ಅಂಗನವಾಡಿ ಅಮ್ಮಂದಿರ ಅಳಲೇಕೆ ಕೇಳಿಸುತ್ತಿಲ್ಲ ಸರಕಾರಕ್ಕೆ?
ವಾರ್ತಾಭಾರತಿ ಅವಲೋಕನ
ಮಗುವಿನ ಲಾಲನೆ, ಪಾಲನೆ, ಪೋಷಣೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ತೊಡಗುವುದು ಮಗುವೊಂದು ಅಂಗನವಾಡಿಗೆ ಬಂದ ಬಳಿಕ ಮಾತ್ರವಲ್ಲ. ಮಗುವಿನ ಬಗೆಗಿನ ಅಂಗನವಾಡಿ ಕಾರ್ಯ ಕರ್ತೆಯರ ಕಾಳಜಿ ಅದು ಗರ್ಭದಲ್ಲಿರುವಾಗಿನಿಂದ ಶುರುವಾಗುತ್ತದೆ. ಗರ್ಭಿಣಿಯರ ವಿವರ ಕಲೆಹಾಕುವುದು, ಯಾವ ತಿಂಗಳಲ್ಲಿ ಯಾವ ಚುಚ್ಚುಮದ್ದು, ಏನೇನು ಮಾತ್ರೆ, ಯಾವ ಪೌಷ್ಟಿಕ ಆಹಾರ ತೆಗೆದು ಕೊಳ್ಳಬೇಕು, ಸರಕಾರದಿಂದ ಸಿಗುವ ಸೌಲಭ್ಯಗಳೇನು ಎಂಬ ಮಾಹಿತಿಗಳನ್ನೆಲ್ಲ ನೀಡುವುದು ಇವರೇ.
ರಾಜ್ಯದಲ್ಲಿನ ಅಂಗನವಾಡಿ ಕಾರ್ಯಕರ್ತೆಯರದ್ದು ಮುಗಿ ಯದ ಹೋರಾಟ. ಅವರ ದುಡಿಮೆಯೂ ಹಾಗೆಯೇ. ಬದುಕು ಕಟ್ಟಿಕೊಳ್ಳಲಿಕ್ಕಾಗಿ ಅಂಗನವಾಡಿಯ ಕೆಲಸ ಮಾತ್ರವಲ್ಲದೆ ಬೇರೆ ಇಲಾಖೆಗಳ ಹತ್ತುಹಲವು ಕೆಲಸಗಳನ್ನೂ ಅವರು ಮಾಡಬೇಕು. ಆದರೆ ಬರುವ ಸಣ್ಣ ಗೌರವಧನವೂ ತಿಂಗಳಿಗೊಮ್ಮೆ ಕೈಸೇರದ ಸ್ಥಿತಿ. ಕೆಲಸಕ್ಕೊಂದು ಭದ್ರತೆಯೂ ಇಲ್ಲದ ಅನಿಶ್ಚಿತತೆ. ಇದರ ನಡುವೆಯೇಜಾರಿಯಾಗುತ್ತಿರುವ ಹೊಸ ಶಿಕ್ಷಣ ನೀತಿಯ ಅಪಾಯಗಳೇನೆಂಬುದು ಸ್ಪಷ್ಟವಿಲ್ಲ.
