ತಮಿಳುನಾಡು: ದೇವಸ್ಥಾನ ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಿದ ದಲಿತರು; ಐತಿಹಾಸಿಕ ವಿದ್ಯಮಾನ

ಪ್ರಬಲ ಜಾತಿಗಳ ಜನರಿಂದ ಪ್ರತಿಭಟನೆ

Update: 2023-01-30 18:19 GMT

ತಿರುವನ್ನಮಲೈ, (ತಮಿಳುನಾಡು): ಐತಿಹಾಸಿಕ ವಿದ್ಯಮಾನವೊಂದರಲ್ಲಿ, ತಮಿಳುನಾಡಿನ (TamilNadu) ತಿರುವನ್ನಮಲೈ (Tiruvannamalai) ಜಿಲ್ಲೆಯಲ್ಲಿ ಸೋಮವಾರ ಪರಿಶಿಷ್ಟ ಜಾತಿಯೊಂದರ ಸಮುದಾಯದ (Dalit people) 200ಕ್ಕೂ ಅಧಿಕ ಜನರು ದೇವಾಲಯವೊಂದಕ್ಕೆ (temple)  ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಿದರು. ಈ ಸಮುದಾಯದ ಜನರಿಗೆ ಸುಮಾರು ಎಂಟು ದಶಕಗಳ ಕಾಲ ಈ ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸಲಾಗಿತ್ತು.

ಪೊಲೀಸರು (Police) ಮತ್ತು ಸರಕಾರಿ ಅಧಿಕಾರಿಗಳು ದಲಿತರನ್ನು ದೇವಸ್ಥಾನದೊಳಗೆ ಕರೆದು ಕೊಂಡು ಹೋದರು. ಮಹಿಳೆಯರು ದೇವತೆಗಾಗಿ ಹೂವಿನ ಹಾರಗಳನ್ನು ಮತ್ತು ಪೊಂಗಲ್ ತಯಾರಿಸಲು ಕಟ್ಟಿಗೆ ಮತ್ತು ಇತರ ಸಾಮಾಗ್ರಿಗಳನ್ನು ಒಯ್ದರು ಎಂದು ವರದಿಯಾಗಿದೆ.

‘‘ನಾನು ಇಲ್ಲೇ ಹುಟ್ಟಿ ಬೆಳೆದಿದ್ದೇನೆ. ಆದರೆ ನನಗೆ ದೇವಸ್ಥಾನದ ಒಳಗೆ ಪ್ರವೇಶ ನೀಡಿರಲಿಲ್ಲ. ಈ ಸಮಾನತೆ ಪ್ರತಿ ದಿನವೂ ಇರಬೇಕು’’ ಎಂದು ಕಾಜೇಜು ವಿದ್ಯಾರ್ಥಿನಿ ಗೋಮತಿ ಹೇಳಿದರು.

‘‘ಈಗಲೂ ಪ್ರಬಲ ಜಾತಿಗಳ ಜನರು ವಿರೋಧಿಸುತ್ತಿದ್ದಾರೆ. ನಾವು 400 ಪೊಲೀಸರನ್ನು ನಿಯೋಜಿಸಿದ್ದೇವೆ. ಯಾವುದಾದರೂ ಅನುಚಿತ ಘಟನೆ ನಡೆದರೆ ಕಾನೂನು ತನ್ನದೇ ಹಾದಿಯಲ್ಲಿ ಸಾಗುತ್ತದೆ’’ ಎಂದು ವಲಯ ಡಿಐಜಿ ಎಮ್.ಎಸ್. ಮುತ್ತುಸಾಮಿ ಹೇಳಿದರು.

► ಪ್ರಬಲ ಜಾತಿಗಳ ಜನರಿಂದ ಪ್ರತಿಭಟನೆ

ಆದರೆ, ಶತಮಾನಗಳ ಜಾತಿ ತಾರತಮ್ಯ ಮತ್ತು ಶೋಷಣೆಯ ಮನೋಭಾವ ಸುಲಭದಲ್ಲಿ ಹೋಗುವುದಿಲ್ಲ. ಸೋಮವಾರ ದಲಿತರ ದೇವಸ್ಥಾನ ಪ್ರವೇಶದ ಸಂದರ್ಭದಲ್ಲಿ ಪ್ರಬಲ ಜಾತಿಗಳಿಗೆ ಸೇರಿದ ಸಾವಿರಕ್ಕೂ ಅಧಿಕ ಜನರು ದೇವಸ್ಥಾನದ ಸುತ್ತ ಜಮಾಯಿಸಿ ಪ್ರತಿಭಟಿಸಿದರು. ದಲಿತರಿಗೆ ಪ್ರವೇಶ ಕಲ್ಪಿಸಿದ ಅಧಿಕಾರಿಗಳ ವಿರುದ್ಧವೂ ಅವರು ಪ್ರತಿಭಟಿಸಿದರು.

ಪೊಲೀಸ್ ಸೂಪರಿಂಟೆಂಡೆಂಟ್ ಕಾರ್ತಿಕೇಯನ್ ನೇತೃತ್ವದಲ್ಲಿ ಪೊಲೀಸರು ಪ್ರತಿಭಟನಕಾರರೊಂದಿಗೆ ಮಾತುಕತೆ ನಡೆಸಿ ಅವರನ್ನು ಚದುರಿಸಿದರು. ಅಲ್ಲಲ್ಲಿ ಬ್ಯಾರಿಕೇಡ್ಗಳನ್ನು ಇರಿಸಿದರು. ‘‘ದಲಿತರ ಪ್ರವೇಶದಿಂದ ದೇವಸ್ಥಾನ ಅಪವಿತ್ರವಾಗುತ್ತದೆ’’ ಎಂದು ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ಮಹಿಳೆಯೊಬ್ಬರು ಹೇಳಿದರು.

Similar News