ಪ್ರಯಾಣಿಕರನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಿಟ್ಟು ಹಾರಿದ ಗೋ ಫಸ್ಟ್ ಗೆ 10 ಲಕ್ಷ ರೂ. ದಂಡ
ಹೊಸದಿಲ್ಲಿ, ಜ. 27: ಈ ತಿಂಗಳ ಆರಂಭದಲ್ಲಿ ಗೋ ಫಸ್ಟ್ ವಿಮಾನ(Go first flight) ಬೆಂಗಳೂರು ವಿಮಾನ ನಿಲ್ದಾಣದಲ್ಲಿ 50ಕ್ಕಿಂತಲೂ ಅಧಿಕ ಪ್ರಯಾಣಿಕರನ್ನು ಬಿಟ್ಟು ದಿಲ್ಲಿಗೆ ಹಾರಿದ ಘಟನೆಗೆ ಸಂಬಂಧಿಸಿ ಗೋ ಫಸ್ಟ್ ವಿಮಾನ ಯಾನ ಸಂಸ್ಥೆಗೆ ನಾಗರಿಕ ವಿಮಾನ ಯಾನ ಮಹಾ ನಿರ್ದೇಶನಾಲಯ 10 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಜನವರಿ 9ರಂದು ಗೋ ಫಸ್ಟ್ ವಿಮಾನ 55ಕ್ಕೂ ಅಧಿಕ ಪ್ರಯಾಣಿಕರನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಿಟ್ಟು ಅವರ ಲಗೇಜ್ ನೊಂದಿಗೆ ದಿಲ್ಲಿಗೆ ಹಾರಿತ್ತು. ಈ ಘಟನೆ ಹಿನ್ನೆಲೆಯಲ್ಲಿ ಗೋ ಫಸ್ಟ್ ವಿಮಾನ ಯಾನ ಸಂಸ್ಥೆಗೆ ನಾಗರಿಕ ವಿಮಾನ ಯಾನ ಮಹಾ ನಿರ್ದೇಶನಾಲಯ ಶೋಕಾಸ್ ನೋಟಿಸ್ ನೀಡಿತ್ತು.
ಇದಕ್ಕೆ ಗೋ ಫಸ್ಟ್ ವಿಮಾನ ಯಾನ ಸಂಸ್ಥೆ ಜನವರಿ 25ರಂದು ಪ್ರತಿಕ್ರಿಯೆ ಸಲ್ಲಿಸಿತ್ತು. ಗೋ ಫಸ್ಟ್ ಸಲ್ಲಿಸಿದ ಪ್ರತಿಕ್ರಿಯೆಯಲ್ಲಿ, ವಿಮಾನದಲ್ಲಿ ಪ್ರಯಾಣಿಕರು ಹತ್ತುವ ಕುರಿತು ಟರ್ಮಿನಲ್ ಕೋ-ಆರ್ಡಿನೇಟರ್ (ಟಿಸಿ), ವಾಣಿಜ್ಯ ಸಿಬ್ಬಂದಿ ಹಾಗೂ ವಿಮಾನದ ಸಿಬ್ಬಂದಿ ನಡುವೆ ಸಂವಹನ ಹಾಗೂ ಸಂಯೋಜನೆಯ ಕೊರತೆಯನ್ನು ಬಹಿರಂಗಪಡಿಸಿದೆ.