ರಾಜ್ಯದ 225 ತಾಲೂಕುಗಳಲ್ಲಿ 204 ಕಡೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಜಾರಿಯಲ್ಲಿದೆ. ಇವುಗಳಲ್ಲಿ 181 ಗ್ರಾಮಾಂತರ ಪ್ರದೇಶ ಗಳಾದರೆ, 12 ಗುಡ್ಡಗಾಡು ಪ್ರದೇಶಗಳಲ್ಲಿ ಹಾಗೂ ಇನ್ನು 11 ನಗರ ಪ್ರದೇಶಗಳಲ್ಲಿ ಈ ಯೋಜನೆ ಮುಖಾಂತರ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಒಟ್ಟು ಅಂಗನವಾಡಿ ಕೇಂದ್ರ ಗಳು 65,911. ಇವುಗಳಲ್ಲಿ 62,580 ಅಂಗನವಾಡಿ ಕೇಂದ್ರಗಳಾದರೆ, 3,331 ಮಿನಿ ಅಂಗನವಾಡಿ ಕೇಂದ್ರಗಳು. ನಾಲ್ಕು ವರ್ಷದೊಳಗಿನ ಸುಮಾರು 10ರಿಂದ 15 ಲಕ್ಷ ಮಕ್ಕಳಿಗೆ ಈ ಅಂಗನವಾಡಿ ಕೇಂದ್ರಗಳ ಸೌಲಭ್ಯ ಸಿಗುತ್ತಿದೆ. ಇಲ್ಲಿ ಮಕ್ಕಳ ಪಾಲನೆ ಪೋಷಣೆಯಲ್ಲಿ ತೊಡಗಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಗೋದು ಸಂಬಳವಲ್ಲ. ಬದಲಿಗೆ ಗೌರವಧನ. ಕಾರ್ಯಕರ್ತೆಯರಿಗೆ ಮಾಸಿಕ 11 ಸಾವಿರ ರೂ. ಗೌರವಧನವಿದ್ದರೆ, ಅಂಗನವಾಡಿ ಸಹಾಯಕಿ ಯರಿಗೆ ಮಾಸಿಕ 6 ಸಾವಿರ ರೂ. ಅದೂ ತಿಂಗಳು ತಿಂಗಳಿಗೆ ಬಿಡುಗಡೆ ಯಾಗುವುದಿಲ್ಲ. ಕೆಲವೊಮ್ಮೆ ಐದಾರು ತಿಂಗಳಗಳವರೆಗೂ ಕಾಯಬೇಕು. ರಾಜ್ಯಾದ್ಯಂತ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸೇರಿದರೆ ಒಂದು ಅಂದಾಜಿನ ಪ್ರಕಾರ ಸುಮಾರು 1.5 ಲಕ್ಷಕ್ಕೂ ಅಧಿಕ ಮಹಿಳೆಯರು ಈ ಸಣ್ಣ ಮೊತ್ತದ ಗೌರವಧನವನ್ನೇ ನೆಚ್ಚಿ ದುಡಿಯುತ್ತಿದ್ದಾರೆ.
ಸೇವೆ ಖಾಯಂ ಮಾಡಬೇಕು, 21 ಸಾವಿರ ಕನಿಷ್ಠ ವೇತನ ನೀಡಬೇಕು,ಮಿನಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಬೇಕು, ಸುಪ್ರೀಂಕೋರ್ಟ್ ಆದೇಶದಂತೆ ನಿವೃತ್ತ ಕಾರ್ಯ ಕರ್ತರಿಗೆ ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ಮತ್ತು ಪಿಂಚಣಿ ನೀಡಬೇಕು, ಇಎಸ್‌ಐ ಜಾರಿ ಮತ್ತು ತೀವ್ರ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸಂಬಳ ಸಹಿತ ರಜೆ ನೀಡಬೇಕು ಇವು ಅವರ ಮುಖ್ಯ ಬೇಡಿಕೆಗಳು.
ಅಂಗನವಾಡಿ ಕಾರ್ಯಕರ್ತೆಯರೆಂದರೆ ಸರಕಾರಕ್ಕೆ ದಿವ್ಯ ನಿರ್ಲಕ್ಷ್ಯ. ಆದರೆ ಅವರು ಮಾಡುತ್ತಿರುವ ಕೆಲಸ ಮಾತ್ರ ಸಣ್ಣದಲ್ಲ. ಮಕ್ಕಳಿಗೆ ಪ್ರಾಥಮಿಕ ಪೂರ್ವ ಶಿಕ್ಷಣ ಕೊಡುವಲ್ಲಿಂದ ಶುರುವಾಗಿ, ಸರಕಾರಕ್ಕೆ ಬೇಕಿರುವ ಅಗತ್ಯ ದಾಖಲೆ, ಅಂಕಿ ಅಂಶಗಳನ್ನು ಒದಗಿಸುವವರೆಗೆ ಅವರ ಕೆಲಸದ ಭಾರ ಅಧಿಕ.
