ಮಲಾಡ್ ಗಾರ್ಡನ್ ನ ಟಿಪ್ಪು ಸುಲ್ತಾನ್ ಹೆಸರು ತೆಗೆಯಲಾಗಿದೆ: ಉಸ್ತುವಾರಿ ಸಚಿವ ಮಂಗಲ್ ಪ್ರಭಾತ್ ಲೋಧಾ

Update: 2023-01-27 17:33 GMT

ಮುಂಬೈ, ಜ. 27: ನಗರದ ಮಲಾಡ್ ಪಶ್ಚಿಮ ಪ್ರದೇಶದಲ್ಲಿರುವ ಉದ್ಯಾನದ ಟಿಪ್ಪು ಸುಲ್ತಾನ್(Tipu Sultan) ಹೆಸರನ್ನು ತೆಗೆಯಲಾಗಿದೆ ಎಂದು ಮುಂಬೈ ಉಪ ನಗರ ಜಿಲ್ಲೆಯ ಉಸ್ತುವಾರಿ ಸಚಿವ ಮಂಗಲ್ ಪ್ರಭಾತ್ ಲೋಧಾ(Mangal Prabhat Lodha) ಅವರು ಶುಕ್ರವಾರ ಹೇಳಿದ್ದಾರೆ. ಈ ಹಿಂದಿನ ಮಹಾ ವಿಕಾಸ ಅಘಾಡಿ (MVA) ಸರಕಾರ ಈ ಉದ್ಯಾನಕ್ಕೆ ಟಿಪ್ಪು ಸುಲ್ತಾನ್ ರ ಹೆಸರು ಇರಿಸಿತ್ತು.ಆದರೆ, ಟಿಪ್ಪು ಸುಲ್ತಾನ್ ಹೆಸರು ಇರಿಸಿರುವುದನ್ನು ಆಗ ಪ್ರತಿಪಕ್ಷವಾಗಿದ್ದ ಬಿಜೆಪಿ ವಿರೋಧಿಸಿತ್ತು.

ಮಹಾರಾಷ್ಟ್ರದ ಪ್ರವಾಸೋದ್ಯಮ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಲೋಧಾ ಶುಕ್ರವಾರ ಟ್ವಿಟರ್ನಲ್ಲಿ, ‘‘ಅಂತಿಮವಾಗಿ ಹೋರಾಟ ಯಶಸ್ವಿಯಾಗಿದೆ. ಕಳೆದ ವರ್ಷ ಎಂವಿಎ ಸರಕಾರದ ವಿರುದ್ಧ ಹಿಂದೂ ಸಮುದಾಯದ ಚಳುವಳಿ ಮತ್ತು ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಬಿಜೆಪಿ ಸಂಸದರಾಗಿದ್ದ ಗೋಪಾಲ ಶೆಟ್ಟಿ(Gopal Shetty) ಅವರು ಮಂಡಿಸಿದ ಬೇಡಿಕೆಯನ್ನು ಗಮನದಲ್ಲಿ ಇರಿಸಿಕೊಂಡು ಮಲಾಡ್ ನಲ್ಲಿರುವ ಉದ್ಯಾನದ ಟಿಪ್ಪು ಸುಲ್ತಾನ್ ಹೆಸರನ್ನು ತೆಗೆದು ಹಾಕಲು ನಾವು ಆದೇಶ ಹೊರಡಿಸಿದ್ದೇವೆ.

ಎಂವಿಎ ಅಧಿಕಾರದ ಅವಧಿಯಲ್ಲಿ ಈ ಉದ್ಯಾನಕ್ಕೆ ಟಿಪ್ಪು ಸುಲ್ತಾನ್ ಹೆಸರು ಇರಿಸಲಾಗಿತ್ತು’’ ಎಂದು ಪೋಸ್ಟ್ ಮಾಡಿದ್ದಾರೆ. ಮಲಾಡ್ ಉದ್ಯಾನದ ಹೆಸರು ಬದಲಾಯಿಸುವಂತೆ ಆಗ್ರಹಿಸಿ ಶೆಟ್ಟಿ ಹಾಗೂ ಲೋಧಾ ನೇತೃತ್ವದಲ್ಲಿ ಬಿಜೆಪಿ ನಾಯಕರು ಕಳೆದ ವರ್ಷ ಜನವರಿ 26ರಂದು ಸಾಮೂಹಿಕ ಪ್ರತಿಭಟನೆ ನಡೆಸಿದ್ದರು. 

Similar News