ಅನ್ಯರಾಜ್ಯ ಇಲಾಖಾ ಮಟ್ಟದಲ್ಲಿ ಸಮನ್ವಯ ಸಭೆಗೆ ನಿರ್ಣಯ: ಕರಾವಳಿ ಕಾವಲು ಪೊಲೀಸರಿಂದ ಮೀನುಗಾರ ಮುಖಂಡರ ಸಭೆ

Update: 2023-01-28 15:00 GMT

ಮಲ್ಪೆ: ಮಲ್ಪೆ ಕರಾವಳಿ ಕಾವಲು ಪೊಲೀಸ್ ಇದರ ಕೇಂದ್ರ ಕಛೇರಿಯಲ್ಲಿ ಉಡುಪಿ ಜಿಲ್ಲಾ ಮೀನುಗಾರ ಮುಖಂಡರ ಸಭೆ ಕರಾವಳಿ ಕಾವಲು ಪೊಲೀಸ್ ಎಸ್ಪಿ ಅಬ್ದುಲ್ ಅಹದ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರಗಿತು.

ಮಲ್ಪೆ ಮೀನುಗಾರರ ಸಂಘ ಅಧ್ಯಕ್ಷ ದಯಾನಂದ ಸುವರ್ಣ ಅಂತರ್ ರಾಜ್ಯಗಳಲ್ಲಿ ಮೀನುಗಾರಿಕೆ ಮಾಡುವ ಸಮಯ ಆಗುವ ತೊಂದರೆಗಳ ಬಗ್ಗೆ ರಾಜ್ಯಮಟ್ಟದ ಮೀನುಗಾರರ ಸಮನ್ವಯ ಸಭೆ ನಡೆಸುವಂತೆ ಕೋರಿದರು.  ಅನ್ಯರಾಜ್ಯದ ಮೀನುಗಾರಿಕೆ ಇಲಾಖೆಯು ಕರ್ನಾಟಕದ ಬೋಟುಗಳಿಗೆ ಹೆಚ್ಚಿನ ಮೊತ್ತದ ದಂಡ ವಿಧಿಸುತ್ತಿದೆ. ತಾಂತ್ರಿಕ ಸಮಸ್ಯೆ, ಆರೋಗ್ಯ ಸಮಸ್ಯೆ ಮತ್ತು ನೈಸರ್ಗಿಕ ವಿಕೋಪದ ಸಮಯದಲ್ಲಿ ಅಲ್ಲಿಯ ಬಂದರು ಒಳಗಡೆ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲವೆಂಬುದಾಗಿ ಆರೋಪಿಸಿದರು.

ಅನ್ಯ ರಾಜ್ಯಗಳ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಮೀನುಗಾರಿಕಾ ಮುಖಂಡರೊಂದಿಗೆ ಸಮನ್ವಯ ಸಭೆಯನ್ನು ನಡೆಸಬೇಕೆಂದು ಮೀನುಗಾರರು ಇದೇ ಸಂದರ್ಭದಲ್ಲಿ ವಿನಂತಿಸಿದರು. ಅಲ್ಲದೇ ಈ ಬಗ್ಗೆ ಅನ್ಯರಾಜ್ಯದ ಇಲಾಖೆ ಮಟ್ಟದಲ್ಲಿ ಮೀನುಗಾರಿಕಾ ಮುಖಂಡರ ಸಮನ್ವಯ ಸಭೆಯನ್ನು ನಡೆಸುವ ಬಗ್ಗೆ ಮೇಲಾಧಿಕಾರಿಗಳಿಗೆ ಪತ್ರ ಬರೆಯುವ ಬಗ್ಗೆ ಸಭೆಯಲ್ಲಿ ನಿರ್ಣಯಿಸ ಲಾಯಿತು.

ಮೀನುಗಾರಿಕಾ ಬೋಟಿನಲ್ಲಿ ಮೀನುಗಾರರು ತ್ಯಾಜ್ಯವನ್ನು ಸಮುದ್ರಕ್ಕೆ ಎಸೆಯುತ್ತಿದ್ದು, ಇದರ ಸೂಕ್ತ ವಿಲೇವಾರಿ ಮಾಡುವ ಬಗ್ಗೆ ಮೀನುಗಾರಿಕೆ ಸಂಘಟನೆಯವರು ಸ್ಥಳೀಯ ನಗರಸಭೆಗೆ ತಿಳಿಸಿ ತ್ಯಾಜ್ಯ ಸಂಗ್ರಹ ತೊಟ್ಟಿಗಳನ್ನು ಇಡುವ ಬಗ್ಗೆ ನಿರ್ಣಯಿಸಲಾಯಿತು. ಸಂಶಯಿತ ಹಾಗೂ ಅನುಮಾಸ್ಪದ ಬೋಟುಗಳ ಬಗ್ಗೆ ಮಾಹಿತಿ ನೀಡಿದವರಿಗೆ ಮತ್ತು ಸಮುದ್ರದಲ್ಲಿ ಜೀವರಕ್ಷಣೆ ಮಾಡಿದ ಮೀನುಗಾರರಿಗೆ ಸನ್ಮಾನ ಮಾಡುವ ಬಗ್ಗೆ ಚರ್ಚಿಸಲಾಯಿತು.

