ಅದಾನಿ ಗ್ರೂಪ್ ನಲ್ಲಿ ಹೂಡಿಕೆ ಕುರಿತು ಎಲ್ಐಸಿ ಸ್ಪಷ್ಟೀಕರಣ

Update: 2023-01-30 17:55 GMT

ಹೊಸದಿಲ್ಲಿ: ಸರಕಾರಿ ಸ್ವಾಮ್ಯದ ಭಾರತೀಯ ಜೀವವಿಮಾ ನಿಗಮ (ಎಲ್ಐಸಿ)ವು ಅದಾನಿ ಗ್ರೂಪ್ ನಲ್ಲಿ ತನ್ನ ಹೂಡಿಕೆಗಳ ಕುರಿತು ಸೋಮವಾರ ಹೇಳಿಕೆಯೊಂದರಲ್ಲಿ ಸ್ಪಷ್ಟೀಕರಣವನ್ನು ನೀಡಿದೆ. 2022, ಡಿಸೆಂಬರ್ 31ಕ್ಕೆ ಇದ್ದಂತೆ ಅದಾನಿ ಗ್ರೂಪ್ ನ ಕಂಪನಿಗಳಲ್ಲಿ ಎಲ್ಐಸಿಯು ಶೇರುಗಳು ಮತ್ತು ಸಾಲದ ರೂಪದಲ್ಲಿ 35,917.31 ಕೋ.ರೂ.ಗಳ ಹೂಡಿಕೆಯನ್ನು ಹೊಂದಿದೆ. 2022,ಸೆ.30ಕ್ಕೆ ಇದ್ದಂತೆ ಎಲ್ಐಸಿಯ ನಿರ್ವಹಣೆಯಡಿ ಹೂಡಿಕೆಗಳ (ಎಯುಎಂ)ಒಟ್ಟು ಮೌಲ್ಯ 41.66 ಲಕ್ಷ ಕೋಟಿ ರೂ. ಗಳಿದ್ದು, ಹೀಗಾಗಿ ಅದಾನಿ ಗ್ರೂಪ್ ನಲ್ಲಿ ಎಲ್ಐಸಿಯ ಹೂಡಿಕೆಗಳ ಪ್ರಮಾಣ ಈ ದಿನಕ್ಕೆ ಇದ್ದಂತೆ ಎಲ್ಐಸಿಯ ಒಟ್ಟು ಎಎಯುಎಮ್ನ ಶೇ.0.975 ರಷ್ಟಿದೆ (ಬುಕ್ ವ್ಯಾಲ್ಯೂ ಪ್ರಕಾರ) ಎಂದು ಹೇಳಿಕೆಯು ತಿಳಿಸಿದೆ.

ಕಳೆದ ಹಲವು ವರ್ಷಗಳಲ್ಲಿ ಎಲ್ಐಸಿಯಿಂದ ಅದಾನಿ ಗ್ರೂಪ್ ನ ಎಲ್ಲ ಕಂಪನಿಗಳ ಶೇರುಗಳ ಒಟ್ಟು ಖರೀದಿ ಮೌಲ್ಯ 30,127 ಕೋಟಿ ರೂ.ಗಳಾಗಿದ್ದು 2023,ಜ.27ರಂದು ಶೇರು ಮಾರುಕಟ್ಟೆಗಳ ವಹಿವಾಟು ಅವಧಿಯು ಮುಗಿದ ಬಳಿಕ ಈ ಶೇರುಗಳ ಮಾರುಕಟ್ಟೆ ಮೌಲ್ಯ 56,142 ಕೋಟಿ ರೂ.ಗಳಾಗಿದ್ದವು. ಜ.30ಕ್ಕೆ ಇದ್ದಂತೆ ಅದಾನಿ ಗ್ರೂಪ್ ನಲ್ಲಿ ಹೂಡಿಕೆ ಮಾಡಲಾಗಿರುವ ಒಟ್ಟು ಮೊತ್ತ 36,474.78 ಕೋ.ರೂ.ಗಳಾಗಿವೆ. ಆದರೂ ಈ ಎಲ್ಲ ಹೂಡಿಕೆಗಳನ್ನು ಕ್ರಮೇಣ ಮಾಡಲಾಗಿದೆ. ಅಲ್ಲದೆ ಎಲ್ಐಸಿ ಹೊಂದಿರುವ ಎಲ್ಲ ಅದಾನಿ ಸಾಲ ಭದ್ರತೆಗಳು ಮತ್ತು ಹೆಚ್ಚಿನ ರೇಟಿಂಗ್ ಹೊಂದಿದ್ದು,ಇದು ಎಲ್ಲ ಜೀವವಿಮೆ ಕಂಪನಿಗಳಿಗೆ ಅನ್ವಯಿಸುವ ಐಆರ್ಡಿಎಐ ಹೂಡಿಕೆ ನಿಯಮಗಳಿಗೆ ಅನುಗುಣವಾಗಿದೆ.

‘ಸಾಮಾನ್ಯ ವ್ಯವಹಾರ ಕ್ರಮದಲ್ಲಿ ಎಲ್ಐಸಿ ತನ್ನ ಕಂಪನಿ ಮತ್ತು ಕೈಗಾರಿಕಾ ಸಮೂಹ ನಿರ್ದಿಷ್ಟ ಹೂಡಿಕೆಗಳ ವಿವರಗಳನ್ನು ಹಂಚಿಕೊಳ್ಳುವುದಿಲ್ಲ. ಆದರೆ ಅದಾನಿ ಗ್ರೂಪ್ ನಲ್ಲಿ ಎಲ್ಐಸಿಯ ಹೂಡಿಕೆಗಳ ಕುರಿತು ಮಾಧ್ಯಮಗಳಲ್ಲಿಯ ವಿವಿಧ ಲೇಖನಗಳು ಮತ್ತು ವೀಡಿಯೊ ಚಾನೆಲ್ಗಳಲ್ಲಿ ಕೆಲವು ಮಾಹಿತಿಗಳು ಹರಿದಾಡುತ್ತಿರುವುದರಿಂದ ಸದ್ರಿ ಸಮೂಹದ ಶೇರುಗಳು ಮತ್ತು ಸಾಲಗಳಲ್ಲಿ ನಮ್ಮ ಹೂಡಿಕೆಗಳ ವಾಸ್ತವ ಸ್ಥಿತಿಯನ್ನು ಮುಂದಿಡಲು ನಾವು ಈ ಮಾಹಿತಿಯನ್ನು ಬಿಡುಗಡೆಗೊಳಿಸುತ್ತಿದ್ದೇವೆ ’ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Similar News