ನನ್ನ 44 ದಿನಗಳ ವೇತನ ಪಡೆಯಲು ನೆರವಾಗಿ: ಗಣರಾಜ್ಯೋತ್ಸವ ಪರೇಡ್ ವಿಶೇಷ ಆಹ್ವಾನಿತ ಕಾರ್ಮಿಕನಿಂದ ಪ್ರಧಾನಿಗೆ ಮೊರೆ

Update: 2023-01-27 17:10 GMT

ಹೊಸದಿಲ್ಲಿ,ಜ.27: ಇಲ್ಲಿಯ ಕರ್ತವ್ಯಪಥದಲ್ಲಿ ಗುರುವಾರ ನಡೆದ ಗಣರಾಜ್ಯೋತ್ಸವ ಪರೇಡ್(Republic Day parade) ವೀಕ್ಷಿಸಲು ವಿಶೇಷ ಆಹ್ವಾನಿತರಲ್ಲೊಬ್ಬರಾಗಿದ್ದ,ವೃತ್ತಿಯಲ್ಲಿ ಉದ್ಯಾನವನದ ಮಾಲಿಯಾಗಿರುವ ಸುಖನಂದನ್ ಬಾಕಿಯಿರುವ ತನ್ನ 44 ದಿನಗಳ ವೇತನವನ್ನು ಪಡೆಯಲು ನೆರವಾಗುವಂತೆ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರಿಗೆ ಮನವಿ ಮಾಡಿಕೊಂಡಿದ್ದಾರೆ.

ಸೆಂಟ್ರಲ್ ವಿಸ್ತಾ ಯೋಜನೆ(Central Vista Project)ಯ ಕಾಮಗಾರಿಗಳಲ್ಲಿ,ಇಂಡಿಯಾ ಗೇಟ್‌ ನ ಸುತ್ತುಮುತ್ತ ಮತ್ತು ಕರ್ತವ್ಯಪಥದಲ್ಲಿ ನಿರ್ವಹಣೆ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಹಲವಾರು ಕಾರ್ಮಿಕರಿಗೆ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗಿಯಾಗಲು ವಿಶೇಷ ಪಾಸ್ ಗಳನ್ನು ನೀಡಲಾಗಿತ್ತು.
ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi Murmu),ಮೋದಿ ಮತ್ತು ಇತರ ಗಣ್ಯರು ಆಸೀನರಾಗಿದ್ದ ವಂದನಾ ವೇದಿಕೆಯ ಎದುರಿನಲ್ಲೇ,ಕರ್ತವ್ಯಪಥದ ಇನ್ನೊಂದು ಬದಿಯಲ್ಲಿ ಈ ಕಾರ್ಮಿಕರಿಗೆ ಸ್ಥಳಾವಕಾಶ ಕಲ್ಪಿಸಲಾಗಿತ್ತು.

ಮೋದಿಯವರನ್ನು ಇಷ್ಟೊಂದು ಹತ್ತಿರದಿಂದ ನೋಡಿದ ತನ್ನ ಅನುಭವವನ್ನು ನಂದನ್ ಸಂಭ್ರಮದಿಂದಲೇ ಹಂಚಿಕೊಂಡಿದ್ದಾರೆ. ಮೋದಿಯವರು ತಾವು ಕುಳಿತಿದ್ದ ಸ್ಥಳದ ಸಮೀಪ ಬಂದು ತಮ್ಮತ್ತ ಕೈಬೀಸಿದಾಗ ತಾನು ಪುಳಕಗೊಂಡಿದ್ದೆ ಎಂದರು.

ಮೋದಿಯವರ ಜೊತೆ ಮಾತನಾಡುವ ಅವಕಾಶ ಸಿಕ್ಕಿದರೆ ಏನು ಕೇಳುತ್ತೀರಿ ಎಂಬ ಸುದ್ದಿಗಾರರ ಪ್ರಶ್ನೆಗೆ ನಂದನ್,‘ನನ್ನ 44 ದಿನಗಳ ಕೆಲಸದ ವೇತನವನ್ನು ನೀಡಲು ನನ್ನ ಹಿಂದಿನ ಗುತ್ತಿಗೆದಾರರು ನಿರಾಕರಿಸಿದ್ದಾರೆ. ನನ್ನ ವೇತನ ಬಾಕಿಯನ್ನು ಪಡೆಯಲು ನೆರವಾಗುವಂತೆ ಮೋದಿಜಿಯವರನ್ನು ಕೋರುತ್ತೇನೆ. ನನಗೆ 21,000 ರೂ.ಗಳ ವೇತನ ಬಾಕಿಯಿದೆ,ಆದರೆ ಗುತ್ತಿಗೆದಾರರು ಕೇವಲ 6,000 ರೂ.ನೀಡುವುದಾಗಿ ಹೇಳುತ್ತಿದ್ದಾರೆ ’ಎಂದು ಉತ್ತರಿಸಿದರು.

ಮೂಲತಃ ಮಧ್ಯಪ್ರದೇಶದ ನವಾರಿ ಜಿಲ್ಲೆಯ ನಿವಾಸಿಯಾಗಿರುವ ನಂದನ್ (44) ಕಳೆದೆರಡು ತಿಂಗಳುಗಳಿಂದ ಇಂಡಿಯಾ ಗೇಟ್ ನಲ್ಲಿಯ ತೋಟಗಾರಿಕೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಅವರು ಗುತ್ತಿಗೆದಾರನ ಅಡಿ ಆಂಧ್ರಭವನದಲ್ಲಿ ದುಡಿಯುತ್ತಿದ್ದರು. ನಂದನ್ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಇಂಡಿಯಾ ಗೇಟ್ ನಲ್ಲಿಯ ತಾತ್ಕಾಲಿಕ ಶಿಬಿರದಲ್ಲಿ ವಾಸವಿದ್ದಾರೆ.

Similar News