'ಕಳವಳಕಾರಿ ವಿದ್ಯಮಾನ': ಆಸ್ಪತ್ರೆ ಸಿಬ್ಬಂದಿಗೆ ವೇತನ ಪಾವತಿಸುವಂತೆ ದಿಲ್ಲಿ ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

Update: 2023-01-27 13:41 GMT

ಹೊಸದಿಲ್ಲಿ: ದಿಲ್ಲಿ ಸರ್ಕಾರ ನಡೆಸುವ ಮಹರ್ಷಿ ವಾಲ್ಮೀಕಿ ಆಸ್ಪತ್ರೆ(Maharishi Valmiki Hospital)ಯ ಸಿಬ್ಬಂದಿಗಳಿಗೆ ಬಾಕಿ ವೇತನವನ್ನು ಫೆಬ್ರವರಿ 8 ರೊಳಗೆ ಪಾವತಿಸುವಂತೆ ದಿಲ್ಲಿ ಹೈಕೋರ್ಟ್‌(Delhi High Court) ತನ್ನ ಇತ್ತೀಚಿನ ಆದೇಶವೊಂದರಲ್ಲಿ ಸೂಚಿಸಿದೆ.

ಈ ಆಸ್ಪತ್ರೆಯಲ್ಲಿ ನರ್ಸಿಂಗ್‌ ಆರ್ಡರ್ಲಿಗಳಾಗಿ ಕೆಲಸ ಮಾಡುತ್ತಿರುವ ಒಂಬತ್ತು ಸಿಬ್ಬಂದಿಗಳು ತಮಗೆ ಕಳೆದ ವರ್ಷದ ಎಪ್ರಿಲ್‌ ತಿಂಗಳಿನಿಂದ ವೇತನ ಪಾವತಿಸಲಾಗಿಲ್ಲ ಎಂದು ದೂರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಜಸ್ಟಿಸ್‌ ರೇಖಾ ಪಲ್ಲಿ(Rekha Palli) ನೇತೃತ್ವದ ಏಕಸದಸ್ಯ ಪೀಠ ಮೇಲಿನ ಆದೇಶ ಹೊರಡಿಸಿದೆ.

"ದಿಲ್ಲಿ ಸರ್ಕಾರದ ಎರಡು ಇಲಾಖೆಗಳ ನಡುವೆ ಫೈಲ್‌ಗಳು ಅತ್ತಿತ್ತ ಹೋಗುತ್ತಿರುವುದರಿಂದಾಗಿ ಎಪ್ರಿಲ್‌ 12, 2022 ರಿಂದ ಈ ಉದ್ಯೋಗಿಗಳಿಗೆ ವೇತನ ದೊರಕಿಲ್ಲ ಎಂಬುದು ಕಳವಳಕಾರಿ ವಿದ್ಯಮಾನ ಎಂದು ಜನವರಿ 24 ರಂದು ಹೊರಡಿಸಿದ ತನ್ನ ತೀರ್ಪಿನಲ್ಲಿ ನ್ಯಾಯಾಲಯ ಹೇಳಿದೆ.

ಕಾರ್ಮಿಕ ನ್ಯಾಯಾಲಯವು ಉದ್ಯೋಗಿಗಳ ವೇತನ ಪಾವತಿಸುವಂತೆ ಆಸ್ಪತ್ರೆಗೆ ಸೂಚಿಸುವ ಬದಲು ಆಸ್ಪತ್ರೆಯ ಸತತ ಮನವಿಯಂತೆ ವಿಚಾರಣೆಯನ್ನು ಮುಂದೂಡುತ್ತಿರುವುದರಿಂದ ಕಾರ್ಮಿಕರು ಅನಿವಾರ್ಯವಾಗಿ ಹೈಕೋರ್ಟ್‌ ಮೊರೆ ಹೋಗುವಂತಾಗಿತ್ತು ಎಂದು ಉದ್ಯೋಗಿಗಳ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಮುಂದಿನ ವಿಚಾರಣೆಗೆ ಮುಂಚಿತವಾಗಿ ಉದ್ಯೋಗಿಗಳಿಗೆ ಅವರ ವೇತನ ದೊರೆಯದೇ ಇದ್ದರೆ ದಿಲ್ಲಿ ಸರ್ಕಾರದ ವಿತ್ತ ಕಾರ್ಯದರ್ಶಿ ಮುಂದಿನ ವಿಚಾರಣೆಗೆ ಹಾಜರಾಗಬೇಕಿದೆ ಎಂದು  ನ್ಯಾಯಾಲಯ ಹೇಳಿದೆ.

ಸಂಬಂಧಿತ ಪ್ರಾಧಿಕಾರಗಳಿಗೆ ನೋಟಿಸ್‌ ಜಾರಿಗೊಳಿಸಿದ ಹೈಕೋರ್ಟ್‌ ಮುಂದಿನ ವಿಚಾರಣೆಯನ್ನು ಫೆಬ್ರವರಿ 8 ಕ್ಕೆ ನಿಗದಿಪಡಿಸಿದೆ.

Similar News