ತ ಚಲಿಸುವ ಶಿಲೆಯ ತುಣುಕು. ಇಂತಹ ಕಲ್ಲುಗಳಲ್ಲಿ ಹೆಚ್ಚಿನವು ಸೌರವ್ಯೂಹದ ಅಂಚಿನಲ್ಲಿರುವ ಊರ್ಟ್ ಮೇಘದಿಂದ ಹುಟ್ಟಿ ಕೊಂಡಿರುವಂತಹವು. ಈ ಪ್ರದೇಶವು ಸೂರ್ಯನಿಂದ ಬಹಳ ದೂರವಿರುವುದರಿಂದ ಈ ಕಾಯಗಳು ಹಿಮದ ಶಿಲೆಗಳಾಗಿರುತ್ತವೆ. ಆವರ್ತಕ ಧೂಮಕೇತುಗಳು ನಿರ್ದಿಷ್ಟ ಕಕ್ಷಾವಧಿಯೊಂದಿಗೆ ಸೂರ್ಯನ ಸುತ್ತ ಪುನರಾವರ್ತಿತವಾಗಿ ಸುತ್ತುತ್ತವೆ. ಕೆಲವು ಧೂಮಕೇತುಗಳು ಮರಳಿ ಬಾರದಂತಹವುಗಳು. ಅವುಗಳನ್ನು ಆವರ್ತಕವಲ್ಲದ ಧೂಮಕೇತು ಗಳೆಂದು ಕರೆಯಲಾಗುತ್ತದೆ.  

ಪ್ರಸಿದ್ಧ ಹ್ಯಾಲಿ ಧೂಮಕೇತು ಆವರ್ತನೀಯ ಧೂಮಕೇತುವಾಗಿದ್ದು, ಪ್ರತಿ 76 ವರ್ಷಗಳಿಗೊಮ್ಮೆ ಸೂರ್ಯನ ಸುತ್ತ ಒಂದು ಸುತ್ತನ್ನು ಪೂರ್ಣಗೊಳಿಸುತ್ತದೆ. ಇದು ಕೊನೆಯ ಬಾರಿಗೆ 1986ರಲ್ಲಿ ಕಾಣಿಸಿಕೊಂಡಿದ್ದು, ಪುನಃ ಇದರ ಭೇಟಿ 2061ನೇ ವರ್ಷದಲ್ಲಿ ಆಗಲಿದೆ. ಹಾಗೆಯೇ ಪ್ರಸ್ತುತ ಸಿ/2022 ಇ3 ಧೂಮಕೇತು ಕೂಡಾ ಆವರ್ತಕ ಧೂಮಕೇತುವಾಗಿದ್ದು, ಸುದೀರ್ಘವಾದ 50000 ವರ್ಷಗಳ ಕಕ್ಷಾವಧಿಯನ್ನು ಹೊಂದಿರುವ ಧೂಮಕೇತುವಾಗಿದೆ. ಹಿಂದಿನ ಬಾರಿ ಈ ಧೂಮಕೇತುವು ಭೂಮಿಯನ್ನು ಭೇಟಿ ಮಾಡಿದಾಗ ಆದಿ ಮಾನವರಾದ ನಿಯಾಂಡರ್ಥಾಲ್ಸ್ ಭೂಮಿಯ ಮೇಲೆ ವಾಸಿಸುತ್ತಿದ್ದರು ಹಾಗೂ ಸಹಾರಾ ಮರುಭೂಮಿಯು ಹಸಿರಿನಿಂದ ಸಮೃದ್ಧವಾಗಿ ಫಲವತ್ತು ಆಗಿತ್ತು.  
ಪ್ರಸ್ತುತ ಸಿ/2022 ಇ3 ಧೂಮಕೇತುವು ಒಳ ಸೌರವ್ಯೆಹದಲ್ಲಿದ್ದು, 2023 ಜ.12ರಂದು ಪುರ ರವಿ ಬಿಂದುವನ್ನು ತಲುಪಿ, ಅಂದರೆ ಸೂರ್ಯನ ಸಮೀಪ ತನ್ನ ಚಲನೆಯನ್ನು ಪೂರ್ಣಗೊಳಿಸಿದೆ. ಅಂತೆಯೇ ತನ್ನ ಕಕ್ಷೆಯಲ್ಲಿ ಮರಳಿ ಹೋಗುವಾಗ ಭೂಮಿಯ ಸಮೀಪಕ್ಕೆ ಬರಲಿದ್ದು, ಇದೇ ಫೆ.1ರಂದು ಭೂಮಿ ಯಿಂದ 42.63 ದಶಲಕ್ಷ ಕಿ.ಮೀ.ಗಳಷ್ಟು ಸಮೀಪದಿಂದ ಹಾದು ಹೋಗಲಿದೆ. ಅಂದರೆ, ಭೂಮಿ ಮತ್ತು ಸೂರ್ಯನ ನಡುವಿನ ಅಂತರದ ಸರಿಸುಮಾರು ಮೂರನೇ ಒಂದರಷ್ಟು.

ಈ ಧೂಮಕೇತುವು ಭೂಮಿಯ ಹತ್ತಿರಕ್ಕೆ ಬಂದಂತೆ 5.4ರಷ್ಟು ಕಾಂತಿಮಾನದಲ್ಲಿ ಪ್ರಕಾಶಿಸಲಿದೆ. ಜನವರಿ ತಿಂಗಳ ಕೊನೆಯ ಕೆಲವು ದಿನಗಳಲ್ಲಿ ಮತ್ತು ಫೆಬ್ರವರಿ ತಿಂಗಳ ಪ್ರಾರಂಭದ ಕೆಲವು ದಿನಗಳಲ್ಲಿ ಪ್ರಕಾಶಮಾನವಾಗಿ ಗೋಚರಿಸುವ ಈ ಧೂಮಕೇತುವನ್ನು ಭೂಮಿಯಿಂದ ವೀಕ್ಷಿಸಬಹುದು. ಧೂಮಕೇತುವು ಫೆ.1ರಂದು ಮುಂಜಾನೆಯ ಆಕಾಶದಲ್ಲಿ ಪ್ರಕಾಶಮಾನವಾಗಿ ಗೋಚರಿಸಲಿದ್ದು, ಪುನಃ 50000 ವರ್ಷಗಳ ಬಳಿಕ ಕಾಣಿಸಿಕೊಳ್ಳುವ ಈ ಅಪರೂಪದ ಅತಿಥಿ ಯನ್ನು ವೀಕ್ಷಿಸುವ ಮೂಲಕ ವಿದಾಯ ಹೇಳಲು ಇದೊಂದು ಸುವರ್ಣಾವಕಾಶ ಎಂದೇ ಹೇಳಬಹುದು ಎಂದು ಉಡುಪಿ ಪಿಪಿಸಿ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಸಂಯೋಜಕ ಆತುಲ್ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Similar News