ಆಹಾರ, ಆರೋಗ್ಯ, ಶಿಕ್ಷಣ ಯೋಜನೆಯಲ್ಲಿ ಅಂಗನವಾಡಿಗಳನ್ನು ಸಂಸ್ಥೆಗಳೆಂದೇ ಕರೆಯಬೇಕೆಂದೂ, ಆಹಾರ ಭದ್ರತಾ ಕಾಯ್ದೆ ಹಾಗೂ ಕಡ್ಡಾಯ ಶಿಕ್ಷಣ ಕಾಯ್ದೆಯ ಸಮರ್ಪಕ ಜಾರಿಯಲ್ಲಿ ಇವರ ಪಾಲು ದೊಡ್ಡದು ಎಂದೂ ಸುಪ್ರೀಂ ಕೋರ್ಟ್ ಕೂಡ ಹೇಳಿದೆ. 1972ರ ಗ್ರಾಚ್ಯುಟಿ ಕಾಯ್ದೆಯಂತೆ ಯಾವುದೇ ಸಂಸ್ಥೆಯಲ್ಲಿ ಕನಿಷ್ಠ 5 ವರ್ಷ ಕೆಲಸ ಮಾಡಿದರೆ ಗ್ರಾಚ್ಯುಟಿಗೆ ಅರ್ಹರಾಗುತ್ತಾರೆ. ಅಂಗನವಾಡಿ ಕಾರ್ಯಕರ್ತೆಯರ ಆರು ವರ್ಷಗಳ ನಿರಂತರ ಹೋರಾಟದ ಫಲವಾಗಿ 2022 ಎಪ್ರಿಲ್ 25ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. 2009-10ರ ಕಡ್ಡಾಯ ಶಿಕ್ಷಣ ಕಾಯ್ದೆ ಮತ್ತು 2013ರ ಆಹಾರ ಭದ್ರತಾ ಕಾಯ್ದೆಯ ಜಾರಿಗಾಗಿ ಅಂಗನವಾಡಿ ಕೇಂದ್ರಗಳು ಕೆಲಸ ಮಾಡುತ್ತಿರುವುದರಿಂದ ವಾಣಿಜ್ಯ ಮತ್ತು ಉದ್ದಿಮೆಗಳ ಕಾಯ್ದೆ- 1948ರ ಅಡಿ ಅಂಗನವಾಡಿ ಕೇಂದ್ರಗಳನ್ನು ಸಂಸ್ಥೆಗಳು ಎಂದು ಪರಿಗಣಿಸಬೇಕು, ಅದರಲ್ಲಿ ಕೆಲಸ ಮಾಡುವವರು ನೌಕರರು ಎಂದು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅವರು ಗ್ರಾಚ್ಯುಟಿ ಪಡೆಯಲು ಅರ್ಹರು ಎಂದಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಗ್ರಾಚ್ಯುಟಿ ಮೊತ್ತ ಪಾವತಿಸಲು ಆಸ್ಥೆ ತೋರುತ್ತಿಲ್ಲ ಎಂಬುದು ಅಂಗನವಾಡಿ ಕಾರ್ಯಕರ್ತೆಯರ ಆರೋಪ.
ಕಾರ್ಮಿಕ ಕಾನೂನು, ವೇತನಾ ಆಯೋಗ, ನಿರ್ದಿಷ್ಟ ಅಥವಾ ಕನಿಷ್ಠ ವೇತನ ನಿಯಮ ಯಾವುದೂ ಇವರಿಗೆ ಅನ್ವಯವಾಗುವುದಿಲ್ಲ. ಕಾರ್ಮಿಕರು ಅಥವಾ ನೌಕರರೆಂದು ಅವರನ್ನು ಕರೆಯಲಾಗುತ್ತಿಲ್ಲ. ಸ್ವಯಂಸೇವಕರು, ಕಾರ್ಯಕರ್ತೆಯರು, ಸಹಾಯಕಿಯರು ಎಂದು ಅವರನ್ನು ಕರೆಯಲಾಗುತ್ತದೆ.