20 ಮೀಟರ್ ಉದ್ದಕ್ಕಿಂತ ಮೇಲ್ಪಟ್ಟ ಮೀನುಗಾರಿಕಾ ಬೋಟುಗಳಿಗೆ ಕಡ್ಡಾಯವಾಗಿ ಎ.ಐ.ಎಸ್.(ಚೈನಾ ಸೆಟ್ ಹೊರತುಪಡಿಸಿ) ಅಳವಡಿಸುವ ಬಗ್ಗೆ ಮತ್ತು ಎಲ್ಲಾ ಮೀನುಗಾರಿಕೆ ಬೋಟುಗಳಲ್ಲಿ ಕಡ್ಡಾಯವಾಗಿ ಜೀವ ರಕ್ಷಕ ಸಲಕರಣಿಗಳನ್ನು ಇಟ್ಟುಕೊಳ್ಳಬೇಕು ಮತ್ತು ಮೀನುಗಾರಿಕೆ ಸಮಯದಲ್ಲಿ ಲೈಫ್ ಜಾಕೆಟ್ ಧರಿಸುವ ಬಗ್ಗೆ ಸಭೆಯಲ್ಲಿ ತಿಳಿಸಲಾಯಿತು. ಮೀನುಗಾರಿಕೆ ಸಮಯ ದಲ್ಲಿ ಯಾವುದೇ ಅನಾಹುತ ಸಂಭವಿಸಿದರೆ ಸಿಎಸ್‌ಪಿ ಕಂಟ್ರೋಲ್ ರೂಂನ ’1093’ ಟೋಲ್ ಫ್ರೀ ನಂಬರ್‌ಗೆ ಮಾಹಿತಿ ನೀಡುವಂತೆ ಸೂಚಿಸಲಾಯಿತು.

ಆರೋಗ್ಯ ಇಲಾಖೆಯ ಡಾ. ಲತಾ ನಾಯಕ್, ಡಾ. ತೇಜಸ್ವಿ ಆಯುಷ್ಮಾನ್ ಭಾರತ್ ಯೋಜನೆ ಹಾಗೂ ಶರತ್ ರಾಜು ಯಶಸ್ವಿನಿ ಯೋಜನೆ ಹಾಗೂ ಅಂಚೆ ಇಲಾಖಾ ಅಧಿಕಾರಿ ಪೂರ್ಣಿಮಾ ಜನಾರ್ದನ ಹಾಗೂ ನಿಕಿಲ್ ರಾಜು ಫೋಸ್ಟಲ್ ಲೈಫ್ ಇನ್ಸೂರೆನ್ಸ್ ಕುರಿತು ಮಾಹಿತಿ ತಿಳಿಸಿದರು. ಅಗ್ನಿಶಾಮಕ ದಳದ ಪರವಾಗಿ ಫಯರ್‌ಮೆನ್ ಗಣೇಶ್ ಆಚಾರ್ ಬೋಟಿನಲ್ಲಿ ಯಾವ ವಿಧದ ಫಯರ್ ನಿಯಂತ್ರಣ ಸಲಕರಣೆಗಳನ್ನು ಅಳವಡಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಮೀನುಗಾರ ಮುಖಂಡರಾದ ಯಶಪಾಲ್ ಸುವರ್ಣ, ರವಿರಾಜ್ ಸುವರ್ಣ, ನಾಗರಾಜ್ ಸುವರ್ಣ, ಸುಭಾಶ ಎಸ್.ಮೆಂಡನ್, ಹರಿಶ್ಚಂದ್ರ ಕಾಂಚನ್, ವಿಕ್ರಂ ಸಾಲ್ಯಾನ್, ಪಾಂಡುರಂಗ ಕೋಟ್ಯಾನ್, ಸಂತೋಷ್ ಸಾಲ್ಯಾನ್, ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ಗುತ್ತಿಗೆದಾರ ಸುದೇಶ್ ಶೆಟ್ಟಿ, ನುರಿತ ಜೀವರಕ್ಷಕ ಈಶ್ವರ ಮಲ್ಪೆ ಹಾಜರಿದ್ದರು. ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಭಾಸ್ಕರ ಶೆಟ್ಟಿಗಾರ್ ವಂದಿಸಿದರು.

Similar News