ಕೇಂದ್ರ ಸರ್ಕಾರದ ಸುಮಾರು 800 ಮೂಲಸೌಕರ್ಯ ಯೋಜನೆಗಳು ವಿಳಂಬ: ಭೂಸಾರಿಗೆ ಮತ್ತು ಹೆದ್ದಾರಿ ಇಲಾಖೆಯದ್ದೇ ಮೇಲುಗೈ

Update: 2023-01-30 13:50 GMT

ಹೊಸದಿಲ್ಲಿ: ಕೇಂದ್ರ ಸರ್ಕಾರದ ಸುಮಾರು 835 ಮೂಲಸೌಕರ್ಯ ಯೋಜನೆಗಳು ನಿಗದಿತ ಅವಧಿಗಿಂತ ವಿಳಂಬವಾಗಿದ್ದು, ಈ ಪೈಕಿ, ರಸ್ತೆ, ಸಾರಿಗೆ ಮತ್ತು ಹೆದ್ದಾರಿ ವಲಯಕ್ಕೆ ಸೇರಿದ ಯೋಜನೆಗಳೇ ಹೆಚ್ಚು ವಿಳಂಬಗೊಂಡಿವೆ ಎಂದು ಮೂಲಸೌಕರ್ಯ ಮತ್ತು ಯೋಜನಾ ಮೇಲುಸ್ತುವಾರಿ ವಿಭಾಗ ಬಿಡುಗಡೆ ಮಾಡಿರುವ ಸರ್ಕಾರಿ ವರದಿಯಲ್ಲಿ ನಮೂದಿಸಲಾಗಿದೆ ಎಂದು financialexpress.com ವರದಿ ಮಾಡಿದೆ.

ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯದಡಿ ಕಾರ್ಯನಿರ್ವಹಿಸುವ ಮೂಲಸೌಕರ್ಯ ಮತ್ತು ಯೋಜನಾ ಮೇಲುಸ್ತುವಾರಿ ವಿಭಾಗವು, ರೂ. 150 ಕೋಟಿಗಿಂತ ಹೆಚ್ಚು ವೆಚ್ಚದ ಯೋಜನಾ ಪ್ರಗತಿಯ ಮೇಲುಸ್ತುವಾರಿ ನಡೆಸುತ್ತದೆ.

ಡಿಸೆಂಬರ್, 2022ರಲ್ಲಿ ಬಿಡುಗಡೆಯಾಗಿರುವ ಮೂಲಸೌಕರ್ಯ ಮತ್ತು ಯೋಜನಾ ಮೇಲುಸ್ತುವಾರಿ ವಿಭಾಗದ ವರದಿಯ ಪ್ರಕಾರ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ವಲಯದಡಿ ಅನುಷ್ಠಾನಗೊಳ್ಳುತ್ತಿರುವ 428 ಯೋಜನೆಗಳು ನಿಗದಿತ ಅವಧಿಗಿಂತ ವಿಳಂಬಗೊಂಡಿವೆ. ಇದರ ನಂತರ ರೈಲ್ವೆ ವಲಯದ 117, ಪೆಟ್ರೋಲಿಯಂ ವಲಯದ 88, ಕಲ್ಲಿದ್ದಲು ವಲಯದ 36, ಇಂಧನ ವಲಯದ 55, ಜಲ ಸಂಪನ್ಮೂಲ ವಲಯದ 27, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವಲಯದ 4, ನಗರಾಭಿವೃದ್ಧಿ ವಲಯದ 15, ನಾಗರಿಕ ವಿಮಾನ ಯಾನ ವಲಯದ 24 ಹಾಗೂ ಮತ್ತಿತರ ವಲಯದ ಯೋಜನೆಗಳು ವಿಳಂಬಗೊಂಡಿವೆ.

ಈ 1,438 ಯೋಜನೆಗಳ ಒಟ್ಟಾರೆ ಅನುಷ್ಠಾನ ಮೊತ್ತವು ರೂ. 20,35,794.75 ಕೋಟಿಯಾಗಿದ್ದು, ಅವು ಮುಕ್ತಾಯಗೊಳ್ಳುವ ವೇಳೆಗೆ ರೂ. 24,86,069.52 ಕೋಟಿಗೆ ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಇದರ ಪ್ರಕಾರ, ನಿಗದಿತ ವೆಚ್ಚಕ್ಕಿಂತ ರೂ. 4,50,274.77 ಕೋಟಿ ಅಧಿಕ ವೆಚ್ಚವಾಗಲಿದೆ.

"1,438 ಯೋಜನೆಗಳ ಪೈಕಿ 8 ಯೋಜನೆಗಳು ನಿಗದಿತ ಅವಧಿಗಿಂತ ಮುಂಚಿತವಾಗಿ ಮುಕ್ತಾಯವಾಗಲಿದ್ದು, 253 ಯೋಜನೆಗಳು ನಿಗದಿತ ಅವಧಿಗೆ, 835 ಯೋಜನೆಗಳು ನಿಗದಿತ ಅವಧಿಗಿಂತ ವಿಳಂಬವಾಗಿ ಮುಗಿಯಲಿವೆ‌. ಈ ಪೈಕಿ 343 ಯೋಜನಾ ವೆಚ್ಚ ಏರಿಕೆಯಾಗಲಿದ್ದರೆ, 165 ಯೋಜನೆಗಳ ಯೋಜನಾ ವೆಚ್ಚ ಮತ್ತು ಅವಧಿಗಳೆರಡೂ ನಿಗದಿತ ವೆಚ್ಚ ಮತ್ತು ಅವಧಿಗಿಂತ ಹೆಚ್ಚಾಗಲಿವೆ ಎಂದು ವರದಿಯಾಗಿದೆ" ಎಂದು ಮೂಲಸೌಕರ್ಯ ಮತ್ತು ಯೋಜನಾ ಮೇಲುಸ್ತುವಾರಿ ವಿಭಾಗದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Similar News