ಮಗುವಿನ ಜನನದ ಬಳಿಕ ಬಾಣಂತಿಯ ಆರೈಕೆ ಮಾಡುವ ಕೆಲಸವನ್ನೂ ಗ್ರಾಮೀಣ ಭಾಗಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮಾಡುತ್ತಿದ್ದುದಿತ್ತು. ಆಮೇಲೆ ಮಗು ಮೂರು ತುಂಬಿ ಅಂಗನವಾಡಿಗೆ ಬಂದ ಬಳಿಕ ಅದರ ಊಟ, ನಿದ್ದೆ ಎಲ್ಲದರ ಕಾಳಜಿ ವಹಿಸೋದು ಇದೇ ಅಂಗನವಾಡಿ ಕಾರ್ಯಕರ್ತೆಯರು.
ಆದರೆ ಅವರ ನಿಜವಾದ ಕೆಲಸದ ಬದಲು ಬೇರೆ ಇಲಾಖೆಗಳ ಅದೆಷ್ಟೋ ಕೆಲಸಗಳು ಕೂಡ ಅವರ ಹೆಗಲಿಗೇರಿವೆ. ಮಕ್ಕಳು, ತಾಯಂದಿರ ಆರೋಗ್ಯ ಕಾಳಜಿಯ ಕೆಲಸಕ್ಕಿಂತ ಹೆಚ್ಚಾಗಿ ಬೇರೆ ಕೆಲಸಗಳನ್ನೂ ಅಂಗನವಾಡಿ ಕಾರ್ಯಕರ್ತೆಯರಿಗೆ ಹೊರಿಸಲಾಗಿದೆ. ಗ್ರಾಮದಲ್ಲಿ ಜನಿಸುವ ಮಕ್ಕಳ ಸಂಖ್ಯೆ, ಸಾವಿಗೀಡಾದ ಮಕ್ಕಳ ಸಂಖ್ಯೆ, ಗರ್ಭಿಣಿ, ಬಾಣಂತಿಯರ ಯೋಗಕ್ಷೇಮ, ಪಲ್ಸ್ ಪೋಲಿಯೊ ಕೆಲಸ, ಚುಚ್ಚುಮದ್ದು ಅಭಿಯಾನ, ಭಾಗ್ಯಲಕ್ಷ್ಮಿ, ಸ್ತ್ರೀ ಶಕ್ತಿ, ವಿಧವಾ ವೇತನ, ವೃದ್ಧಾಪ್ಯ ವೇತನ, ಮಾತೃ ವಂದನಾ, ಮಾತೃಪೂರ್ಣ ಯೋಜನೆಗೆ ಸಂಬಂಧಿಸಿದ ಹಲವಾರು ಕೆಲಸಗಳಿವೆ.
ಇವುಗಳ ಜೊತೆ ಅವರು ಇತರ ಕೆಲಸಗಳನ್ನೂ ಮಾಡಬೇಕಾಗಿದೆ. ಸುಮಾರು 48 ರಿಜಿಸ್ಟರ್‌ಗಳನ್ನು ಅವರು ತುಂಬಬೇಕಿರುತ್ತದೆ. ಮೊಬೈಲಿ ನಲ್ಲಿ ಮಾಹಿತಿ ಅಪ್ಡೇಟ್ ಮಾಡುವುದೂ ಅವರ ಹೆಗಲಿಗೇರಿದೆ. ಚುನಾವಣಾ ಕೆಲಸ, ಬಿಎಲ್‌ಒ ಕೆಲಸ, ಸರ್ವೇ, ಸ್ಕೌಟ್ ಆ್ಯಂಡ್ ಗೈಡ್, ಕಡೆಗೆ ಕೋಟಿಕಂಠ ಗಾಯನ, ಕೆಂಪೇಗೌಡ ಪ್ರತಿಮೆ ನಿರ್ಮಾಣ, ಪ್ರಧಾನಿ ಬರುವ ಕಾರ್ಯಕ್ರಮಕ್ಕೆ ಪ್ರೇಕ್ಷಕರಾಗಿ, ಖಾಲಿ ಕುರ್ಚಿ ಗಳನ್ನು ತುಂಬಿಸಬೇಕಾದ ಅನಿವಾರ್ಯತೆ, ಕಳಶ ಹೊರುವ ಮಹಿಳೆಯರಾಗಬೇಕಾಗುವುದು ಇವೆಲ್ಲದಕ್ಕೂ ಅಂಗನವಾಡಿ ಕಾರ್ಯಕರ್ತೆಯರೇ ಬೇಕು. ಎಲ್ಲರಿಗೂ ಸುಲಭಕ್ಕೆ ಸಿಗುವವರು ಅಂಗನವಾಡಿ ಕಾರ್ಯಕರ್ತೆಯರು.
