ಯುವಕನ ಹತ್ಯೆ ಪ್ರಕರಣ: ಸಾಕ್ಷ್ಯಾಧಾರ ಕೊರತೆಯಿಂದ ಹಿಂದುತ್ವ ನಾಯಕ ಸಹಿತ 20 ಆರೋಪಿಗಳು ದೋಷಮುಕ್ತ

Update: 2023-01-27 15:08 GMT

ಮುಂಬೈ: 2014 ರಲ್ಲಿ ಮೊಹ್ಸಿನ್ ಶೇಖ್ ಎಂಬ ಯುವಕನ ಕೊಲೆ ಪ್ರಕರಣದ 20 ಆರೋಪಿಗಳನ್ನು ಮಹಾರಾಷ್ಟ್ರದ ಪುಣೆಯ ನ್ಯಾಯಾಲಯವು ಖುಲಾಸೆಗೊಳಿಸಿದೆ.  

ಮಾಹಿತಿ ತಂತ್ರಜ್ಞಾನ ಉದ್ಯೋಗಿ ಶೇಖ್ (28) ಅವರನ್ನು ಜೂನ್ 2, 2014 ರಂದು ಹಡಪ್ಸರ್ ಪ್ರದೇಶದಲ್ಲಿ ದೇವತೆಗಳ ಮಾರ್ಫಿಂಗ್ ಮಾಡಿದ್ದಾರೆ ಎಂದು ಆರೋಪಿಸಿ ಹಿಂದುತ್ವವಾದಿಗಳ ಗುಂಪು ದಾಳಿ ಮಾಡಿ ಹತ್ಯೆ ಮಾಡಿತ್ತು.  ಈ ಗುಂಪಿಗೆ ನೇತೃತ್ವ ವಹಿಸಿದ್ದ ಆರೋಪದ ಮೇಲೆ ಹಿಂದೂ ರಾಷ್ಟ್ರ ಸೇನೆ (ಎಚ್‌ಆರ್‌ಎಸ್) ನಾಯಕ ಧನಂಜಯ್ ದೇಸಾಯಿ ಸೇರಿದಂತೆ 20 ಜನರನ್ನು ಬಂಧಿಸಲಾಗಿತ್ತು.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಸ್‌ಬಿ ಸಾಳುಂಕೆ ಅವರು ದೇಸಾಯಿ ಸೇರಿದಂತೆ 20 ಜನರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಿದ್ದಾರೆ ಎಂದು ಎಚ್‌ಆರ್‌ಎಸ್ ನಾಯಕನ ವಕೀಲ ಮಿಲಿಂದ್ ಪವಾರ್ ಹೇಳಿದ್ದಾರೆ.

ಕೊಲೆ ನಡೆದಾಗ ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಧನಂಜಯ್ ದೇಸಾಯಿ ಅವರು ಜೈಲಿನಲ್ಲಿದ್ದರು ಎಂದು ಪವಾರ್ ಹೇಳಿದ್ದಾರೆ. ದೇಸಾಯಿಗೆ ಹತ್ಯೆಯಲ್ಲಿ ಅಥವಾ ನಂತರ ನಡೆದ ಗಲಭೆಯಲ್ಲಿ ಯಾವುದೇ ಪಾತ್ರವಿಲ್ಲ ಎಂದು ಅವರು ಹೇಳಿದರು.

ಪ್ರಕರಣದ ಸಾಕ್ಷಿಗಳು ಇಡೀ ಘಟನೆಯನ್ನು ವಿವರಿಸಿದ್ದಾರೆ. ಆದರೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳನ್ನು ಗುರುತಿಸಲು ಅವರು ವಿಫಲರಾಗಿದ್ದಾರೆ ಎಂದು ಪವಾರ್ ತಿಳಿಸಿದ್ದಾರೆ.

Similar News