ಮಿನಿ ಅಂಗನವಾಡಿ ಕೇಂದ್ರಗಳಲ್ಲಂತೂ ಅಡುಗೆಯನ್ನೂ ಕಾರ್ಯ ಕರ್ತೆಯರೇ ಮಾಡಬೇಕಿರುವ ಸ್ಥಿತಿಯಿದೆ ಎನ್ನಲಾಗುತ್ತದೆ. ಅಲ್ಲಿ ಸಹಾಯಕಿಯರು ಇರುವುದಿಲ್ಲ.
ಇಷ್ಟೆಲ್ಲ ಮಾಡಿದರೂ ಅವರನ್ನು ಸರಕಾರಿ ನೌಕರರೆಂದು ಪರಿಗಣಿಸಲು ಸರಕಾರ ಸಿದ್ಧವಿಲ್ಲ. ಅವರಿಂದ ಸಣ್ಣ ತಪ್ಪುಗಳಾದರೂ ಕೆಲಸ ದಿಂದ ವಜಾ ಮಾಡಲಾಗುತ್ತದೆ. ಸೇವಾ ಭದ್ರತೆ, ಜೀವನಸಂಜೆಯ ಭದ್ರತೆ, ಗ್ರಾಚ್ಯುಟಿ ಯಾವುದೂ ಇಲ್ಲ. ಬರಬೇಕಿರುವ ಸಣ್ಣ ಗೌರವ ಧನವೂ ಕಳೆದ ಮೂರು ತಿಂಗಳಿಂದ ಬಾಕಿಯಿದೆ ಎನ್ನಲಾಗುತ್ತಿದೆ.
ಮೋದಿ ಸರಕಾರ ಬಂದ ಮೇಲೆ ಸಮಗ್ರ ಶಿಶುಅಭಿವೃದ್ಧಿ ಯೋಜನೆಗೆ ಅನುದಾನವನ್ನೂ ಕಡಿತ ಮಾಡಲಾಗಿದೆ ಎಂಬುದು ಅವರ ಅಳಲು.
ಹೊಸ ಶಿಕ್ಷಣ ನೀತಿ ಪ್ರಕಾರ ಅಂಗನವಾಡಿ ಕಾರ್ಯಕರ್ತೆಯರ ಶೈಕ್ಷಣಿಕ ಅರ್ಹತೆಯಲ್ಲಿಯೂ ಕೆಲವು ಬದಲಾವಣೆ ತರಲಾಗಿದೆ. ಅಂಗನ ವಾಡಿ ಕಾರ್ಯಕರ್ತೆಯರ ಹುದ್ದೆಗೆ ಪಿಯು ಹಾಗೂ ಸಹಾಯಕರ ಹುದ್ದೆಗಳಿಗೆ ಎಸೆಸೆಲ್ಸಿ ವಿದ್ಯಾರ್ಹತೆ ಕಡ್ಡಾಯಗೊಳಿಸಲಾಗುತ್ತಿದೆ. ಈ ಹಿಂದೆ ಕಾರ್ಯಕರ್ತೆಯರ ಹುದ್ದೆಗೆ ಎಸೆಸೆಲ್ಸಿ, ಸಹಾಯಕಿಯರಿಗೆ 7ನೇ ತರಗತಿ ಮಾನದಂಡವಿತ್ತು. ಈ ಹಿಂದೆ ನೇಮಕಗೊಂಡವರ ಕೆಲಸಕ್ಕೆ ಈ ನಿಯಮದಿಂದ ತೊಂದರೆ ಇಲ್ಲವೆನ್ನಲಾಗುತ್ತಿದೆಯಾದರೂ, ಭಡ್ತಿಯ ವಿಚಾರ ಬಂದಾಗ ಇದನ್ನು ಅನುಸರಿಸಲಾಗುತ್ತದೆ. ನೇಮಕ ಗೊಂಡಿರುವವರಲ್ಲಿ ಶೇ.15ರಷ್ಟು ಮಂದಿ ಮಾತ್ರ ಎಸೆಸೆಲ್ಸಿವರೆಗೆ ವ್ಯಾಸಂಗ ಮಾಡಿರುವ ಸಾಧ್ಯತೆ ಇದೆ. ಹೀಗಾಗಿ, 61,000 ಸಹಾಯಕಿಯರ ಭಡ್ತಿಗೆ ವಿದ್ಯಾರ್ಹತೆ ಪರಿಗಣಿಸುವುದು ಸರಿಯಲ್ಲ ಎಂಬ ಆಕ್ಷೇಪ ವ್ಯಕ್ತವಾಗುತ್ತಿದೆ. ಎನ್‌ಇಪಿ ಹಿನ್ನೆಲೆಯಲ್ಲಿ ಇನ್ನೊಂದು ವಿಚಾರವೂ ಈಗ ಚರ್ಚೆ ಯಾಗುತ್ತಿದೆ. ಅಂಗನವಾಡಿಗಳ ಜೊತೆಗೆ ಒಂದು ಮತ್ತು 2ನೇ ತರಗತಿ ಗಳನ್ನು ಸಂಯೋಜಿಸಿ ಶಾಲಾ ಸಾಂಸ್ಥಿಕ ಸ್ವರೂಪ ಕೊಡಬೇಕು, ಅಂಗನ ವಾಡಿ ಕಾರ್ಯಕರ್ತೆಯರನ್ನು ಶಿಕ್ಷಕಿಯರೆಂದು ಪರಿಗಣಿಸಬೇಕು ಎನ್ನುವುದು ಎನ್‌ಇಪಿ ಮಾಡಿರುವ ಶಿಫಾರಸು. ಅದನ್ನು ಉತ್ತರಾ ಖಂಡ ರಾಜ್ಯ ಈಗಾಗಲೇ ಜಾರಿಗೆ ತಂದಿದೆ. ಕರ್ನಾಟಕ ಕೂಡ ಇದರ ಅನುಷ್ಠಾನಕ್ಕೆ ಮುಂದಾಗಿರುವ ವರದಿಯಿದೆ.
ಆಗಲಾದರೂ ತಮ್ಮ ಸ್ಥಿತಿ ಸುಧಾರಿಸಬಹುದೇ ಅಥವಾ ಈ ನೀತಿ ಮತ್ತೇನೋ ತೊಡಕನ್ನು ತಂದಿಟ್ಟು ತಮ್ಮನ್ನು ಅತಂತ್ರವಾಗಿಸುವುದೇ ಎಂಬ ಆತಂಕವೂ ಅಂಗನವಾಡಿ ಕಾರ್ಯಕರ್ತೆಯರನ್ನು ಕಾಡುತ್ತಿದೆ. ಮಗುವಿನ ಲಾಲನೆ, ಪಾಲನೆ, ಪೋಷಣೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ತೊಡಗುವುದು ಮಗುವೊಂದು ಅಂಗನವಾಡಿಗೆ ಬಂದ ಬಳಿಕ ಮಾತ್ರವಲ್ಲ. ಮಗುವಿನ ಬಗೆಗಿನ ಅಂಗನವಾಡಿ ಕಾರ್ಯಕರ್ತೆಯರ ಕಾಳಜಿ ಅದು ಗರ್ಭದಲ್ಲಿರುವಾಗಿನಿಂದ ಶುರುವಾಗುತ್ತದೆ. ಗರ್ಭಿಣಿಯರ ವಿವರ ಕಲೆಹಾಕುವುದು, ಯಾವ ತಿಂಗಳಲ್ಲಿ ಯಾವ ಚುಚ್ಚುಮದ್ದು, ಏನೇನು ಮಾತ್ರೆ, ಯಾವ ಪೌಷ್ಟಿಕ ಆಹಾರ ತೆಗೆದು ಕೊಳ್ಳಬೇಕು, ಸರಕಾರದಿಂದ ಸಿಗುವ ಸೌಲಭ್ಯಗಳೇನು ಎಂಬ ಮಾಹಿತಿಗಳನ್ನೆಲ್ಲ ನೀಡುವುದು ಇವರೇ.